Connect with us

Belgaum

ಅಣ್ಣನ ಟೀಂಗೆ ಫುಲ್ ಟೈಮ್ ಗೇಟ್ ಪಾಸ್ ಕೊಟ್ಟು ಮನೆಗೆ ಕಳಿಸಬೇಕು: ಸತೀಶ್ ಜಾರಕಿಹೊಳಿ ಕಿಡಿ

Published

on

ಚಿಕ್ಕೋಡಿ (ಬೆಳಗಾವಿ): ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಆ್ಯಂಡ್ ಟೀಂಗೆ ಫುಲ್ ಟೈಮ್ ಗೇಟ್ ಪಾಸ್ ಕೊಟ್ಟು ಮನೆಯಲ್ಲಿ ಕೂರಿಸಬೇಕು ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಕಿಡಿಕಾರಿದ್ದಾರೆ.

ಕಾಗವಾಡ ತಾಲೂಕಿನ ಜೂಗುಳ ಗ್ರಾಮದಲ್ಲಿ ಪ್ರಚಾರ ನಡೆಸಿ ಮಾತನಾಡಿದ ಅವರು, ಅನರ್ಹ ಶಾಸಕರಾದ ಮಹೇಶ್ ಕುಮಟಳ್ಳಿ ಹಾಗೂ ಶ್ರೀಮಂತ್ ಪಾಟೀಲ್ ಅವರ ಕ್ಯಾಪ್ಟನ್ ಕೃಪಾಮಯ ಗೋಕಾಕ್‍ನಲ್ಲಿದ್ದಾರೆ. ಉಪ ಚುನಾವಣೆಯಲ್ಲಿ ಈ ಇಬ್ಬರು ಬಿಜೆಪಿ ಅಭ್ಯರ್ಥಿಗಳು ಗೆದ್ದರೆ ರಮೇಶ್ ಜಾರಕಿಹೊಳಿ ಅವರು ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಬೆನ್ನು ಬೀಳುತ್ತಾರೆ. ಇವರೆಲ್ಲರೂ ಸೇರಿ ಸಿಎಂ ಯಡಿಯೂರಪ್ಪನವರ ಬಿಳಿ ಬಟ್ಟೆಗಳನ್ನ ಕರಿ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತೊಂದರೆ ಕೊಟ್ಟರು. ಸಿಎಂ ಯಡಿಯೂರಪ್ಪ ಅವರಿಗೆ ಕೊಡುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ? 10ರಿಂದ 20 ಸಾವಿರ ಕೋಟಿ ರೂ. ಕೊಡಿ ಇಲ್ಲಾ ಅಂದರೆ ಪಕ್ಷ ಬಿಟ್ಟು ಹೋಗುತ್ತೇವೆ ಎಂದು ಬ್ಲ್ಯಾಕ್‍ಮೇಲ್ ಮಾಡುವ ಶಾಸಕರು ನಮಗೆ ಬೇಡ. ಅನರ್ಹ ಶಾಸಕರದ್ದು ಸೇವಾ ಮನೋಭಾವ ಅಲ್ಲ, ಬ್ಲ್ಯಾಕ್‍ಮೇಲ್ ತಂತ್ರ ಎಂದು ಕುಟುಕಿದರು.

ನಾವು ಸಹ ಗೋಕಾಕ್ ಕ್ಯಾಪ್ಟನ್ ರಮೇಶ್ ಜಾರಕಿಹೊಳಿ ಅವರನ್ನ ಮನೆಗೆ ಕಳುಹಿಸುತ್ತೇವೆ. ಕಾಗವಾಡ ಹಾಗೂ ಅಥಣಿ ಕ್ಷೇತ್ರದ ಮತದಾರರು ಕೂಡ ಶ್ರೀಮಂತ್ ಪಾಟೀಲ್ ಮತ್ತು ಮಹೇಶ್ ಕುಮಟಳ್ಳಿ ಅವರನ್ನು ಮನೆಗೆ ಕಳುಹಿಸಿ. ಇಂತಹ ರಾಜಕಾರಣಿಗಳಿಗೆ ಫುಲ್ ಟೈಮ್ ಗೇಟ್ ಪಾಸ್ ಕೊಟ್ಟು ಮನೆಯಲ್ಲಿ ಕೂರಿಸಬೇಕು ಎಂದು ಗುಡುಗಿದರು.