Connect with us

International

ಭಾರತ ಪಾಕ್ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದೆ: ಪಾಕ್ ವಿದೇಶಾಂಗ ಸಚಿವ

Published

on

– ಗಮನ ಬೇರೆಡೆ ಸೆಳೆದು ದಾಳಿಗೆ ಪ್ಲಾನ್

ಇಸ್ಲಾಮಾಬಾದ್: ಚೀನಾ-ಭಾರತದ ಸಂಘರ್ಷದ ಕಡೆ ಗಮನ ಸೆಳೆದು ಭಾರತ ಪಾಕಿಸ್ತಾನದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದೆ ಎಂದು ಪಾಕ್ ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಷಿ ಆಧಾರ ರಹಿತ ಹೇಳಿಕೆ ನೀಡಿದ್ದಾರೆ.

ಈ ಕುರಿತು ಪಾಕ್ ಟಿವಿಯೊಂದಕ್ಕೆ ಸಂದರ್ಶನ ನೀಡಿರುವ ಅವರು, ನಮ್ಮ ದೇಶದ ಮೇಲೆ ಭಾರತ ದಾಳಿ ನಡೆಸಿದಲ್ಲಿ ಪಾಕಿಸ್ತಾನ ತಕ್ಕ ಉತ್ತರ ನೀಡಲಿದೆ. ಭಾರತ-ಚೀನಾದ ನಡುವೆ ನಡೆದ ಸಂಘರ್ಷದ ಕುರಿತು ಗಮನ ಸೆಳೆದು ಭಾರತ ಪಾಕಿಸ್ತಾನದ ಮೇಲೆ ದಾಳಿ ನಡೆಸಲು ಸಂಚು ರೂಪಿಸುತ್ತಿದೆ ಎಂದು ಹೇಳಿದ್ದಾರೆ.

ಈ ಹಿಂದೆ ಇಸ್ಲಾಮಾಬಾದ್‍ನಲ್ಲಿ ಭಾರತದ ರಾಯಭಾರ ಕಚೇರಿಯ ಇಬ್ಬರು ಕಾಣೆಯಾಗಿದ್ದರು. ಈ ಕುರಿತು ಭಾರತ ಖಡಕ್ ಎಚ್ಚರಿಕೆ ನೀಡಿದ ಹಿನ್ನೆಲೆ ಪಾಕಿಸ್ತಾನ ಪ್ರತಿಕ್ರಿಯಿಸಿತ್ತು. ಭಾರತದ ರಾಯಭಾರ ಕಚೇರಿಯ ಚಾಲಕರು ಎಂದು ಗುರುತಿಸಲ್ಪಟ್ಟ ಇಬ್ಬರು, ಪಾದಚಾರಿಗಳನ್ನು ಹೊಡೆದು ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಅವರನ್ನು ಬಂಧಿಸಲಾಗಿತ್ತು. ಪೊಲೀಸರು ಅವರ ವಾಹನವನ್ನು ಪರಿಶೀಲಿಸಿದಾಗ ನಕಲಿ ಕರೆನ್ಸಿ ಪತ್ತೆಯಾಗಿತ್ತು ಎಂದು ಸುಳ್ಳು ಹೇಳಿತ್ತು. ಅಲ್ಲದೆ ಇಬ್ಬರನ್ನೂ ಬಿಡುಗಡೆ ಮಾಡಿ ಭಾರತದ ಗಡಿ ತಲುಪಿಸಲಾಗಿದೆ ಎಂದು ಪಾಕಿಸ್ತಾನ ತಿಳಿಸಿತ್ತು.

ಇದೆಲ್ಲದರ ಮಧ್ಯೆ ಇದೀಗ ಪಾಕ್ ವಿದೇಶಾಂಗ ಸಚಿವ ಖುರೇಷಿ ಭಾರತದ ವಿರುದ್ಧ ಹರಿಹಾಯ್ದಿದ್ದಾರೆ. ಅಲ್ಲದೆ ಹಿಮಾಲಯ ಪ್ರದೇಶದಲ್ಲಿ ಚೀನಾ ಹೊಡೆತದಿಂದ ಮುಜುಗರಕ್ಕೊಳಗಾಗಿರುವ ಭಾರತ, ಇದೀಗ ಪಾಕಿಸ್ತಾನದ ಮೇಲೆ ದಾಳಿ ನಡೆಸಲು ಯತ್ನಿಸುತ್ತಿದೆ. ನಮ್ಮ ರಾಯಭಾರ ಕಚೇರಿಯ ಶೇ.50ರಷ್ಟು ಅಧಿಕಾರಿಗಳು ಮರಳಿದ ನಂತರ, ಭಾರತದ ರಾಯಭಾರ ಕಚೇರಿಯ ಅಧಿಕಾರಿಗಳನ್ನು ನಾವು ಮರಳಿಸುತ್ತೇವೆ ಎಂದು ಹೇಳಿದ್ದಾರೆ.