Districts
ಕೃಷಿ ಹೋರಾಟ ನಡೆಸುತ್ತಿರುವವರು ನೈಜ ರೈತರಲ್ಲ: ಈಶ್ವರಪ್ಪ

ಶಿವಮೊಗ್ಗ: ನೂತನ ಕೃಷಿ ನೀತಿ ಕಾಯ್ದೆ ಬಗ್ಗೆ ಪ್ರಧಾನಿ ಮೋದಿಯವರು ನಿನ್ನೆ ಸದನದಲ್ಲಿ ಪ್ರಸ್ತಾಪಿಸಿದ್ದಾರೆ. ಇದರ ಹಿಂದೆ ವಿದೇಶಿ ವ್ಯಕ್ತಿಗಳ ಕೈವಾಡ ಇರುವುದು ಬಹಿರಂಗವಾಗುತ್ತಿದ್ದು, ದೇಶಭಕ್ತರು ನಕಲಿ ರೈತ ಹೋರಾಟಗಾರರನ್ನು ಬೆಂಬಲಿಸಬಾರದು ಎಂದು ಸಚಿವ ಈಶ್ವರಪ್ಪ ತಿಳಿಸಿದರು.
ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರತಿಭಟನೆಯನ್ನು ವಿದೇಶಿಯರು ಹೈಜಾಕ್ ಮಾಡಿರುವುದು ಬಹಿರಂಗವಾಗಿದೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ವೇಳೆ ಈ ಕೃಷಿ ಕಾಯ್ದೆ ಬಗ್ಗೆ ಸ್ವತಃ ಪ್ರಸ್ತಾಪ ಮಾಡಿದ್ದರು. ಆದರೆ ಕಾಂಗ್ರೆಸ್ ಈಗ ವಿರೋಧಿಸುತ್ತಿದೆ ಎಂದರು.
ಮಾಜಿ ಪ್ರಧಾನಿ ದೇವೆಗೌಡರು ಕೂಡ ಈ ಬಗ್ಗೆ ಪ್ರಸ್ತಾಪಿಸಿದ್ದರು. ಈ ಬಗ್ಗೆ ಪ್ರಧಾನಿ ಮೋದಿಯವರು ಪ್ರಸ್ತಾಪಿಸಿದ್ದಾರೆ. ಅಸಲಿಯಾಗಿ ರೈತರು ಈ ಕಾಯ್ದೆಗೆ ಸ್ವಾಗತ ಕೋರಿದ್ದಾರೆ. ವಿದೇಶಿಯರ ಸಂಚನ್ನು ರಾಷ್ಟ್ರ ಭಕ್ತರು ವಿಫಲಗೊಳಿಸಬೇಕು ಎಂದು ಕರೆ ನೀಡಿದರು.
ನೂತನ ಕೃಷಿ ಬಿಲ್ ಪಾಸ್ ಮಾಡುವ ವೇಳೆ ಸುಮ್ಮನಿದ್ದ ವಿಪಕ್ಷಗಳು, ವಿಧ್ವಂಸಕ ಕೃತ್ಯ ನಡೆಸುತ್ತಿರುವ ದೇಶ ದ್ರೋಹಿಗಳ ಪ್ರತಿಭಟನೆ ಪರ ವಹಿಸಿಕೊಂಡು ಮಾತನಾಡುತ್ತಿದ್ದಾರೆ. ಹೋರಾಟಕ್ಕೆ ರಾಜಕೀಯ ಬಣ್ಣ ಬೆರೆಸಿದ ವಿಪಕ್ಷಗಳು ಈಗ ಸುಮ್ಮನಿರುವುದು ಒಳ್ಳೆಯದಲ್ಲ ಎಂದರು.
ನಿಜವಾದ ಭಾರತೀಯರು, ನಕಲಿ ರೈತರ ಹೋರಾಟಕ್ಕೆ ಬೆಂಬಲಿಸಬಾರದು. ವಿರೋಧಕೋಸ್ಕರ ವಿರೋಧ ಮಾಡುವುದು ಒಳ್ಳೆಯದಲ್ಲ. ಕೃಷಿ ಕಾಯ್ದೆ ರೈತರ ಒಳಿತಿಗಾಗಿ ಇದೆ ಎಂದು ಸಚಿವ ಈಶ್ವರಪ್ಪ ಸ್ಪಷ್ಟಪಡಿಸಿದರು.
