Monday, 16th December 2019

ರೋಷನ್ ಬೇಗ್‍ಗೆ ಶಾಕ್ – ಶರವಣಗೆ ಬಿಜೆಪಿ ಟಿಕೆಟ್

ಬೆಂಗಳೂರು: ರೋಷನ್ ಬೇಗ್‍ಗೆ ಬಿಜೆಪಿ ಶಾಕ್ ನೀಡಿದ್ದು ಶಿವಾಜಿ ನಗರ ಕ್ಷೇತ್ರದ ಟಿಕೆಟ್ ಬಿಬಿಎಂಪಿ ಮಾಜಿ ಸದಸ್ಯ ಶರವಣ ಅವರಿಗೆ ನೀಡಿದೆ.

ಅನರ್ಹಗೊಂಡಿರುವ ಶಾಸಕ ರೋಷನ್ ಬೇಗ್ ಅವರು ಇಂದು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಐಎಂಎ ಕೇಸ್‍ನಲ್ಲಿ ರೋಷನ್ ಬೇಗ್ ಹೆಸರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪಕ್ಷಕ್ಕೆ ಸೇರ್ಪಡೆಗೊಳಿಸಿದರೆ ಕೆಟ್ಟ ಹೆಸರು ಬರಬಹುದು ಎನ್ನುವ ಮಾತು ಕೇಳಿ ಬಂದ ಹಿನ್ನೆಲೆಯಲ್ಲಿ ಪಕ್ಷದ ಬಾವುಟವನ್ನು ಬಿಜೆಪಿ ಇಂದು ನೀಡಿರಲಿಲ್ಲ. ಶರವಣ ಅವರು ಹಲಸೂರು ವಾರ್ಡ್ ಪಾಲಿಕೆ ಸದಸ್ಯೆ ಮಮತಾ ಅವರ ಪತಿಯಾಗಿದ್ದಾರೆ.

ತುಮಕೂರಿನಲ್ಲಿ ರೋಷನ್ ಬೇಗ್ ಬಗ್ಗೆ ಬಿಜೆಪಿ ಸೇರ್ಪಡೆ ಬಗ್ಗೆ ಕೇಳಲಾದ ಪ್ರಶ್ನೆಗೆ ಸಿಎಂ ಬಿಎಸ್‍ವೈ ಇನ್ನೂ ಚರ್ಚೆ ಮಾಡುತ್ತಿದ್ದೇವೆ. ಚರ್ಚೆ ಮಾಡಿದ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪ್ರತಿಕ್ರಿಯಿಸಿದ್ದರು.

ಇಂದು ಬಿಜೆಪಿಗೆ 16 ಮಂದಿ ಅನರ್ಹ ಶಾಸಕರು ಸೇರ್ಪಡೆಯಾಗಿದ್ದಾರೆ. ಸೇರ್ಪಡೆಯಾದ ಬೆನ್ನಲ್ಲೇ ಉಪಚುನಾವಣೆ ನಡೆಯಲಿರುವ 15 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳ ಟಿಕೆಟ್ ಗಳನ್ನು ಅನರ್ಹರಿಗೆ ಬಿಜೆಪಿ ಹಂಚಿಕೆ ಮಾಡಿದೆ. ಈ ಮೂಲಕ ಅನರ್ಹರಿಗೆ ನೀಡಿದ ವಚನವನ್ನು ಸಿಎಂ ಈಡೇರಿಸಿದ್ದಾರೆ.

ರಮೇಶ್ ಜಾರಕಿಹೊಳಿ(ಗೋಕಾಕ್), ಎಂಟಿಬಿ ನಾಗರಾಜ್(ಹೊಸಕೋಟೆ), ಎಚ್. ವಿಶ್ವನಾಥ್(ಹುಣಸೂರು), ಮಹೇಶ್ ಕುಮಟಳ್ಳಿ(ಅಥಣಿ) ಶ್ರೀಮಂತ ಪಾಟೀಲ್(ಕಾಗವಾಡ) ಶಿವರಾಂ ಹೆಬ್ಬಾರ್(ಯಲ್ಲಾಪುರ) ಬಿಸಿ ಪಾಟೀಲ್(ಹಿರೇಕೆರೂರು) ಆನಂದ್ ಸಿಂಗ್ (ವಿಜಯ ನಗರ), ಡಾ.ಸುಧಾಕರ್(ಚಿಕ್ಕಬಳ್ಳಾಪುರ) ಬೈರತಿ ಬಸವರಾಜ್(ಕೆಆರ್ ಪುರ) ಎಸ್‍ಟಿ ಸೋಮಶೇಖರ್(ಯಶವಂತಪುರ), ಗೋಪಾಲಯ್ಯ(ಮಹಾಲಕ್ಷ್ಮಿ ಲೇಔಟ್), ನಾರಾಯಣ ಗೌಡ(ಕೆ.ಆರ್.ಪೇಟೆ) ಅವರಿಗೆ ಟಿಕೆಟ್ ನೀಡಲಾಗಿದೆ.

Leave a Reply

Your email address will not be published. Required fields are marked *