Wednesday, 17th July 2019

ನರ್ಸ್, ವೈದ್ಯರು ಇಲ್ಲದ ವೇಳೆ ರೋಗಿ ಪ್ರಾಣ ಉಳಿಸಿದ ಸೆಕ್ಯುರಿಟಿ ಗಾರ್ಡ್

ಚಾಮರಾಜನಗರ: ವೈದ್ಯರು ಹಾಗೂ ನರ್ಸ್ ಇಲ್ಲದ ವೇಳೆ ರೋಗಿಯೊಬ್ಬರ ಗ್ಲುಕೋಸ್ ಬಾಟಲಿಯನ್ನು ಬದಲಾಯಿಸುವ ಮೂಲಕ ಸೆಕ್ಯುರಿಟಿ ಗಾರ್ಡ್ ಸತೀಶ್ ಮಾನವೀಯತೆ ಮೆರೆದಿರುವ ಘಟನೆ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.

ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೊಬ್ಬರಿಗೆ ಗ್ಲುಕೋಸ್ ಬಾಟಲ್ ಅಳವಡಿಸಲಾಗಿತ್ತು. ಗ್ಲುಕೋಸ್ ಮುಗಿಯುವ ಹಂತಕ್ಕೆ ಬಂದಿತ್ತು. ಆದರೆ ಆ ಸಂದರ್ಭದಲ್ಲಿ ವೈದ್ಯರಾಗಲಿ, ದಾದಿಯರಾಗಲಿ ಅಲ್ಲಿ ಇರಲಿಲ್ಲ. ರೋಗಿಯ ಸಂಬಂಧಿಕರು ನರ್ಸ್ ಗಾಗಿ ಹುಡುಕಾಡಿದ್ದಾರೆ. ಆದರೆ ಆ ಸಂದರ್ಭದಲ್ಲಿ ಅವರು ಹೊರಹೋಗಿದ್ದರು ಎನ್ನಲಾಗಿದೆ.

ಇದನ್ನು ಗಮನಿಸಿದ ಅಲ್ಲಿಯೇ ಇದ್ದ ಸೆಕ್ಯುರಿಟಿ ಗಾರ್ಡ್ ತಕ್ಷಣ ಧಾವಿಸಿ ಗ್ಲುಕೋಸ್ ಬಾಟಲಿ ಬದಲಿಸಿ ನರ್ಸ್ ಮಾಡಬೇಕಾದ ಕೆಲಸವನ್ನು ತಾನೇ ಮಾಡಿದ್ದಾರೆ. ಒಂದು ವೇಳೆ ಖಾಲಿಯಾಗಿದ್ದ ಗ್ಲುಕೋಸ್ ಬಾಟಲಿಯನ್ನು ತಕ್ಷಣ ಬದಲಿಸದೆ ಇದ್ದಿದ್ದರೆ ಅದು ರೋಗಿಯ ರಕ್ತವನ್ನೇ ವಾಪಸ್ ಎಳೆದು ರೋಗಿಗೆ ಅಪಾಯ ಉಂಟಾಗುವ ಸಾಧ್ಯತೆಗಳಿದ್ದವು.

ಜಿಲ್ಲಾಸ್ಪತ್ರೆಯಲ್ಲಿ ಅಗತ್ಯ ಪ್ರಮಾಣದಲ್ಲಿ ವೈದ್ಯರು ಹಾಗು ನರ್ಸ್ ಗಳಿದ್ದರು ಇಂತಹ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಈ ಬಗ್ಗೆ ಅಧಿಕಾರಿಗಳಿಗೆ ಅನೇಕ ಬಾರಿ ದೂರಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ರೋಗಿಗಳ ಪ್ರಾಣದೊಂದಿಗೆ ಚಲ್ಲಾಟವಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *