Tuesday, 18th June 2019

ಶಿವನ ಆರಾಧನೆ-ಮನೆಯಲ್ಲಿ ನೆಮ್ಮದಿ ಕಾಯ್ದುಕೊಳ್ಳಲು ಶಿವನ ವಿಶೇಷ ಪೂಜೆ ಮಾಡೋ ವಿಧಾನ

ಪ್ರತಿ ಸೋಮವಾರ ಶಿವನ ಪೂಜೆ ಮಾಡುವ ಪದ್ಧತಿ ಇದೆ. ಮನೆಯಲ್ಲಿ ನೆಮ್ಮದಿ ಕಾಯ್ದುಕೊಳ್ಳಲು ಮತ್ತು ನಿರಂತರ ಶತ್ರುಗಳ ಕಿರಿಕಿರಿಯಿಂದ ಶಮನ ಹೊಂದಲು ಶಿವನಿಗೆ ವಿಶೇಷ ಪೂಜೆ ಸಲ್ಲಿಸಬೇಕು. ಈ ಪೂಜೆಯನ್ನು ಮನೆಯಲ್ಲಿ ಮಾಡಬಹುದು. ಶಿವನ ವಿಶೇಷ ರೂಪವಾದ ಲಲಾಟಕ್ಷ ಆರಾಧನೆಯ ವಿಧಾನಗಳು ಇಲ್ಲಿವೆ.

ಲಲಾಟಕ್ಷನ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ಮಾಡಿದ್ದಲ್ಲಿ ಎಲ್ಲ ರೀತಿಯ ಸಂಕಷ್ಟಗಳು ನಿವಾರಣೆ ಆಗುತ್ತೇವೆ ಎಂಬ ನಂಬಿಕೆ ಇದೆ. ಹಿತ ಶತ್ರುಗಳು ಅಥವಾ ವ್ಯಕ್ತ ಅವ್ಯಕ್ತ ಶತ್ರುಗಳು ಅವರೆಲ್ಲರನ್ನು ಲಲಾಟಕ್ಷ ಪೂಜೆಯಿಂದ ನಾಶ ಮಾಡಬಹುದು ಎಂಬ ಪ್ರತೀತಿ ಇದೆ.

1. ಮನೆಯಲ್ಲಿಯ ಎಲ್ಲ ಸದಸ್ಯರು ಸೇರಿ ಸ್ನಾನಾದಿಗಳನ್ನು ಮಾಡಿ ಪೂಜೆ ಮಡಿಯಿಂದ ಇರಬೇಕು. ಇನ್ನು ಕೆಲವರ ಮನೆಯಲ್ಲಿ ಮಕ್ಕಳು ಶಾಲೆಗೆ ಹೋಗ್ತಾರೆ, ಬೇಗ ಏಳುವುದಿಲ್ಲ ಅನ್ನುವವರು ಒಬ್ಬರೇ ಮಾಡಬಹುದು. ಕುಟುಂಬ ಸದಸ್ಯರು ಒಟ್ಟಾಗಿ ಪೂಜೆ ಮಾಡಿದ್ರೆ ನಿಮ್ಮ ಪ್ರಾರ್ಥನೆ ದೇವರಿಗೆ ಬೇಗ ತಲುಪುತ್ತದೆ ಎಂಬುವುದು ನಂಬಿಕೆ.

2. ಗಂಗಾ ಕಳಸ (ನೀರು ತುಂಬಿರುವ ಚಿಕ್ಕ ಬಿಂದಿಗೆ) ಸಹಿತವಾಗಿ ಬಲಗಾಲಿಟ್ಟು ದೇವರ ಮನೆಯನ್ನು ಪ್ರವೇಶ ಮಾಡಬೇಕು. ದೇವರ ಮುಂದೆ ರಂಗವಲ್ಲಿಯನ್ನು ಹಾಕಿ, ಪೀಠದ ಮೇಲಿನ ಶಿವಲಿಂಗವನ್ನ ಕೆಳಗೆ ಶುದ್ಧವಾದ ಪಾತ್ರೆಯಲ್ಲಿಟ್ಟುಕೊಳ್ಳಬೇಕು. ನಿಮ್ಮ ಬಲಭಾಗದಲ್ಲಿ ಪೂಜೆ ಸಾಮಾಗ್ರಿಗಳು, ಪ್ರಸಾದವಾಗಿ ಮೊಸರನ್ನ ಇಟ್ಟುಕೊಳ್ಳಬೇಕು. ದೇವರ ಬಲಭಾಗಕ್ಕೆ ತುಪ್ಪದಲ್ಲಿ ದೀಪಗಳನ್ನು ಇರಿಸಬೇಕು.

3. ಈ ಎರಡು ಪ್ರಕ್ರಿಯೆಗಳು ಮುಗಿದ ಬಳಿಕ ದೇವರ ಬಲಭಾಗದಲ್ಲಿಯ ದೀಪವನ್ನು ಬೆಳಗಬೇಕು. ಉದ್ಧರಣೆ ನೀರನ್ನು ಘಂಟೆಯ ಮೇಲೆ ಹಾಕುತ್ತಾ ನಿಧಾನವಾಗಿ ಘಂಟೆ ನಾದ ಆರಂಭಿಸಬೇಕು. ಭೂಮಿಗೆ ಸ್ವಲ್ಪ ಅಕ್ಷತೆಯನ್ನು ಹಾಕಿ ಭೂ ತಾಯಿಯನ್ನು ಆರಾಧಿಸಬೇಕು.

4. ಪೂಜೆ ಮಾಡುವಾಗ ನಿಮ್ಮ ಆಸನದ ಮೇಲೆ ಎರಡು ಅಕ್ಷತೆ ಹಾಕುತ್ತಾ, ಆಸಾನಧಿ ಶುದ್ಧಿಗಳನ್ನು ಪೂರೈಸಿ, ದೀರ್ಘವಾದ ಉಸಿರನ್ನು ತೆಗೆದುಕೊಳ್ಳುವುದು. ಕೆಲ ಕ್ಷಣಗಳ ಕಾಲ ಪ್ರಾಣಾಯಮ ಮಾಡಿ ಸಂಕಲ್ಪ ಮಾಡಿಕೊಳ್ಳುವುದು.

5. ಈ ಎಲ್ಲ ಪ್ರಕ್ರಿಯೆ ಅಂತ್ಯಗೊಂಡ ಬಳಿಕ ಪ್ರಧಾನ ಸಂಕಲ್ಪ ಮಾಡಿಕೊಳ್ಳುವ ಅತ್ಯಂತ ಮಹತ್ವದ ವಿಧಾನ. ಎಡಗೈಯಲ್ಲಿ ಅಕ್ಷತೆಯನ್ನು ಇಟ್ಟುಕೊಂಡು ಬಲಗೈಯಿಂದ ಮುಚ್ಚಿ ಬಲತೊಡೆಯ ಮೇಲೆ ಇಟ್ಟುಕೊಂಡು ಓಂ ನಮೋ ನಾರಾಯಣಾಯ ನಮಃ ಅಂತಾ ಹೇಳಿಕೊಳ್ಳಬೇಕು. ಈ ವೇಳೆ ನಿಮ್ಮ ಹೆಸರು ಒಳಗೊಂಡಂತೆ ಕುಟುಂಬಸ್ಥರೆಲ್ಲರ ನಕ್ಷತ್ರ, ರಾಶಿ, ಗೋತ್ರವನ್ನು ಪಠಣ ಮಾಡಿಕೊಳ್ಳಬೇಕು. ಕೊನೆಗೆ ಲಲಾಟಕ್ಷನ ಮಂತ್ರವನ್ನು ಹೇಳಬೇಕು. ಮಂತ್ರ ಪಠಣೆ ಬಳಿಕ ಅಕ್ಷತೆಗೆ ಶುದ್ಧವಾದ ನೀರನ್ನು ಹಾಕಿ ಒಳ್ಳೆಯ ಪಾತ್ರೆಗೆ ಬಿಡಬೇಕು.

6. ಯಾವುದೇ ಕಾರ್ಯ ಮಾಡಿದರೂ ವಿಘ್ನ ನಿವಾರಕ ಗಣಪತಿಯನ್ನು ಅರಾಧಿಸಬೇಕು. ಹಾಗೆಯೇ ಲಲಾಟಕ್ಷನ ಪೂಜೆಯ ವೇಳೆ ಗಣಪತಿಯನ್ನು ಮಂತ್ರ ಹೇಳಿ ಅಕ್ಷತೆಯನ್ನು ಗಣಪತಿ ವಿಗ್ರಹ ಅಥವಾ ಫೋಟೋ ಮೇಲೆ ಹಾಕಬೇಕು.

7. ಗಂಗಾ ಕಳಸಕ್ಕೆ ನಾಲ್ಕು ಕಡೆ ಗಂಧಾದಿಗಳನ್ನು ಲೇಪಿಸಿ, ಗಂಗೆಯನ್ನು ಪ್ರಾರ್ಥನೆ ಮಾಡಬೇಕು. ನಾಲ್ಕು ಬಾರಿ ಲಲಾಟಕ್ಷ ಆವಾ ಹಯಾಮಿ ಎಂದು ಹೇಳಬೇಕು. ಅಕ್ಷತೆ ಮತ್ತು ಹೂವನ್ನು ಹೃದಯ ಭಾಗಕ್ಕೆ ಇಟ್ಟುಕೊಂಡು ಶಿವನ ಧ್ಯಾನ ಮಾಡಬೇಕು. ನಾಲ್ಕು ಉದ್ಧರಣೆ ನೀರನ್ನು ಶುದ್ಧವಾದ ಪಾತ್ರೆಯಲ್ಲಿ ಬಿಡಬೇಕು.

8. ಪಂಚಾಮೃತ ಅಥವಾ ಶುದ್ಧವಾದ ನೀರಿನಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಬೇಕು. ಅಭಿಷೇಕದ ಬಳಿಕ ಶಿವಲಿಂಗವನ್ನು ಸ್ವಚ್ಛವಾಗಿ ತೊಳೆದು ಪೀಠದಲ್ಲಿ ಪ್ರತಿಷ್ಠಾಪನೆ ಮಾಡಬೇಕು. ಈಗ ಗೆಜ್ಜೆ ವಸ್ತ್ರವನ್ನು ಸ್ವಾಮೀಜಿಗೆ ಅರ್ಪಿಸಬೇಕು. ಉಪವಿತ ಸಮಯಲ್ಲಿ ಎರಡು ಅಕ್ಷತೆಯನ್ನು ಹಾಕುವುದು ಪದ್ಧತಿ. ಗಂಧವನ್ನು ಲೇಪಿಸಿ, ಅರಿಶಿಣ ಕುಂಕುಮ, ಬಿಲ್ವಪತ್ರೆಗಳನ್ನ ಅರ್ಪಿಸಬೇಕು.

9. ಅಕ್ಷತೆ, ಪುಷ್ಪ, ಬಿಲ್ವಪತ್ರೆ ಬಳಸಿ ನಾಮಪೂಜೆಯನ್ನು ಆರಂಭಿಸಬೇಕು. ಈ ವೇಳೆ ಶಿವನ ಅಷ್ಟೋತ್ತರ ಪಠಣೆ ಹೇಳಿ, ಧೂಪವನ್ನು ಬೆಳಗಬೇಕು. ತಾಂಬೂಲದ ತೊಟ್ಟನ್ನು ಮುರಿದ ಉದ್ಧರಣೆ ನೀರನ್ನು ಹಾಕಬೇಕು. ಐದು ಬತ್ತಿಗಳನ್ನು ತೆಗೆದುಕೊಂಡು ಮೂರು ಪ್ರದಕ್ಷಿಣೆ ಮಂಗಳರಾತಿ ಮಾಡಬೇಕು.

10. ಮಂಗಳರಾತಿ ಬಳಿಕ ಕರಗಳನ್ನು ತೊಳೆದು ಸ್ವಾಮಿಗೆ ಮೂರು ಪ್ರದಕ್ಷಣೆ ಹಾಕಿ ದೀರ್ಘದಂಡ ನಮಸ್ಕಾರ ಹಾಕಬೇಕು. ಈ ವೇಳೆ ನಿಮ್ಮ ಮನದಾಳದ ಪ್ರಾರ್ಥನೆಯನ್ನು ಹೇಳಿಕೊಳ್ಳಬೇಕು.

ಈ ಹತ್ತು ವಿಧಾನಗಳನ್ನು ಶ್ರದ್ಧೆ ಭಕ್ತಿಗಳಿಂದ ಪೂಜೆ ಮಾಡಿದಲ್ಲಿ ಲಲಾಟಕ್ಷನ ಕೃಪೆಗೆ ಪಾತ್ರರಾಗುತ್ತಾರೆ. ಮನುಷ್ಯುನ ದೇಹದ ಪ್ರತಿಯೊಂದು ಅಂಗಕ್ಕೆ ಒಂದೊಂದು ಹೆಸರು ಇದೆ. ಲಲಾಟ ಅಂದ್ರೆ ಹಣೆ, ಅಕ್ಷ ಅಂದ್ರೆ ಕಣ್ಣು. ಹಣೆಯ ಮಧ್ಯಭಾಗದಲ್ಲಿ ಕಣ್ಣು ಹೊಂದಿರುವ ಮುಕ್ಕಣ್ಣನೇ ಲಲಾಟಕ್ಷ. ಈ ಪೂಜೆ ವೇಳೆ ಕೆಲವೊಂದು ಮಂತ್ರ, ಶ್ಲೋಕಗಳ ಪಠಣೆ ಮಾಡಲೇಬೇಕು. ಲಲಾಟಕ್ಷ ಪೂಜೆಯ ಮಾಡುವ ಬಗ್ಗೆಯ ಮಂತ್ರಗಳನ್ನು ತಿಳಿದುಕೊಳ್ಳಲು ಈ ಕೆಳಗಿನ ವಿಡಿಯೋ ನೋಡಿ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Leave a Reply

Your email address will not be published. Required fields are marked *