Recent News

ಬಂಧನಕ್ಕೂ 10 ದಿನ ಮೊದಲೇ ರಶೀದ್‍ಗೆ ನೋಟಿಸ್ ನೀಡ್ಬೇಕು: ದೆಹಲಿ ಕೋರ್ಟ್

– ದೇಶದ್ರೋಹ ಪ್ರಕರಣದ ಆರೋಪಿ ಶೆಹ್ಲಾ

ನವದೆಹಲಿ: ಸಾಮಾಜಿಕ ಹೋರಾಟಗಾರ್ತಿ, ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‍ಯು) ವಿದ್ಯಾರ್ಥಿ ಸಂಘಟನೆಯ ಮಾಜಿ ಉಪಾಧ್ಯಕ್ಷೆ ಶೆಹ್ಲಾ ರಶೀದ್ ಬಂಧನಕ್ಕೂ 10 ದಿನಗಳ ಮುನ್ನ ನೋಟಿಸ್ ನೀಡಬೇಕು ಎಂದು ದೆಹಲಿ ಕೋರ್ಟ್ ಆದೇಶಿಸಿದೆ.

ಶೆಹ್ಲಾ ರಶೀದ್ ಸಾಮಾಜಿಕ ಜಾಲತಾಣದಲ್ಲಿ ಭಾರತೀಯ ಸೈನ್ಯವನ್ನು ದೂಷಿಸಿದ್ದರು. ಈ ಪ್ರಕರಣದ ಸಂಬಂಧ ವಿಚಾರಣೆ ನಡೆಸಿದ ದೆಹಲಿ ಕೋರ್ಟ್, ಶೆಹ್ಲಾ ರಶೀದ್ ಅವರನ್ನು ಬಂಧಿಸುವ ಅಗತ್ಯವಿದ್ದಲ್ಲಿ 10 ದಿನಗಳ ಮೊದಲೇ ಬಂಧನ ನೋಟಿಸ್ ನೀಡಬೇಕು ಎಂದು ಪೊಲೀಸರಿಗೆ ನಿರ್ದೇಶನ ನೀಡಿದೆ. ಇದನ್ನೂ ಓದಿ: RSS, ನಿತಿನ್ ಗಡ್ಕರಿ ಸೇರಿ ಮೋದಿ ಹತ್ಯೆಗೆ ಪ್ಲಾನ್ – ಜೆಎನ್‍ಯು ವಿದ್ಯಾರ್ಥಿನಿ ಆರೋಪ

ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಕಾನೂನು ಸುವ್ಯವಸ್ಥೆ ಕಾಪಾಡುವ ಯಾವುದೇ ಅಧಿಕಾರವಿಲ್ಲ ಎಂದು ಜನರು ಹೇಳುತ್ತಿದ್ದಾರೆ. ಅವರನ್ನು ಶಕ್ತಿ ಹೀನರನ್ನಾಗಿ ಮಾಡಲಾಗಿದೆ. ಎಲ್ಲವೂ ಅರೆ ಸೈನಿಕರ ಕೈಯಲ್ಲಿದೆ. ಸಿಆರ್‍ಪಿಎಫ್ ಸಿಬ್ಬಂದಿ ಸೂಚನೆ ಮೇರೆಗೆ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರನ್ನು ವರ್ಗಾವಣೆ ಮಾಡಲಾಗಿದೆ. ಅಲ್ಲದೆ ಸಶಸ್ತ್ರ ಪಡೆಗಳು ರಾತ್ರಿ ಮನೆಗೆ ನುಗ್ಗಿ ದರೋಡೆ ಮಾಡುತ್ತಿವೆ ಎಂದು ಶೆಹ್ಲಾ ರಶೀದ್ ಟ್ವೀಟ್ ಮೂಲಕ ಆರೋಪ ಮಾಡಿದ್ದರು.

ಈ ಸಂಬಂಧ ಸುಪ್ರೀಂ ಕೋರ್ಟ್ ವಕೀಲ ಅಲೋಕ್ ಶ್ರೀವಾಸ್ತವ್ ಅವರು ದೂರು ನೀಡಿದ್ದರು. ಈ ದೂರಿನ ಅನ್ವಯ ದೆಹಲಿ ಪೊಲೀಸರು ಶೆಹ್ಲಾ ರಶೀದ್ ವಿರುದ್ಧ ಐಪಿಸಿ ಸೆಕ್ಷನ್ 124-ಎ (ದೇಶದ್ರೋಹ), 153 (ದೊಂಬಿ ಎಬ್ಬಿಸುವ ಸಲುವಾಗಿ ಹೊಣೆಗಾರಿಕೆ ಮರೆತು ಪ್ರಚೋದನೆ ಹೇಳಿಕೆ ನೀಡುವುದು), 153-ಎ (ಧರ್ಮ, ಜನಾಂಗ, ಜನ್ಮಸ್ಥಳ, ನಿವಾಸ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ವೈಷಮ್ಯವನ್ನು ಉತ್ತೇಜಿಸುವುದು) ಸೇರಿದಂತೆ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಕುರಿತು ಪ್ರತಿಕ್ರಿಯಿಸಿದ್ದ ವಕೀಲ ಅಲೋಕ್ ಶಿವಾಸ್ತವ್, ಭಾರತೀಯ ಸೇನೆಯ ಕುರಿತಾಗಿ ಶೆಹ್ಲಾ ರಶೀದ್ ಮಾಡಿದ ಆರೋಪ ಸಂಪೂರ್ಣ ಸುಳ್ಳು. ಅವರು ತಮ್ಮ ಆರೋಪಕ್ಕೆ ಯಾವುದೇ ಸಾಕ್ಷಿಯನ್ನು ಒದಗಿಸಿಲ್ಲ. ಈ ಮಾಹಿತಿಯನ್ನು ಆಧರಿಸಿ ಅಂತರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಪ್ರಕಟಿಸಿವೆ. ಈ ಮೂಲಕ ಭಾರತದ ಹೆಸರಿಗೆ ಕಳಂಕ ತರಲಾಗಿದೆ ಎಂದು ದೂರಿದ್ದರು.

Leave a Reply

Your email address will not be published. Required fields are marked *