Connect with us

Bengaluru City

ಮಂತ್ರಿ ಮಾಲ್‍ನಲ್ಲಿ ಬ್ರಹ್ಮಚಾರಿಯ ಲೈವ್ ಗಾನಾ!

Published

on

– ಇದು ಚಿತ್ರತಂಡದ ವಿನೂತನ ಪ್ರಯೋಗ!

ಬೆಂಗಳೂರು:  ನೀನಾಸಂ ಸತೀಶ್ ಅಭಿನಯದ ಬ್ರಹ್ಮಚಾರಿ ಚಿತ್ರ ಹಾಡು ಮತ್ತು ಟ್ರೇಲರ್ ಗಳೊಂದಿಗೆ ಭರ್ಜರಿಯಾಗಿಯೇ ಸದ್ದು ಮಾಡುತ್ತಿದೆ. ನೀನಾಸಂ ಸತೀಶ್ ಚಂಬಲ್‍ನಂಥಾ ರಿಯಲಿಸ್ಟಿಕ್ ಚಿತ್ರದಲ್ಲಿ ಖಡಕ್ ಅಧಿಕಾರಿಯಾಗಿ ಮಿಂಚಿ ಮತ್ತೆ ತಮ್ಮ ಅಭಿಮಾನಿಗಳಿಗೆ ಭರಪೂರ ಮನೋರಂಜನೆ ನೀಡಲು ಮುಂದಾಗಿದ್ದಾರೆ. ಮೊದಲಿನಿಂದಲೂ ಮಂಡ್ಯ ಶೈಲಿಯ ಮನೋರಂಜನಾತ್ಮಕ ಪಾತ್ರಗಳಲ್ಲಿ ಮಿಂಚುತ್ತಾ ಬಂದಿದ್ದ ಸತೀಶ್ ಈಗ ನಾಯಕನಾಗಿಯೂ ವೆರೈಟಿ ಪಾತ್ರಗಳಲ್ಲಿ ನಟಿಸಿ ಬಹ್ಮಚಾರಿ ಮೂಲಕ ಮತ್ತೊಂದು ಮಜಲಿನತ್ತ ಹೊರಳಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಟ್ರೇಲರ್ ಮೂಲಕ ಮಜಾ ಕೊಟ್ಟಿದ್ದ ಬ್ರಹ್ಮಚಾರಿ ಚಿತ್ರ ತಂಡವೀಗ ಕನ್ನಡ ಚಿತ್ರರಂಗಕ್ಕೆ ಹೊಸತಾದ ಪ್ರಯೋಗವೊಂದರ ಮೂಲಕ ಹಾಡೊಂದನ್ನು ಬಿಡುಗಡೆ ಮಾಡಲು ತಯಾರಾಗಿದೆ.

ಯಾವುದೇ ಸಿನಿಮಾ ಹಾಡುಗಳನ್ನು ಯೂಟ್ಯೂಬ್ ಮೂಲಕ ನೇರವಾಗಿ ಬಿಡುಗಡೆ ಮಾಡೋ ಟ್ರೆಂಡ್ ಚಾಲ್ತಿಯಲ್ಲಿದೆ. ಆದರೆ ನಿರ್ದೇಶಕ ಚಂದ್ರಮೋಹನ್ ಮಾತ್ರ ಬ್ರಹ್ಮಚಾರಿಯ ಹಾಡೊಂದನ್ನು ಅತ್ಯಂತ ವಿಶಿಷ್ಟವಾದ ರೀತಿಯಲ್ಲಿ ಬಿಡುಗಡೆ ಮಾಡಲು ಯೋಜನೆ ರೂಪಿಸಿದ್ದಾರೆ. ಶನಿವಾರ ಮಂತ್ರಿ ಮಾಲ್‍ನಲ್ಲಿ ಈ ಲೈವ್ ಹಾಡಿನ ಕಾರ್ಯಕ್ರಮ ನಡೆಯಲಿದೆ. ಸಂಜೆ ಆರು ಘಂಟೆಗೆ ಸರಿಯಾಗಿ ಸಂಜಿತ್ ಹೆಗ್ಡೆ ಮತ್ತು ಸುಪ್ರಿಯಾ ಲೈವ್ ಆಗಿಯೇ ಈ ಹಾಡನ್ನು ಹಾಡಲಿದ್ದಾರೆ. ಸಾವಿರಾರು ಜನರ ಸಮ್ಮುಖದಲ್ಲಿ ಈ ಹಾಡನ್ನು ಬಿಡುಗಡೆ ಮಾಡಲಾಗುತ್ತದೆ.

ಈ ಕಾರ್ಯಕ್ರಮ ಸುಮಾರು ಒಂದು ಘಂಟೆಗಳ ಕಾಲ ನಡೆಯಲಿದೆ. ಇದರ ವೀಡಿಯೋ ಕವರೇಜ್ ಮಾಡಿಕೊಳ್ಳುವ ಅವಕಾಶವನ್ನೂ ಸಹ ಚಿತ್ರತಂಡ ಕಲ್ಪಿಸಿದೆ. ಈ ಕಾರ್ಯಕ್ರಮದಲ್ಲಿ ನೀವುಗಳೂ ಭಾಗಿಯಾಗಿ ಬ್ರಹ್ಮಚಾರಿಯ ಹಾಡನ್ನು ಲೈವ್ ಆಗಿಯೇ ಆಸ್ವಾದಿಸಬಹುದು. ಚಿತ್ರತಂಡದೊಂದಿಗೆ ಬೆರೆತು ಈ ಅಪರೂಪದ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು. ಅಂದಹಾಗೆ ಇದು ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಮೊದಲ ಪ್ರಯೋಗ. ಇದು ಸಾಧ್ಯವಾಗುತ್ತಿರೋದು ನಿರ್ಮಾಪಕ ಉದಯ್ ಮೆಹ್ತಾರ ಮಹತ್ವಾಕಾಂಕ್ಷೆಯಿಂದ. ಅವರು ಇಡೀ ಚಿತ್ರ ವಿಶೇಷತೆಗಳಿಂದಲೇ ಮಿಂಚಬೇಕೆಂಬ ಹಂಬಲ ಹೊಂದಿರುವ ಅಪರೂಪದ ನಿರ್ಮಾಪಕ. ಈ ಕಾರಣದಿಂದಲೇ ಚಿತ್ರತಂಡದ ಈ ಹೊಸಬಗೆಯ ಆಲೋಚನೆಗೆ ಅವರು ಸಾಥ್ ಕೊಟ್ಟಿದ್ದಾರೆ.

ಬ್ರಹ್ಮಚಾರಿಯ ನವೀನ್ ಸಜ್ಜು ಹಾಡಿರೋ ಹಾಡೊಂದು ಟ್ರೆಂಡ್ ಸೆಟ್ ಮಾಡಿದೆ. ಇದೀಗ ಈ ಹಾಡನ್ನು ಬಿಡುಗಡೆ ಮಾಡಲು ರೆಡಿಯಾಗಲಾಗಿದೆ. ಧರ್ಮವಿಶ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಹಾಡನ್ನು ಕವಿರತ್ನ ಡಾ ವಿ ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಸಂಜಿತ್ ಹೆಗ್ಡೆ ಮತ್ತು ಸುಪ್ರಿಯಾ ಅದಕ್ಕೆ ಧ್ವನಿಯಾಗಿದ್ದಾರೆ. ಆದರೆ ಈ ಹಾಡಿನ ಗುಣ ಲಕ್ಷಣಗಳೇನೆಂಬುದನ್ನು ಮಾತ್ರ ಚಿತ್ರತಂಡ ಸರ್‍ಪ್ರೈಸ್ ಆಗಿಟ್ಟಿದೆ. ಅಂತೂ ಈ ಹಾಡೂ ಕೂಡಾ ಬ್ರಹ್ಮಚಾರಿಯನ್ನು ಮತ್ತೆ ಪ್ರೇಕ್ಷಕ ವಲಯದಲ್ಲಿ ಮಿರ ಮಿರ ಮಿಂಚುವಂತೆ ಮೂಡಿ ಬರೋದಂತೂ ಖಚಿತ!