Sunday, 15th September 2019

ಜಡೇಜಾ ಬಳಿ ಕ್ಷಮೆ ಕೋರಿದ ಸಂಜಯ್ ಮಂಜ್ರೇಕರ್

ಲಂಡನ್: ಟೀಂ ಇಂಡಿಯಾ ಆಲ್‍ರೌಂಡರ್ ರವೀಂದ್ರ ಜಡೇಜಾ ಪರಿಪೂರ್ಣ ಆಟಗಾರನಲ್ಲ ಎಂದು ಟೀಕೆ ಮಾಡಿದ್ದ ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್ ಅವರು ವಿಶ್ವಕಪ್ ಸೆಮಿಫೈನಲ್ ಬಳಿಕ ಕ್ಷಮೆ ಕೋರಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯದ ಬಳಿಕ ಐಸಿಸಿ ಸಂದರ್ಶನದಲ್ಲಿ ಮಾತನಾಡಿದ ಸಂಜಯ್ ಮಂಜ್ರೇಕರ್, ನನ್ನ ಎಲ್ಲಾ ದೃಷ್ಟಿಕೋನಗಳನ್ನು ಜಡೇಜಾ ಇಂದಿನ ಪಂದ್ಯದಲ್ಲಿ ಚೂರು ಚೂರು ಮಾಡಿದ್ದು, ನನ್ನ ಅಭಿಪ್ರಾಯ ತಪ್ಪು ಎಂದು ಸಾಬೀತು ಪಡಿಸಿದ್ದಾರೆ. ಪಂದ್ಯದಲ್ಲಿ ಅವರ ಬೌಲಿಂಗ್ ಎಕಾನಮಿ, ಬ್ಯಾಟಿಂಗ್ ನಲ್ಲಿ ಅವರ ಪ್ರದರ್ಶನ ಅತ್ಯುತ್ತಮವಾಗಿತ್ತು. ಅವರು ಪಂದ್ಯದಲ್ಲಿ ಸಂಭ್ರಮಿಸಿದ ವೇಳೆ ನನಗಾಗಿ ಹುಡುಕಾಟ ನಡೆಸಿದ್ದರು ಎನಿಸುತ್ತದೆ. ಆದರೆ ನಾನು ಅವರ ಬಳಿ ಕ್ಷಮೆ ಕೋರುತ್ತೇನೆ ಎಂದು ಹೇಳಿದ್ದಾರೆ.

ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಪಂದ್ಯದ ವೇಳೆ ವೀಕ್ಷಕ ವಿವರಣೆ ನೀಡಿದ್ದ ಮಂಜ್ರೇಕರ್ ಅವರು, ನಾನು ಸಣ್ಣಪುಟ್ಟ ಆಟಗಾರರ ಅಭಿಮಾನಿಯಲ್ಲ. ಟೆಸ್ಟ್ ಪಂದ್ಯದಲ್ಲಿ ಜಡೇಜಾ ನಿಜವಾಗಿಯೂ ಬೌಲರ್. ಆದರೆ 50 ಓವರ್‍ಗಳ ಪಂದ್ಯದಲ್ಲಿ ಆ ಕಡೆ ಬ್ಯಾಟ್ಸ್ ಮನ್ ಅಲ್ಲ, ಈ ಕಡೆ ಸ್ಪಿನ್ ಬೌಲರ್ ಅಲ್ಲ ಹೇಳಿ ಮೂದಲಿಸಿದ್ದರು.

ಚರ್ಚೆ ಜೋರು ಆಗುತ್ತಿದ್ದಂತೆ ಜಡೇಜಾ, ನೀವು ಆಡಿರುವ ಪಂದ್ಯಗಳಿಗಿಂತ ಎರಡು ಪಟ್ಟು ಪಂದ್ಯವಾಡಿದ್ದೇನೆ. ಈಗಲೂ ಆಡುತ್ತಿದ್ದೇನೆ. ಸಾಧನೆ ಮಾಡಿದವರನ್ನು ಗೌರವಿಸಲು ಕಲಿತುಕೊಳ್ಳಿ. ನಿಮ್ಮ ಬೇಧಿ ಮಾತುಗಳನ್ನು ಸಾಕಷ್ಟು ಕೇಳಿದ್ದೇನೆ ಎಂದು ಖಾರವಾಗಿ ಬರೆದು ಮಂಜ್ರೇಕರ್ ಅವರಿಗೆ ಟ್ಯಾಗ್ ಮಾಡಿ ತಿರುಗೇಟು ನೀಡಿದ್ದರು. ಸಾಮಾಜಿಕ ಜಾಲತಾಣದಲ್ಲೂ ಮಂಜ್ರೇಕರ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.

ಸೆಮಿ ಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್‍ನಲ್ಲಿ ಜಡೇಜಾ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಪಂದ್ಯದಲ್ಲಿ 10 ಓವರ್ ಎಸೆದು 3.40 ಎಕಾನಮಿಯಲ್ಲಿ 34 ರನ್ ನೀಡಿ 1 ವಿಕೆಟ್ ಪಡೆದಿದ್ದು ಮಾತ್ರ ಅಲ್ಲದೇ ರೋಸ್ ಟೈಲರ್ ಅವರನ್ನು ರನೌಟ್ ಮಾಡಿದ್ದರು. ಬ್ಯಾಟಿಂಗ್‍ನಲ್ಲಿ ಸೋಲಿನತ್ತ ಮುಖಮಾಡಿದ್ದ ಭಾರತವನ್ನು ಗೆಲುವಿನತ್ತ ತಂದಿದ್ದೆ ಜಡೇಜಾ. 30.3 ಓವರ್ ಗಳಲ್ಲಿ 92 ರನ್ ಗಳಿಗೆ 6 ವಿಕೆಟ್ ಕಳೆದು ಸಂಕಷ್ಟದಲ್ಲಿದ್ದಾಗ ಕ್ರೀಸ್ ಬಂದ ಜಡೇಜಾ 59 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಿಡಿಸಿ 77 ರನ್ ಗಳಿಸಿದ್ದರು. ಅಲ್ಲದೇ ಧೋನಿ ಅವರೊಂದಿಗೆ 7ನೇ ವಿಕೆಟ್‍ಗೆ 116 ರನ್ ಜೊತೆಯಾಟ ನೀಡಿದ್ದರು. ಆದರೆ ಅಂತಿಮ ಹಂತದಲ್ಲಿ ಸಿಕ್ಸರ್ ಸಿಡಿಸಲು ಯತ್ನಿಸಿದ ಜಡೇಜಾ 59 ಎಸೆತಗಳಲ್ಲಿ 77 ರನ್(4 ಬೌಂಡರಿ, 4 ಸಿಕ್ಸರ್) ಗಳಿಸಿ ಬೋಲ್ಟ್‍ಗೆ ವಿಕೆಟ್ ಒಪ್ಪಿಸಿದ್ದರು.

Leave a Reply

Your email address will not be published. Required fields are marked *