Connect with us

Bengaluru City

ಜೈಲಿನಲ್ಲಿ ಸೊಳ್ಳೆ ಕಚ್ತಿದೆಂದು ನಿದ್ರಿಸದೆ ಸಂಜನಾ ರಂಪಾಟ!

Published

on

ಬೆಂಗಳೂರು: ಕಳೆದ ನಾಲ್ಕು ದಿನಗಳಿಂದ ಪರಪ್ಪನ ಅಗ್ರಹಾರ ಜೈಲು ಸೇರಿರುವ ತುಪ್ಪದ ಬೆಡಗಿ ಏನು ಮಾಡಬೇಕೆಂದು ತಿಳಿಯದೇ ಒದ್ದಾಡುತ್ತಿದ್ದಾರೆ. ಈಗ ಸಂಜನಾ ಕೂಡ ಅವರಿಗೆ ಸಾಥ್ ಕೊಟ್ಟಿದ್ದಾರೆ. ಇಬ್ಬರೂ ಒಂದೇ ಕೋಣೆಯಲ್ಲಿ ವಾಸ ಮಾಡುತ್ತಿದ್ದಾರೆ.

ಇಷ್ಟು ದಿನ ಸುಪ್ಪತ್ತಿಗೆಯಲ್ಲಿದ್ದ ನಟಿಮಣಿಯರು ಈಗ ಜೈಲು ಸೇರಿ ಪಡಬಾರದ ಕಷ್ಟ ಪಡುತ್ತಿದ್ದಾರೆ. ರಾಗಿಣಿ ಜೈಲುವಾಸ 4ನೇ ದಿನಕ್ಕೆ ಕಾಲಿಟ್ಟಿದ್ದರೆ, ಸಂಜನಾ ಜೈಲುವಾಸ ಒಂದು ದಿನ ಪೂರೈಸಿದೆ. ಜೈಲು ಅಧಿಕಾರಿಗಳು ಸಂಜನಾ-ರಾಗಿಣಿಯನ್ನು ಕ್ವಾರಂಟೈನ್ ಕೇಂದ್ರದ ಒಂದೇ ಕೊಠಡಿಯಲ್ಲಿ ಇರಿಸಿದ್ದಾರೆ. ಕಳೆದ ರಾತ್ರಿ 2 ಗಂಟೆ ತನಕ ನಟಿ ಸಂಜನಾ ನಿದ್ದೆ ಮಾಡದೇ ಅರಚಿ ರಂಪಾಟ ನಡೆಸಿದ್ದಾರೆ. ಸೊಳ್ಳೆ ಕಚ್ಚುತ್ತಿದೆ, ನಿದ್ದೆ ಬರ್ತಿಲ್ಲ, ತಲೆ ನೋವು ಜಾಸ್ತಿ ಆಗಿದೆ, ಟ್ರೀಟ್ಮೆಂಟ್ ಕೊಡಿಸಿ ಎಂದು ಮಧ್ಯರಾತ್ರಿ ಕಿರುಚಾಡಿದ್ದಾರೆ. ಈ ವೇಳೆ, ನಟಿ ರಾಗಿಣಿ, ಸಂಜನಾರನ್ನು ಸಂತೈಸಿದ್ದಾರೆ ಎಂದು ತಿಳಿದುಬಂದಿದೆ.

ಮೇಕಪ್ ಕಿಟ್ ತರಿಸಿಕೊಂಡ್ರಾ ತುಪ್ಪದ ಬೆಡಗಿ?
ನಟಿ ರಾಗಿಣಿ ಬಾಕಿ ದಿನಗಳನ್ನು ಇದೇ ಕೋಣೆಯಲ್ಲಿ ಹೇಗೆ ಕಳೆಯಬೇಕೆಂದು ಚಿಂತಿಸುತ್ತಿದ್ದಾರೆ. ಲೈಫೇ ಸುಟ್ಟು ಹೋಯ್ತಲ್ಲ ಎನ್ನುತ್ತಾ ಅಳುತ್ತಿದ್ದಾರೆ. ಸಂಜನಾ ಕೂಡ ಈಗ ರಾಗಿಣಿಗೆ ಸಾಥ್ ಕೊಟ್ಟಿದ್ದಾರೆ. ಒಂದೇ ಕೋಣೆಯಲ್ಲಿ ಇಬ್ಬರೂ ನಟಿಯರು ಕಷ್ಟ ಸುಖ ಹಂಚಿಕೊಳ್ಳುತ್ತಿದ್ದಾರೆ. ಜೈಲಿನ ಕೋಣೆ ಹೊರಗೆ ಸುತ್ತಾಡಲು ಅವಕಾಶ ಇದ್ದರೂ ರಾಗಿಣಿ ನಾಲ್ಕು ದಿನಗಳಿಂದ ಹೊರಗೆ ಬಂದಿಲ್ವಂತೆ. ಜೈಲೂಟವನ್ನೇ ಮೃಷ್ಟಾನ್ನವೆಂದು ತಿನ್ನುತ್ತಿದ್ದಾರೆ. ಮನೆಯಿಂದ ತರಿಸಿಕೊಂಡ ಇಂಗ್ಲಿಷ್ ಪುಸ್ತಕಗಳನ್ನು ಓದುತ್ತಿದ್ದಾರೆ. ಅಪ್ಪ-ಅಮ್ಮ ನೋಡಲು ಬಂದರೂ ಅದಕ್ಕೆ ಪೊಲೀಸರು ಅವಕಾಶ ಕೊಟ್ಟಿಲ್ಲ. ಇದೆಲ್ಲದರ ನಡುವೆ ರಾಗಿಣಿ ಮನೆಯಿಂದ ಮೇಕಪ್ ಕಿಟ್ ತರಿಸಿಕೊಂಡಿದ್ದಾರೆ ಎಂಬ ಸುದ್ದಿಯೊಂದು ಹಬ್ಬಿದೆ.

ಜೈಲಲ್ಲಿರುವ ಸಂಜನಾಗೆ ಬಿಗ್ ಶಾಕ್!
ಡ್ರಗ್ ಪೆಡ್ಲರ್ ಪ್ರಶಾಂತ್ ರಂಕಾ ಜೊತೆಗೆ ಡ್ರಗ್ಸ್ ಸರಬರಾಜಿನಲ್ಲಿ ನಟಿ ಸಂಜನಾ ಕೂಡ ಪಾಲುದಾರರಾಗಿದ್ದರು ಎಂಬ ಅಂಶ ಸಿಸಿಬಿ ತನಿಖೆಯಲ್ಲಿ ಬಯಲಾಗಿದೆ ಎನ್ನಲಾಗಿದೆ. ಖುದ್ದು ಡ್ರಗ್ ಪೆಡ್ಲರ್ ಪ್ರಶಾಂತ್ ರಂಕಾ ಈ ವಿಚಾರವನ್ನು ಸಿಸಿಬಿ ಅಧಿಕಾರಿಗಳ ಮುಂದೆ ಹೇಳ್ಕೊಂಡು ತಪ್ಪೊಪ್ಪಿಕೊಂಡಿದ್ದಾನೆ. ಕೇರಳ, ಪಂಜಾಬ್, ಗೋವಾ, ಮುಂಬೈ ಹೀಗೆ ಬೇರೆ ಬೇರೆ ಕಡೆಯಿಂದ ಡ್ರಗ್ಸ್ ತರಿಸಿಕೊಂಡು ತಾವು ಪಾಲ್ಗೊಳ್ಳುವ ಪಾರ್ಟಿಗಳಿಗೆ ಇಬ್ಬರು ಮಾದಕ ವಸ್ತು ಸರಬರಾಜು ಮಾಡ್ತಿದ್ರು. ಪಾರ್ಟಿಗೆ ಬರುವ ಉದ್ಯಮಿಗಳಿಗೆ, ರಾಜಕಾರಣಿಗಳು, ಚಿತ್ರನಟರಿಗೆ ಮಾದಕ ವಸ್ತುವನ್ನ ಮಾರಾಟ ಮಾಡಿದ್ರು. ಅಲ್ಲದೇ, ಪ್ರಶಾಂತ್ ರಂಕಾ ಕೂಡ ಸಂಜನಾ ಜೊತೆ ವಿದೇಶಗಳಲ್ಲೂ ಡ್ರಗ್ಸ್ ಪಾರ್ಟಿ ಮಾಡಿದ್ದಾನಂತೆ. ಇದೆಲ್ಲಾ ವಿಚಾರ ಸಿಸಿಬಿ ಕೋರ್ಟ್‍ಗೆ ಸಲ್ಲಿಸಿರುವ ರಿಮ್ಯಾಂಡ್ ಅರ್ಜಿಯಲ್ಲಿ ನಮೂದಾಗಿದೆ.

ಸಂಜನಾ-ವಂದನಾ ಗಲಾಟೆ ಸೀಕ್ರೆಟ್ ರಿವೀಲ್!
ಶೇಖ್ ಫಾಝಿಲ್‍ನ ಕ್ಯಾಸಿನೋ ಬೆಳವಣಿಗೆಗೆ ನಟಿ ಸಂಜನಾ ಮತ್ತು ವಂದನಾ ಜೈನ್ ಫುಲ್ ಸಪೋರ್ಟ್ ಮಾಡಿದ್ರು ಅನ್ನೋ ಮಾಹಿತಿ ಬಹಿರಂಗವಾಗಿದೆ. ಫಾಝಿಲ್‍ನ ಶ್ರೀಲಂಕಾದ ಬ್ಯಾಲ್ಲೆ ಕ್ಯಾಸಿನೋದಲ್ಲಿ ನಡೆಯುತ್ತಿದ್ದ ನೈಟ್ ಪಾರ್ಟಿಗಳು ಮುಂಬೈಗೂ ವಿಸ್ತರಣೆಯಾಗಿದ್ದವು. ಬಾಂಬೆಯಲ್ಲಿ ನಡೆಯುತ್ತಿದ್ದ ಕಲರ್‍ಫುಲ್ ಪಾರ್ಟಿಗಳಿಗೆ ಸಂಜನಾ-ವಂದನಾ ಫುಲ್ ಸಪೋರ್ಟ್ ಮಾಡಿದ್ರು ಅಂತ ತಿಳಿದುಬಂದಿದೆ. ಶೇಖ್ ಫಾಝಿಲ್ ಖುದ್ದಾಗಿ ಸಂಜನಾ ಹಾಗೂ ವಂದನಾಗೆ ಥ್ಯಾಂಕ್ಯೂ ಅಂತಾ ಸೋಷಿಯಲ್ ಮೀಡಿಯಾ ಮೂಲಕ ಹೇಳಿಕೊಂಡಿದ್ದ. ಇತ್ತ ಸಿಸಿಬಿ ವಿಚಾರಣೆಗೆ ಹಾಜರಾದ ಶೇಖ್ ಫಾಝಿಲ್ ಪತ್ನಿ, ನನ್ನ ಗಂಡನ ಪ್ರಾಣಕ್ಕೆ ಆಪತ್ತು ಇದೆ. ನನ್ನ ಗಂಡ ಏನಾದ್ರೂ ಸಿಕ್ಕಿದ್ರೆ ಕೊಂದೇ ಬಿಡ್ತಾರೆ. ದೊಡ್ಡವರು ಯಾರೋ ಕರೆದುಕೊಂಡು ಹೋಗಿರ್ತಾರೆ ಅಂತ ಸಿಸಿಬಿ ಪೊಲೀಸರ ಮುಂದೆ ಕಣ್ಣೀರು ಹಾಕಿದ್ದಾರೆ.

ನಾಳೆ ಸಂಜನಾ ನ್ಯಾಯಾಂಗ ಬಂಧನದ ಅವಧಿ ಮುಗಿಯಲಿದ್ದು, ಅವರನ್ನು 33ನೇ ಸಿಸಿಹೆಚ್ ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ. ಇದೇ ವೇಳೆ, ಸಂಜನಾ ಜಾಮೀನು ಅರ್ಜಿಯೂ ವಿಚಾರಣೆಗೆ ಬರಲಿದೆ. ಒಟ್ನಲ್ಲಿ ಇಬ್ಬರು ನಟಿಯರು ಈಗ ಜೈಲಲ್ಲಿ ಪಡಬಾರದ ಪಾಡು ಪಡ್ತಿದ್ದಾರೆ. ಇದರ ಮಧ್ಯೆ ಇಬ್ಬರ ಒಂದೊಂದೇ ಸೀಕ್ರೆಟ್ ಬಯಲಾಗ್ತಿದ್ದು, ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿದೆ.

Click to comment

Leave a Reply

Your email address will not be published. Required fields are marked *