Wednesday, 17th July 2019

ಕೊನೆಗೂ ಶಿರಾಡಿ ಘಾಟ್ ಓಪನ್ – ಇಂದಿನಿಂದ ಲಘು ವಾಹನಗಳಿಗೆ ಮಾತ್ರ ಸಂಚಾರ

ಮಂಗಳೂರು: ಬೆಂಗಳೂರು – ಮಂಗಳೂರು ಸಂಪರ್ಕಿಸುವ ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ ಕೊನೆಗೂ ಓಪನ್ ಆಗಿದೆ. ಇಂದಿನಿಂದ ಹೆದ್ದಾರಿಯಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಉಪ ವಿಭಾಗಾಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರುಗಳ ಜಂಟಿ ತಂಡ ಸ್ಥಳ ಪರಿಶೀಲಿಸಿದ್ದು, ಡೇಂಜರ್ ಝೋನ್ ಇರುವ 11 ಕಡೆ ಪೊಲೀಸ್ ಭದ್ರತೆಯೊಂದಿಗೆ ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

ಹಾಸನ ಎಸಿ ಲಕ್ಷ್ಮೀಕಾಂತ್ ರೆಡ್ಡಿ ಮತ್ತು ಪುತ್ತೂರು ಎಸಿ ಕೃಷ್ಣಮೂರ್ತಿ ಸ್ಥಳ ಪರಿಶೀಲಿಸಿ ಸರ್ಕಾರಕ್ಕೆ ವರದಿ ನೀಡಿದ್ದಾರೆ. ಇದೇ ವೇಳೆ ಕಾಮಗಾರಿಯೂ ನಡೆಯಲಿದ್ದು, ಹಾಸನ ಮತ್ತು ದಕ್ಷಿಣ ಕನ್ನಡ ಭಾಗದ ಜನರ ಬೇಡಿಕೆಯಿಂದಾಗಿ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿದೆ ಎಂದು ಹಾಸನ ಎಸಿ ಲಕ್ಷ್ಮೀಕಾಂತ್ ರೆಡ್ಡಿ ತಿಳಿಸಿದ್ದಾರೆ.

ಸಕಲೇಶಪುರದಲ್ಲಿ 8 ಕಡೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 11 ಕಡೆ ಗುಡ್ಡ ಕುಸಿತವಾಗಿದೆ. ಇದರಿಂದ ರಸ್ತೆ ಹಾಳಗಿದೆ. ಆದ್ದರಿಂದ ಅಂತಹ ಕಡೆಯಲ್ಲಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಕೆಲವು ಕಡೆ ಬ್ಯಾರಿಕೇಡ್ ಮತ್ತೆ ಕೆಲವು ಕಡೆಯಲ್ಲಿ ಶಾಶ್ವತವಾಗಿ ಗೋಡೆ ಕಟ್ಟಿ ಓನ್‍ವೇ ಮಾಡಬೇಕು ಎಂದು ನಿರ್ಧಾರವಾಗಿದೆ. ಈಗ ಲಘವಾಹನಗಳಾದ ಕಾರು, ಬೈಕ್ ಗಳನ್ನು ಬಿಡಲಾಗುತ್ತಿದೆ. ಒಂದು ವಾರದ ಬಳಿ ಮತ್ತೆ ಚರ್ಚೆ ಮಾಡಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ರೆಡ್ಡಿ ಅವರು ಹೇಳಿದ್ದಾರೆ.

ಶಿರಾಡಿ ಘಾಟ್ ಕಾಂಕ್ರೀಟ್ ಆದ ಬಳಿಕ ಕಳೆದ ಜುಲೈ 15ರಂದು ಅಧಿಕೃತ ಉದ್ಘಾಟನೆ ಆಗಿತ್ತು. ಆದರೆ ಭೂಕುಸಿತ ಕಾರಣದಿಂದಾಗಿ ಶಿರಾಡಿ ಘಾಟ್ ಹೆದ್ದಾರಿ ಸ್ಥಗಿತಗೊಳಿಸಲಾಗಿತ್ತು. ಸದ್ಯ ಮಂಗಳೂರು – ಬೆಂಗಳೂರು ಸಂಚಾರಕ್ಕೆ ಚಾರ್ಮಾಡಿ ಘಾಟಿಯಲ್ಲಿ ಮಾತ್ರ ಅವಕಾಶ ಇದ್ದುದರಿಂದ ಜನಸಾಮಾನ್ಯರಿಗೆ ತೊಂದರೆಯಾಗಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *