Connect with us

Bengaluru City

ಕನ್ನಡದ ಕಂಪಿನೊಂದಿಗೆ ‘ಕಸ್ತೂರಿ ಮಹಲ್’ ಸೇರಿದ ಶಾನ್ವಿ ಶ್ರೀವಾತ್ಸವ್!

Published

on

ಒಂದು ವೈರಸ್ ಸೃಷ್ಟಿಸಿದ ಭೀತಿಯ ವಾತಾವರಣದಿಂದ ಥಂಡಾ ಹೊಡೆದಿದ್ದ ಚಿತ್ರರಂಗವೀಗ ಮೆಲ್ಲಗೆ ಕಾರ್ಯಾರಂಭ ಮಾಡುತ್ತಿದೆ. ಅದರ ಭಾಗವಾಗಿಯೇ ಒಂದಷ್ಟು ಸಿನಿಮಾಗಳ ಕಡೆಯಿಂದ ಸುದ್ದಿಗಳು ಹೊರಬೀಳಲಾರಂಭಿಸಿವೆ. ಇದೀಗ ಖ್ಯಾತ ನಿರ್ದೇಶಕ ದಿನೇಶ್ ಬಾಬು ಸಾರಥ್ಯದ ‘ಕಸ್ತೂರಿ ಮಹಲ್’ ಕೂಡಾ ಸುದ್ದಿ ಕೇಂದ್ರದಲ್ಲಿದೆ. ಅದಕ್ಕೆ ಆರಂಭಿಕ ಕಾರಣ ನಾಯಕಿಯ ಬದಲಾವಣೆ. ಆ ದಿಸೆಯಲ್ಲೀಗ ಕಸ್ತೂರಿ ಮಹಲ್‍ಗೆ ಅಪ್ಪಟ ಕನ್ನಡದ ಕಂಪಿನೊಂದಿಗೆ ಶಾನ್ವಿ ಶ್ರೀವಾತ್ಸವ್ ಅವರ ಆಗಮನವಾಗಿದೆ.

ಕಸ್ತೂರಿ ಮಹಲ್ ಎಂಬುದು ಹಿರಿಯ ನಿರ್ದೇಶಕ ದಿನೇಶ್ ಬಾಬು ಅವರ ಹೊಸ ಕನಸು. ಅದು ಕೊರೊನಾ ಮಾರಿ ಮೈಮುರಿದು ಹೂಂಕರಿಸುವ ಮುನ್ನವೇ ಒಂದಷ್ಟು ಸುದ್ದಿ ಮಾಡಿತ್ತು. ಆರಂಭ ಕಾಲದಲ್ಲಿ ಈ ಸಿನಿಮಾಗೆ ರಚಿತಾ ರಾಮ್ ನಾಯಕಿ ಎಂಬ ಮಾತು ಕೇಳಿ ಬಂದಿತ್ತು. ಆದರೆ ಇತ್ತೀಚೆಗೆ ಖುದ್ದು ದಿನೇಶ್ ಬಾಬು ಅವರೇ ಖಚಿತಪಡಿಸಿದ್ದರು. ಅದಾಗಿ ಈಗ ಒಂದು ವಾರವಷ್ಟೇ ಮಗುಚಿಕೊಂಡಿದೆ. ಅಷ್ಟರಲ್ಲಿಯೇ ಬಟ್ಟಲುಗಣ್ಣುಗಳ ಚೆಲುವೆ ಶಾನ್ವಿ ಶ್ರೀವಾತ್ಸವ್ ನಾಯಕಿಯ ಪಟ್ಟವನ್ನ ತಮ್ಮದಾಗಿಸಿಕೊಂಡಿದ್ದಾರೆ.

ಈಗಾಗಲೇ ಕಸ್ತೂರಿ ಮಹಲ್ ಚಿತ್ರದ ತಾರಾಗಣ ಮತ್ತು ತಾಂತ್ರಿಕ ವರ್ಗ ನಿಕ್ಕಿಯಾಗಿದೆ. ಚಿತ್ರತಂಡ ಅದನ್ನೆಲ್ಲ ಹಾಗೆಯೇ ಮುಂದುವರೆಸಲು ತೀರ್ಮಾನಿಸಿದೆಯಂತೆ. ಈಗ ಆಗಿರೋದು ನಾಯಕಿಯ ಬದಲಾವಣೆ ಮಾತ್ರ. ಅತ್ತ ಈ ವಿಚಾರವನ್ನು ಚಿತ್ರತಂಡ ಹೇಳಿಕೊಳ್ಳುತ್ತಲೇ ಇತ್ತ ಶಾನ್ವಿ ಶ್ರೀವಾತ್ಸವ್ ಸಾಮಾಜಿಕ ಜಾಲತಾಣದ ಮೂಲಕ ಥ್ರಿಲ್ ಆಗಿಯೇ ಈ ವಿಚಾರವನ್ನ ಹಂಚಿಕೊಂಡಿದ್ದಾರೆ. ಹೀಗೆ ತನ್ನ ಮುಂದಿನ ಸಿನಿಮಾ ಬಗ್ಗೆ ಹೇಳಿಕೊಂಡ ರೀತಿಯಿಂದಲೇ ಸಮಸ್ತ ಕನ್ನಡಿಗರ ಮನಸು ಗೆದ್ದಿದ್ದಾರೆ.

 

View this post on Instagram

 

Next ❤️ Kasturi mahal .

A post shared by Shanvi sri (@shanvisri) on

ಶಾನ್ವಿ ಶ್ರೀವಾತ್ಸವ್ ಮೂಲತಃ ಪರಭಾಷಾ ಹುಡುಗಿ. ಒಂದು ಹಾರರ್ ಮೂವಿಯ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದ ಈ ಹುಡುಗಿ ಇಲ್ಲಿ ನೆಲೆ ಕಂಡುಕೊಂಡಿರೋದು ತನ್ನ ಪ್ರತಿಭೆ ಮತ್ತು ಹೊಸ ಕಲಿಕೆಯ ಉತ್ಸಾಹದಿಂದಲೇ. ಮೊದಲ ಸಿನಿಮಾದಿಂದಲೇ ಪ್ರೀತಿ ಕೊಟ್ಟ ಕನ್ನಡ ಭಾಷೆಯ ಮೇಲೆ ಅತೀವ ಮೋಹ ಬೆಳೆಸಿಕೊಂಡಿದ್ದ ಶಾನ್ವಿ, ಆ ನಂತರದಲ್ಲಿ ಗಂಭೀರವಾಗಿಯೇ ಕನ್ನಡ ಕಲಿಕೆ ಆರಂಭಿಸಿದ್ದರಂತೆ. ಯಾವುದೇ ಸಂದರ್ಶನಕ್ಕೆ ಹೋದರೂ ಕನ್ನಡದಲ್ಲಿಯೇ ಮಾತಾಡಲು ಪ್ರಯತ್ನಿಸುತ್ತಾ ಈಕೆ ಕನ್ನಡದ ಹೆಣ್ಣುಮಗಳಂತೆಯೇ ಬೆರೆತು ಹೋಗಿದ್ದಾರೆ.

ಇದೀಗ ಅವನೇ ಶ್ರೀಮನ್ನಾರಾಯಣ ಸಿನಿಮಾ ನಂತರದ ತಮ್ಮ ಯಾನವನ್ನೂ ಕೂಡಾ ಅವರ ಅಚ್ಚ ಕನ್ನಡದಲ್ಲಿಯೇ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಾನು ಕಸ್ತೂರಿ ಮಹಲ್‍ಗೆ ನಾಯಕಿಯಾದ ಸುದ್ದಿಯನ್ನ ಶಾನ್ವಿ ಹಂಚಿಕೊಂಡಿದ್ದಾರೆ. ತನಗೆ ಸಿಗುತ್ತಿರೋ ಒಳ್ಳೆ ಪಾತ್ರಗಳ ಯಾದಿಯಲ್ಲಿ ಕಸ್ತೂರಿ ಮಹಲ್ ಚಿತ್ರದ ಪಾತ್ರ ಮಹತ್ವದ್ದು ಎಂಬರ್ಥದಲ್ಲಿ ಬರೆದುಕೊಂಡಿದ್ದಾರೆ. ಇದೇ ಖುಷಿಯಲ್ಲಿ ಅವರು ಚಿತ್ರೀಕರಣಕ್ಕೆ ಅಣಿಯಾಗಿದ್ದಾರೆ. ಚಿತ್ರ ತಂಡ ಕೂಡಾ ಅದಕ್ಕಾಗಿ ಸನ್ನದ್ಧವಾಗಿದೆ.

ದಿನೇಶ್ ಬಾಬು ಸಿನಿಮಾ ಅಂದ ಮೇಲೆ ಅದರ ಬಗ್ಗೆ ಕನ್ನಡ ಪ್ರೇಕ್ಷಕರಲ್ಲೊಂದು ಕುತೂಹಲ ಇದ್ದೇ ಇರುತ್ತೆ. ಇದುವರೆಗೂ ಅನೇಕ ಅತ್ಯುತ್ತಮ ಸಿನಿಮಾಗಳನ್ನು ಕೊಟ್ಟಿರೋ ಅವರು ಈ ಬಾರಿ ಮತ್ತೊಂದು ಅದ್ಭುತ ಕಥೆಯೊಂದಿಗೇ ಆಗಮಿಸುತ್ತಿದ್ದಾರೆ. ಅಂದಹಾಗೆ, ಈ ಸಿನಿಮಾದಲ್ಲಿ ಶ್ರುತಿ ಪ್ರಕಾಶ್, ಸ್ಕಂದ ಅಶೋಕ್, ರಂಗಾಯಣ ರಘು, ನಾರಾಯಣ ಸ್ವಾಮಿ, ಕಾಶಿಮಾ ಮುಂತಾದವರ ತಾರಾಗಣವಿರಲಿದೆ. ಉಳಿದಂತೆ ಪಿಕೆಹೆಚ್ ದಾಸ್ ಛಾಯಾಗ್ರಹಣ, ಸೌಂದರ್ ರಾಜ್ ಸಂಕಲನ ಹೊಂದಿರೋ ಕಸ್ತೂರಿ ಮಹಲ್ ಶ್ರೀ ಭವಾನಿ ಆರ್ಟ್ಸ್ ಮತ್ತು ರುಬಿನ್ ರಾಜ್ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣವಾಗುತ್ತಿದೆ.

Click to comment

Leave a Reply

Your email address will not be published. Required fields are marked *