Wednesday, 22nd May 2019

Recent News

ಬಾಲಿವುಡ್ ಬಾದ್ ಶಾ ನಿಂದ ಗಂಭೀರ್‌ಗೆ ಪ್ರೀತಿಯ ಸಂದೇಶ

ಮುಂಬೈ: ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಗೌತಮ್ ಗಂಭೀರ್ ಅವರಿಗೆ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಪ್ರೀತಿಯ ಸಂದೇಶ ರವಾನಿಸಿದ್ದಾರೆ.

ಭಾರತ ಕ್ರಿಕೆಟ್ ತಂಡದ ಮಾಜಿ ಓಪನಿಂಗ್ ಬ್ಯಾಟ್ಸ್‌ಮನ್ ಗಂಭೀರ್ ಮಂಗಳವಾರ ಎಲ್ಲಾ ಮಾದರಿಯ ಕ್ರಿಕೆಟ್‍ನಿಂದ ನಿವೃತ್ತಿ ಘೋಷಿಸಿದ್ದರು. ಈ ಬಗ್ಗೆ ತಮ್ಮ ಮನದಾಳದ ಮಾತನ್ನಾಡಿರುವ ಶಾರುಖ್ ಖಾನ್ ರವರ ಸಂದೇಶ ಸೋಶಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದೆ.

ಬಾಲಿವುಡ್ ಸೂಪರ್ ಸ್ಟಾರ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಲೀಕ ಶಾರೂಖ್, ಕ್ರಿಕೆಟ್‍ಗೆ ವಿದಾಯ ಹೇಳಿದ ಗಂಭೀರ್ ಅವರಿಗೆ ಬರೀ ಅಭಿನಂದಿಸಿ ಶುಭ ಕೋರಿಲ್ಲ, ಬದಲಿಗೆ ಗಂಭೀರ್ ಅವರನ್ನು ವಿಶೇಷ ವ್ಯಕ್ತಿಯನ್ನಾಗಿ ಪರಿಗಣಿಸಿದ್ದಾರೆ.

ಗಂಭೀರ್ ಗೆ ಪ್ರೀತಿಯಿಂದ ಟ್ವೀಟ್ ಮಾಡಿರುವ ಶಾರೂಖ್, ‘ತಂಡದ ಮುಂದಾಳತ್ವಕ್ಕೆ ಮತ್ತು ಪ್ರೀತಿಗೆ ಧನ್ಯವಾದಗಳು ನನ್ನ ನಾಯಕನೇ. ವಿಶೇಷ ವ್ಯಕ್ತಿಯಾದ ನಿನ್ನನ್ನು ಅಲ್ಲಾ ಖುಷಿಯಾಗಿಟ್ಟಿರಲಿ. ನೀನಿನ್ನೂ ನಗುವಂತಾಗಲಿ’ ಎಂದು ಬರೆದುಕೊಂಡಿದ್ದಾರೆ.

ನಿವೃತ್ತಿ ಕುರಿತು ಆಂಗ್ಲ ಸುದ್ದಿವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿದ್ದ ಅವರು, ಸತತವಾಗಿ 15 ವರ್ಷ ಭಾರತ ದೇಶಕ್ಕಾಗಿ ನಾನು ಕ್ರಿಕೆಟ್ ಆಡಿದ್ದೇನೆ. ಈ ಸುಂದರವಾದ ಆಟದಿಂದ ಈಗ ನಿವೃತ್ತಿ ಬಯಸುತ್ತಿದ್ದೇನೆ. ನನ್ನ ಕೊನೆಯ ಪಂದ್ಯವನ್ನು ಡಿಸೆಂಬರ್ 6 ರಂದು ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯಲಿರುವ ಆಂಧ್ರ ವಿರುದ್ಧದ ರಣಜಿ ಪಂದ್ಯದಲ್ಲಿ ಆಡಲಿದ್ದೇನೆ. ಒಬ್ಬ ಬ್ಯಾಟ್ಸ್‍ಮನ್ ಆಗಿ ಸಮಯಕ್ಕೆ ತುಂಬಾ ಮಹತ್ವವನ್ನು ನೀಡಿದ್ದೇನೆ. ಈಗ ನನಗೆ ಸರಿಯಾದ ಸಮಯ ಬಂದಿದೆ ಎಂದು ಹೇಳಿದ್ದರು.

37 ವರ್ಷದ ಗೌತಮ್ ಗಂಭೀರ್ ಇದುವರೆಗೂ ಒಟ್ಟು 147 ಏಕದಿನ ಪಂದ್ಯಗಳನ್ನಾಡಿದ್ದು, 39.68ರ ಸರಾಸರಿಯಲ್ಲಿ 5,238 ರನ್ ಗಳಿಸಿದ್ದರು. ಇದರಲ್ಲಿ 11 ಶತಕ ಹಾಗೂ 34 ಅರ್ಧ ಶತಕಗಳನ್ನು ಒಳಗೊಂಡಿದೆ. 52 ಟೆಸ್ಟ್ ಪಂದ್ಯಗಳಲ್ಲಿ 41.95 ಸರಾಸರಿಯಂತೆ 4,154 ರನ್ ಹೊಡೆದಿದ್ದರು. ಇದರಲ್ಲಿ 9 ಶತಕ ಸೇರಿದಂತೆ 22 ಅರ್ಧ ಶತಕಗಳು ದಾಖಲಾಗಿವೆ. ಇದಲ್ಲದೇ ಟಿ-20ಯಲ್ಲಿ 37 ಪಂದ್ಯಗಳನ್ನಾಡಿದ್ದ ಅವರು, 27.41ರ ಸರಾಸರಿಯಲ್ಲಿ 932 ರನ್ ಬಾರಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *