Wednesday, 11th December 2019

ಗಾಯಗೊಂಡ ಬಳಿಕ ಯುವಿಗಾಗಿ ಮೊದಲ ಬಾರಿ ಬ್ಯಾಟ್ ಹಿಡಿದ ಧವನ್

ಮುಂಬೈ: ಗಾಯದ ಸಮಸ್ಯೆಯಿಂದ ವಿಶ್ವಕಪ್ ಟೂರ್ನಿಯಿಂದ ಅರ್ಧಕ್ಕೆ ವಾಪಸ್ ಆಗಿದ್ದ ಟೀಂ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ಮೊದಲ ಬಾರಿಗೆ ಬ್ಯಾಟ್ ಹಿಡಿದ್ದಾರೆ. ಮಾಜಿ ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ನೀಡಿದ್ದ ಬಾಟಲ್ ಕ್ಯಾಪ್ ಚಾಲೆಂಜ್ ಹಿನ್ನೆಲೆಯಲ್ಲಿ ಧವನ್ ವಿಡಿಯೋ ಹರಿಬಿಟ್ಟಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದ ಬಾಟಲ್ ಕ್ಯಾಪ್ ಚಾಲೆಂಜ್ ಸ್ವೀಕರಿಸಿ ತಮ್ಮದೇ ಶೈಲಿಯಲ್ಲಿ ವಿಡಿಯೋ ಹರಿಬಿಟ್ಟಿದ್ದ ಯುವರಾಜ್ ಸಿಂಗ್ ಅವರು ಧವನ್ ಸೇರಿದಂತೆ ಹಲವು ಆಟಗಾರಿಗೆ ಸವಾಲು ಎಸೆದಿದ್ದರು. ಈ ಸವಾಲು ಸ್ವೀಕರಿಸಿರುವ ಧವನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಆಪ್ ಲೋಡ್ ಮಾಡಿದ್ದಾರೆ.

ವಿಡಿಯೋದಲ್ಲಿ ಧವನ್, ಯುವಿ ಅವರಂತೆಯೇ ಬ್ಯಾಟ್ ಬೀಸಿ ಬಾಟಲ್ ಕ್ಯಾಪ್ ಚಾಲೆಂಜ್ ಪೂರ್ಣಗೊಳಿಸಿದ್ದಾರೆ. ಗಾಯಗೊಂಡ ಬಳಿಕ ಮೊದಲ ಬಾರಿಗೆ ತಾವು ಬ್ಯಾಟಿಂಗ್ ಮಾಡುತ್ತಿದ್ದು, ಸಂತಸವಾಗುತ್ತಿದೆ ಎಂದು ಹೇಳಿದ್ದಾರೆ. ಸದ್ಯ ಯುವರಾಜ್ ಸಿಂಗ್ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದಾರೆ.

ಧವನ್ ಸದ್ಯ ಗಾಯದ ಸಮಸ್ಯೆಯಿಂದ ಚೇತರಿಕೆ ಪಡೆಯುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಸಕ್ರೀಯವಾಗಿ ಸಂಪರ್ಕದಲ್ಲಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ 2 ಪಂದ್ಯಗಳನ್ನು ಆಡಿದ್ದ ಧವನ್ 117 ರನ್ ಸಿಡಿಸಿದ್ದರು. ಆದರೆ ಪಂದ್ಯದ ವೇಳೆ ಗಾಯಗೊಂಡಿದ್ದರು. ಇವರ ಸ್ಥಾನದಲ್ಲಿ ರಿಷಬ್ ಪಂತ್ ಆಯ್ಕೆ ಆಗಿದ್ದರು. ಉಳಿದಂತೆ ಟೀಂ ಇಂಡಿಯಾ, ವೆಸ್ಟ್ ಇಂಡೀಸ್ ವಿರುದ್ಧ ಆಗಸ್ಟ್ 3 ರಿಂದ ಟೂರ್ನಿಯನ್ನು ಆರಂಭಿಸಲಿದೆ. ಗಾಯದ ಸಮಸ್ಯೆಯಿಂದ ಧವನ್ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ವಿಂಡೀಸ್ ಸರಣಿಯಿಂದ ದೂರ ಉಳಿಯಲಿದ್ದಾರೆ.

Leave a Reply

Your email address will not be published. Required fields are marked *