Connect with us

Crime

ಭೀಕರ ಅಪಘಾತ: ನಿವೃತ್ತಿಯ ದಿನವೇ ಕುಟುಂಬದ ಐವರನ್ನು ಕಳೆದುಕೊಂಡ ಮೆಸ್ಕಾಂ ಎಂಜಿನಿಯರ್

Published

on

ಶಿವಮೊಗ್ಗ: ಮೆಸ್ಕಾಂ ಎಂಜಿನಿಯರ್ ಒಬ್ಬರು ನಿವೃತ್ತಿಯ ದಿನವೇ ಭೀಕರ ಅಪಘಾತದಲ್ಲಿ ಕುಟುಂಬದ ಐವರನ್ನು ಕಳೆದುಕೊಂಡ ಘಟನೆ ಇಂದು ಜಿಲ್ಲೆಯಲ್ಲಿ ನಡೆದಿದೆ.

ಚಂದ್ರಪ್ಪ ಅವರ ಕುಟುಂಬದ ಐವರು ಸದಸ್ಯರನ್ನು ಕಳೆದುಕೊಂಡ ಮೆಸ್ಕಾಂ ನಿವೃತ್ತ ಎಂಜಿನಿಯರ್. ಚಂದ್ರಪ್ಪ ಅವರ ಪತ್ನಿ ಮಂಗಳಾ (55), ಪುತ್ರ ಮಂಜುನಾಥ (38), ಅಳಿಯ ನೀಲಕಂಠ, ಪುತ್ರಿ ಉಷಾ ಹಾಗೂ ಮೊಮ್ಮಗ ನಂದೀಶ್ ಮೃತಪಟ್ಟಿದ್ದಾರೆ.

ಭದ್ರಾವತಿ ತಾಲೂಕು ಮಂಗೋಟೆಯವರಾದ ಚಂದ್ರಪ್ಪ ಶಿವಮೊಗ್ಗದ ಗೋಪಾಳದಲ್ಲಿ ಮನೆ ಮಾಡಿದ್ದರು. ಕುಂಸಿ ಗ್ರಾಮದಲ್ಲಿ ಮೆಸ್ಕಾಂ ಎಂಜಿನಿಯರ್ ಸೇವೆ ಸಲ್ಲಿಸಿದ್ದ ಚಂದ್ರಪ್ಪ ಅವರು ಇಂದು ನಿವೃತ್ತಿ ಹೊಂದಿದ್ದಾರೆ. ಈ ಪ್ರಯುಕ್ತ ಮೆಸ್ಕಾಂ ಸಿಬ್ಬಂದಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಹೀಗಾಗಿ ಚಂದ್ರಪ್ಪ ಅವರ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಲು ಸ್ವಿಫ್ಟ್ ಕಾರಿನಲ್ಲಿ ಕುಂಸಿ ಗ್ರಾಮಕ್ಕೆ ತೆರಳುತ್ತಿದ್ದರು.

ಶಿವಮೊಗ್ಗ ತಾಲೂಕು ಆಯನೂರು ಹೊರವಲಯದ ಚಿಕ್ಕದಾನವಂದಿ ಬಳಿ ಚಂದ್ರಪ್ಪ ಅವರ ಕುಟುಂಬಸ್ಥರು ಪ್ರಯಾಣಿಸುತ್ತಿದ್ದ ಕಾರು ಹಾಗೂ ಕ್ಯಾಂಟರ್ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿವೆ. ವೇಗವಾಗಿ ಸಂಚರಿಸುತ್ತಿದ್ದ ಲಾರಿ ಕಾರಿನ ಮೇಲೆ ಹರಿದಿದ್ದು, ಅದರಲ್ಲಿದ್ದ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇತ್ತ ನಿವೃತ್ತಿಯ ಸಮಾರಂಭಕ್ಕೆ ಕುಟುಂಬದವರ ನಿರೀಕ್ಷೆಯಲ್ಲಿದ್ದ ಚಂದ್ರಪ್ಪ ಅವರು ಭಾರೀ ಆಘಾತಕ್ಕೆ ಒಳಗಾಗಿದ್ದಾರೆ.

ಈ ಸಂಬಂಧ ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.