Monday, 24th February 2020

Recent News

ಗುಂಡ-ಶಂಕ್ರನ ಭಾವನಾತ್ಮಕ ಬಾಂದವ್ಯಕ್ಕೆ ಪ್ರೇಕ್ಷಕನ ಕಣ್ಣಾಲಿಗಳು ಒದ್ದೆ!

ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ ನಾಯಕ ನಟನನಾಗಿ ಅಭಿನಯಿಸಿರುವ ನಾನು ಮತ್ತು ಗುಂಡ ಚಿತ್ರ ಇಂದು ಅದ್ಧೂರಿಯಾಗಿ ಬಿಡುಗಡೆಯಾಗಿದೆ. ನಾಯಿ ಮತ್ತು ಮಾಲೀಕನ ನಡುವಿನ ಭಾವನಾತ್ಮಕ ಸಂಬಂಧವಿರುವ ಈ ಚಿತ್ರದ ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿತ್ತು. ಇಂದು ಚಿತ್ರ ಬಿಡುಗಡೆಯಾಗಿ ಆ ನಿರೀಕ್ಷೆಯನ್ನು ಗೆದ್ದಿದೆ.

ಆಟೋ ಡ್ರೈವರ್ ಶಂಕ್ರ, ಕವಿತ ಇಬ್ಬರು ಮಧ್ಯಮ ವರ್ಗದ ಸಾಮಾನ್ಯ ಗಂಡ ಹೆಂಡತಿ. ಮಕ್ಕಳಿಲ್ಲದ ಕೊರಗಿನಿಂದ ದಿನಾ ಕುಡಿಯುತ್ತಿದ್ದ ಶಂಕ್ರನಿಗೆ ಗುಂಡ ಎಂಬ ನಾಯಿ ಸಿಗುತ್ತೆ. ಪ್ರತಿನಿತ್ಯ ಸಿಗ್ತಿದ್ದ ಗುಂಡನ ಜೊತೆ ಶಂಕ್ರನಿಗೆ ಆತ್ಮೀಯತೆ ಬೆಳೆಯುತ್ತೆ. ಅದೇ ಪ್ರೀತಿಯಿಂದ ಮನೆಗೆ ಗುಂಡನನ್ನು ಕರೆದುಕೊಂಡು ಬಂದು ಮುದ್ದಾಗಿ ಸಾಕುತ್ತಿರುತ್ತಾನೆ. ಆದ್ರೆ ಹೆಂಡತಿ ಕವಿತಳಿಗೆ ಇದು ಇಷ್ವವಿರೋದಿಲ್ಲ. ಹೀಗೆ ಶಂಕ್ರು ಮತ್ತು ಗುಂಡನ ಆತ್ಮೀಯತೆ, ಗೆಳೆತನ ಗಟ್ಟಿಯಾಗಿರುವಾಗ ಗುಂಡ ಸೇಟು ಮನೆಯ ಕಳೆದೋದ ನಾಯಿ ಎನ್ನುವುದು ಗೊತ್ತಾಗುತ್ತೆ.

ಕವಿತಾ ಗುಂಡನನ್ನು ಸೇಟುಗೆ ಕೊಡ್ತಾಳೆ ಇದು ಶಂಕ್ರು ಮನಸ್ಸಿಗೆ ನೋವನ್ನುಂಟು ಮಾಡುತ್ತೆ. ಗುಂಡನನ್ನು ಕೊಟ್ಟ ಮೇಲೆ ಮರುಗೋ ಶಂಕ್ರ ಪ್ರತಿನಿತ್ಯ ಸೇಟು ಮನೆಗೆ ಗುಂಡನನ್ನು ನೋಡಲು ಹೋಗ್ತಿರುತ್ತಾನೆ. ಹೀಗೆ ಭಾವನಾತ್ಮಕವಾಗಿ ಸಾಗೋ ಸಿನಿಮಾ ಕಣ್ಣಂಚಲ್ಲಿ ನೀರು ತರಿಸುತ್ತೆ. ಹೀಗೆ ಸಾಗುತ್ತಾ ಹೋಗೋ ಕಥೆ ದ್ವಿತಿಯಾರ್ಧದಲ್ಲಿ ಹೊಸ ತಿರುವನ್ನೆ ಪಡೆದುಕೊಳ್ಳುತ್ತೆ. ಗುಂಡ ಮತ್ತೆ ಶಂಕ್ರು ಬಳಿ ಬರ್ತಾನಾ? ಕವಿತಾ ಗುಂಡನನ್ನು ಪ್ರೀತಿಸುತ್ತಾಳ ಅನ್ನೋದಕ್ಕೆ ನೀವು ಸಿನಿಮಾ ನೋಡಲೇ ಬೇಕು. ಆದ್ರೆ ಚಿತ್ರಮಂದಿರದಿಂದ ಬರ್ತಾ ನಿಮ್ಮ ಕಣ್ಣುಗಳು ಮಾತ್ರ ಒದ್ದೆಯಾಗದೇ ಇರದು. ಅಷ್ಟು ಭಾವನಾತ್ಮಕವಾಗಿ ಕಥೆ ಹೆಣೆದಿದ್ದಾರೆ ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ.

ನಾಯಿ ಮತ್ತು ಮಾಲೀಕನ ಕಥೆ ಎಂದು ಚಿತ್ರಮಂದಿರದ ಒಳಗೆ ಹೊಕ್ಕ ಪ್ರೇಕ್ಷಕನಿಗೆ ಭಾವನಾತ್ಮಕ ಪ್ರಪಂಚ ಆವರಿಸಿಕೊಳ್ಳುತ್ತೆ. ಅಲ್ಲೇ ಇಡೀ ಚಿತ್ರತಂಡ ಗೆದ್ದು ಬಿಡುತ್ತೆ. ಇನ್ನು ಶಿವರಾಜ್ ಕೆ.ಆರ್.ಪೇಟೆ ಅಭಿನಯ ಮನಮುಟ್ಟುತ್ತದೆ. ತಮ್ಮ ಅಧ್ಬುತ ನಟನಾ ಶಕ್ತಿಯನ್ನು ತೆರೆ ಮೇಲೆ ತೋರಿಸಿದ್ದಾರೆ. ನಾಯಿ ಗುಂಡ ಕೂಡ ಅಧ್ಬುತವಾಗಿ ನಟಿಸಿದೆ. ಸಂಯುಕ್ತ ಹೊರನಾಡು ತಮ್ಮ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ. ಒಟ್ಟಿನಲ್ಲಿ ನಾನು ಮತ್ತು ಗುಂಡ ಚಿತ್ರ ಪ್ರೇಕ್ಷಕನ ಮನಸ್ಸಿಗೆ ಬಹಳ ಹತ್ತಿರವಾಗಿದ್ದು ಎಲ್ಲರ ಮನಸ್ಸನ್ನು ಗೆದ್ದಿದೆ. ಜಯಭೇರಿ ಬಾರಿಸಿದೆ.

ಚಿತ್ರ: ನಾನು ಮತ್ತು ಗುಂಡ
ನಿರ್ದೇಶನ: ಶ್ರೀನಿವಾಸ್ ತಿಮ್ಮಯ್ಯ
ನಿರ್ಮಾಪಕ: ರಘು ಹಾಸನ್
ಸಂಗೀತ: ಕಾರ್ತಿಕ್ ಶರ್ಮ
ಛಾಯಾಗ್ರಹಣ: ಚಿದಾನಂದ್ ಕೆ.ಕೆ
ತಾರಾಬಳಗ: ಶಿವರಾಜ್ ಕೆ.ಆರ್.ಪೇಟೆ. ಸಂಯುಕ್ತ ಹೊರನಾಡ್,ಸಿಂಬಾ (ನಾಯಿ ಗುಂಡ), ಇತರರು

ರೇಟಿಂಗ್: 3.5 / 5

Leave a Reply

Your email address will not be published. Required fields are marked *