Friday, 13th December 2019

Recent News

ಅಪಘಾತದಲ್ಲಿ ‘ಮಗಳು ಜಾನಕಿ’ ಧಾರಾವಾಹಿ ನಟಿ ದುರ್ಮರಣ

ಬೆಂಗಳೂರು: ರಸ್ತೆ ಅಪಘಾತದಲ್ಲಿ ಕಿರುತೆರೆ ನಟಿ ಶೋಭಾ ಎಮ್.ವಿ ಅವರು ಬುಧವಾರ ಮೃತಪಟ್ಟಿದ್ದಾರೆ.

ಚಿತ್ರದುರ್ಗದ ಹೊರವಲಯ ರಾಷ್ಟ್ರೀಯ ಹೆದ್ದಾರಿ-4ರ ಕುಂಚಿಗನಾಳು ಗ್ರಾಮದಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಶೋಭಾ ಅವರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ನಟಿ ಶೋಭಾ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಕಿರುತೆರೆಯ ‘ಮಗಳು ಜಾನಕಿ’ ಧಾರಾವಾಹಿಯಲ್ಲಿ ಮೃತ ಶೋಭಾ ಅವರು ಮಂಗಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು.

ಮೃತ ಶೋಭಾ ಅವರು ನೈಜ ಅಭಿನಯದ ಮೂಲಕವೇ ಪ್ರೇಕ್ಷಕರ ಮನಗೆದ್ದಿದ್ದರು. ನಿಜ ಜೀವನದಲ್ಲೂ ಅತ್ಯಂತ ಸೌಮ್ಯ ಸ್ವಭಾವದವರಾಗಿದ್ದು, ಮಗಳು ಜಾನಕಿ ಧಾರಾವಾಹಿ ಸೇರಿದಂತೆ ಅನೇಕ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಶೋಭಾ ಅವರ ನಿಧನಕ್ಕೆ ‘ಮಗಳು ಜಾನಕಿ’ ಧಾರಾವಾಹಿ ತಂಡ ಮತ್ತು ಅಭಿಮಾನಿ ಬಳಗ ಸಂತಾಪ ಸೂಚಿಸಿದೆ.

 

ಮಗಳು ಜಾನಕಿ ಧಾರಾವಾಹಿ ನಿರ್ದೇಶಕ ಟಿ.ಎನ್ ಸೀತಾರಾಮ್ ಅವರು ಶೋಭಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ಮಗಳು ಜಾನಕಿಯಲ್ಲಿ ಮಂಗಳಕ್ಕನ ಪಾತ್ರ ಮಾಡುತ್ತಿದ್ದ ಶೋಭಾ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ ಎಂಬ ಸುದ್ದಿ ಬಂದಿದೆ. ಸದಾ ನಗುಮುಖದ, ಅಪಾರ ಪ್ರತಿಭೆಯ, ಸೌಜನ್ಯ ತುಂಬಿದ ಮಂಗಳಕ್ಕನ ಅನಿರೀಕ್ಷಿತ ಸಾವು ನನ್ನನ್ನು ದಿಗ್ಭ್ರಮೆಗೊಳಿಸಿದೆ” ಎಂದು ದುಃಖದಿಂದ ಸಂತಾಪ ಸೂಚಿಸಿದ್ದಾರೆ.

ಅಪಘಾತ ಹೇಗಾಯ್ತು?
ಒಟ್ಟು 6 ಜನರು ಇನ್ನೋವಾ ಕಾರಿನಲ್ಲಿ ಬೆಂಗಳೂರಿನಿಂದ ಬದಾಮಿಯ ಬನಶಂಕರಿ ದೇವಸ್ಥಾನಕ್ಕೆ ಹೋಗುತ್ತಿದ್ದರು. ಚಿತ್ರದುರ್ಗ ನಗರದ ಹೊರವಲಯದಲ್ಲಿ ಕಾರಿನ ಮುಂದಿನ ಗಾಲಿ ಏಕಾಏಕಿ ಸ್ಫೋಟಗೊಂಡಿದೆ. ಪರಿಣಾಮ ಕಾರು ಡಿವೈಡರ್ ಹಾರಿ ಎದುರಿನ ರಸ್ತೆಗೆ ಬಿದ್ದಿದೆ. ಇದೇ ವೇಳೆ ಚಿತ್ರದುರ್ಗದಿಂದ ಹಿರೀಯೂರು ಕಡೆಗೆ ಹೋಗುತ್ತಿದ್ದ ಲಾರಿ ಕಾರಿಗೆ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.

Leave a Reply

Your email address will not be published. Required fields are marked *