Wednesday, 22nd January 2020

ಸಿದ್ದರಾಮಯ್ಯ ಸಮಾಜ ಒಡೆದ ಕಾರ್ಯಗಳು ಮಾತ್ರ ಜನರಿಗೆ ನೆನಪಿದೆ: ಶೋಭಾ ಕರಂದ್ಲಾಜೆ

ಚಿಕ್ಕಮಗಳೂರು: ಸಿದ್ದರಾಮಯ್ಯ ಅಂದರೆ ಟಿಪ್ಪು ಜಯಂತಿ ಮಾಡಿದರು, ಸಮಾಜ-ಸಮಾಜ ಒಡೆದರು, ಲಿಂಗಾಯುತ-ವೀರಶೈವರನ್ನ ಬೇರೆ ಮಾಡಿದರು ಎನ್ನುವುದನ್ನು ಬಿಟ್ಟರೆ ಜನರು ಬೇರೆ ಯಾವುದನ್ನು ನೆನಪಿಟ್ಟುಕೊಂಡಿಲ್ಲ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮಾಜಿ ಸಿಎಂ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಭಿವೃದ್ಧಿ ಕೆಲಸದಿಂದ ಜನರು ಸಿದ್ದರಾಮಯ್ಯನನ್ನ ನೆನಪಿಟ್ಟುಕೊಂಡಿಲ್ಲ. ಟಿಪ್ಪು ಜಯಂತಿ ಮಾಡಿದರು. ಸಮಾಜ-ಸಮಾಜ ಒಡೆದರು, ಲಿಂಗಾಯತ-ವೀರಶೈವರನ್ನ ಬೇರೆ ಮಾಡಿದರು ಎನ್ನುವುದನ್ನು ನೆನಪಿಟ್ಟುಕೊಂಡಿದ್ದಾರೆ. ಯಾಕೆಂದರೆ ಅವರು ಹೆಚ್ಚು ಅಭಿವೃದ್ಧಿ ಕೆಲಸ ಮಾಡಿಲ್ಲ. ಅವರ ನೇತೃತ್ವದ ಸರ್ಕಾರದ ಅವಧಿಯಲ್ಲಿ ಇಂತಹ ಒಳ್ಳೆ ಅಭಿವೃದ್ಧಿ ಕೆಲಸವಾಯ್ತು? ದೊಡ್ಡ ಪ್ರಾಜೆಕ್ಟ್ ಬಂತು ಎಂದು ಸಿದ್ದರಾಮಯ್ಯನನ್ನ ನೆನಪಿಟ್ಟುಕೊಂಡಿಲ್ಲ ಎಂದು ಟಾಂಗ್ ಕೊಟ್ಟರು.

ಸಿದ್ದರಾಮಯ್ಯನವರು ಹತಾಶರಾಗಿದ್ದಾರೆ. ಅವರ ಪಕ್ಷದೊಳಗೆ ಅವರು ಅಸ್ತಿತ್ವ ಕಳೆದುಕೊಳ್ಳುತ್ತಿದ್ದಾರೆ. ಮುನಿಯಪ್ಪ-ಸಿದ್ದರಾಮಯ್ಯ ಅವರು ಹೇಗೆ ಕಿತ್ತಾಡಿದ್ದಾರೆ ಎನ್ನುವುದನ್ನು ನಾವು ನೋಡಿದ್ದೇವೆ. ಈ ಒಂದು ಹತಾಶೆ ಮನೋಭಾವದಿಂದ ಅವರು ಮಾತನಾಡುತ್ತಿದ್ದಾರೆ. ಅಧಿಕಾರವಿದ್ದಾಗ ಕಾಂಗ್ರೆಸ್ ಏನು ಮಾಡಿದೆ ಎನ್ನುವುದನ್ನು ನಾವೇ ನೋಡಿದ್ದೇವೆ ಎಂದು ಕಿಡಿಕಾರಿದರು.

ಬಿಜೆಪಿಯಲ್ಲಿ ಯಾವುದೇ ಗುಂಪುಗಳಿಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡ್ತಿದ್ದೇವೆ ಎಂದು ಹೇಳಿದರು. ಹಾಗೆಯೇ ಕಾಂಗ್ರೆಸ್ಸಿಗರ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ. ಯಾಕೆಂದರೆ ಕಾಂಗ್ರೆಸ್ಸಿನವರು ಎನ್.ಡಿ.ಆರ್.ಎಫ್, ಹಾಗೂ ಎಸ್.ಟಿ.ಆರ್.ಎಫ್‍ನಲ್ಲಿ ರಾಜ್ಯಕ್ಕೆ ಎಷ್ಟು ದುಡ್ಡು ಕೊಟ್ಟಿದ್ದಾರೋ ಅದರ ಎರಡರಷ್ಟು ಹಣವನ್ನ ಐದು ವರ್ಷದಲ್ಲಿ ಮೋದಿ ಸರ್ಕಾರ ರಾಜ್ಯಕ್ಕೆ ಕೊಟ್ಟಿದೆ. ನೆರೆ ಪರಿಹಾರಕ್ಕೆ ತಾತ್ಕಾಲಿಕವಾಗಿ ಹಣ ಬಿಡುಗಡೆಯಾಗಿದೆ. ಎನ್.ಡಿ.ಆರ್.ಎಫ್‍ನಿಂದಲೂ ಹಣ ಬಿಡುಗಡೆಯಾಗಿದೆ. ಶಾಶ್ವತ ಪರಿಹಾರಕ್ಕೆ ಶೀಘ್ರವೇ ಹಣ ಬಿಡುಗಡೆಯಾಗುತ್ತದೆ ಎಂದು ತಿಳಿಸಿದರು.

ನಮ್ಮಲ್ಲಿ ಯಾವುದೇ ಬಣ, ಗುಂಪುಗಾರಿಕೆ ಇಲ್ಲ. ಇದು ಸಿದ್ದರಾಮಯ್ಯ, ಮುನಿಯಪ್ಪ ಹಾಗೂ ಡಿಕೆಶಿ ವಿಚಾರ ಮುಚ್ಚಿ ಹಾಕುವ ಪ್ರಯತ್ನವಾಗಿದ್ದು, ಮಾಧ್ಯಮಗಳಲ್ಲಿ ಹೇಳಿಕೆ ಕೊಡುವ ಮೂಲಕ ಬಿಜೆಪಿ ಮೇಲೆ ಎಲ್ಲರ ಗಮನ ಹೋಗುವಂತೆ ಡೈವರ್ಟ್ ಮಾಡುತ್ತಿದ್ದಾರೆ. ಸಿದ್ದರಾಮಯ್ಯಗೆ ಮಾತನಾಡುವ ನೈತಿಕತೆ ಇಲ್ಲ. ಸಮಿಶ್ರ ಸರ್ಕಾರವನ್ನ ಹೇಗೆ ನಡೆಸಿಕೊಂಡರು ಎಂಬುದು ಗೊತ್ತಿದೆ. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ರಾಜ್ಯದ ಹಣಕಾಸು ಪರಿಸ್ಥಿತಿಯನ್ನ ಹದಗೆಡಿಸಿ ಹೋಗಿದ್ದಾರೆ. ಅದನ್ನ ಮೇಲೆತ್ತಿ ಕೆಲಸ ಮಾಡಲು ಯಡಿಯೂರಪ್ಪ ಅವರಿಗೆ ಕಷ್ಟವಾಗುತ್ತಿದೆ. ಯಡಿಯೂರಪ್ಪ ಸರ್ಕಾರದ ಪರ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

Leave a Reply

Your email address will not be published. Required fields are marked *