Connect with us

Bengaluru City

2020ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ತಾರೆಯರು

Published

on

ಕೊರೊನಾದಿಂದ ಸಿನಿಲೋಕ ತತ್ತರಿಸಿ ಶೂಟಿಂಗ್ ಸ್ಥಗಿತಗೊಂಡಿತತು. ಕೊರೊನಾ ಲಾಕ್‍ಡೌನ್ ವೇಳೆ ಈ ಬಾರಿ ಹಲವು ತಾರೆಯರು ಹೊಸ ಜೀವನಕ್ಕೆ ಹೆಜ್ಜೆ ಇರಿಸಿದರು. ಆದ್ರೆ ಕೊರೊನಾದಿಂದಾಗಿ ಅದ್ಧೂರಿ ಮದುವೆಗಳಿಗೆ ಬ್ರೇಕ್ ಬಿದ್ದಿತ್ತು. 2020ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ತಾರೆಯರ ಮಾಹಿತಿ ಇಲ್ಲಿದೆ.

ಜನವರಿ 26 ರಂದು ನಟ ತಾರಕ್ ಪೊನ್ನಪ್ಪ ಕೊಡಗಿನ ಸಂಪ್ರಾದಯದಂತೆ ರಾಧಿಕಾ ಜೊತೆ ಹಸೆಮಣೆ ಏರಿದ್ದರು. ಕೆಜಿಎಫ್ ಚಾಪ್ಟರ್ 1, ಅಧ್ಯಕ್ಷ ಇನ್ ಅಮೆರಿಕ ಹಾಗೂ 6 ಟು 6 ಸಿನಿಮಾಗಳ ಜೊತೆ ಧಾರಾವಾಹಿಯಲ್ಲಿಯೂ ನಟಿಸಿದ್ದಾರೆ. ಇದೇ ದಿನ ನಟ ಸೂರ್ಯ ಪ್ರೇಯಸಿ ಶುಭಶ್ರೀ ಜೊತೆ ಮದುವೆ ಆಗಿದ್ದರು. ಪ್ರೀತಿಯಲ್ಲಿ ಸಹಜ ಮತ್ತು ಕಟ್ಟು ಕಥೆ ಸಿನಿಮಾಗಳಲ್ಲಿ ನಟಿಸಿದ್ದು, ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಆ ದಿನಗಳು ಸಿನಿಮಾ ಖ್ಯಾತಿಯ ಚೇತನ್ ಅಸ್ಸಾಂ ಮೂಲದ ಮೇಘಾ ಅವರ ಜೊತೆ ಫೆಬ್ರವರಿ 2ರಂದು ಸಾಂಸರಿಕ ಜೀವನಕ್ಕೆ ಕಾಲಿರಿಸಿದ್ದರು. ರಿಜಿಸ್ಟರ್ ಆಫೀಸ್ ನಲ್ಲಿ ಸರಳವಾಗಿ ಮದುವೆಯಾಗಿದ್ದ ಜೋಡಿ, ಸಂಜೆ ಅದ್ಧೂರಿಯಾಗಿ ಆರತಕ್ಷತೆಯನ್ನ ಆಯೋಜಿಸಿತ್ತು. ಅನಾಥ ಮಕ್ಕಳೊಂದಿಗೆ ಚೇತನ್ ಮತ್ತು ಮೇಘಾ ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದರು.

ಫೆಬ್ರವರಿ 10ರಂದು ಜಾಗ್ವಾರ ನಿಖಿಲ್ ಕುಮಾರಸ್ವಾಮಿ ನಿಶ್ಚಿತಾರ್ಥ ರೇವತಿ ಅವರ ಜೊತೆ ನಡೆದಿತ್ತು. ಮದುವೆಯನ್ನ ಅದ್ಧೂರಿಯಾಗಿ ನಡೆಸಲು ಮಾಜಿ ಸಿಎಂ ಕುಮಾರಸ್ವಾಮಿ ಕುಟುಂಬ ನಿರ್ಧರಿಸಿತ್ತು. ಕೊರೊನಾ ಹಿನ್ನೆಲೆ ಕೆಲ ಆಪ್ತರ ಸಮ್ಮುಖದಲ್ಲಿ ಏಪ್ರಿಲ್ 17ರಂದು ನಡೆದಿತ್ತು. ನಿಖಿಲ್ ಮತ್ತು ರೇವತಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತವೆ.

ಮೈಸೂರು ದಸರಾ ವೇದಿಕೆಯಲ್ಲಿ ಗಾಯಕ ಚಂದನ್ ಶೆಟ್ಟಿ ಗೆಳತಿ ನಿವೇದಿತಾ ಗೌಡಗೆ ಪ್ರಪೋಸ್ ಮಾಡಿದ್ದರು. ಎರಡು ಕುಟುಂಬಗಳ ಸಮ್ಮುಖದಲ್ಲಿ ಮೈಸೂರಿನಲ್ಲಿ ಜೋಡಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಖಾಸಗಿ ವಾಹಿನಿ ಬಿಗ್‍ಬಾಸ್ ನಲ್ಲಿ ಈ ಜೋಡಿ ಒಂದಾಗಿತ್ತು. ಮದುವೆ ಬಳಿಕ ಜೋಡಿ ವಿದೇಶಕ್ಕೆ ತೆರಳಿತ್ತು. ಕೊರೊನಾ ಹೆಚ್ಚಾದ ಹಿನ್ನೆಲೆ ವಿದೇಶ ಪ್ರವಾಸವನ್ನ ಅರ್ಧಕ್ಕೆ ಮೊಟಕುಗೊಳಿಸಿ ಜೋಡಿ ಹಿಂದಿರುಗಿತ್ತು.

ಸ್ಯಾಂಡಲ್‍ವುಡ್ ಖ್ಯಾತ ನಿರ್ದೇಶಕ ಎ.ಪಿ.ಅರ್ಜುನ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅರ್ಜುನ್ ಹಾಸನ ಮೂಲದ ಬಿ.ಆರ್.ಅನ್ನಪೂರ್ಣ ಜೊತೆ ಸರಳವಾಗಿ ಮದುವೆಯಾಗಿದ್ದಾರೆ. ರಾಮಸಂದ್ರದ ಮಹಾಲಕ್ಷ್ಮಿ ಎನ್‍ಕ್ಲೇವ್ ನಲ್ಲಿ ಅರ್ಜುನ್ ಮತ್ತು ಅನ್ನಪೂರ್ಣ ಸಪ್ತಪದಿ ತುಳಿದಿದ್ದಾರೆ. ಮೇ 10 ರಂದು ಮದುವೆ ನಡೆದಿತ್ತು.

ನಿರ್ದೇಶಕಿ ಸುಮನಾ ಕಿತ್ತೂರು ಕೆಲ ಸಮಯದಿಂದ ಪಾಂಡಿಚೇರಿಯಲ್ಲಿ ನೆಲೆಸಿದ್ದು ಅಲ್ಲಿಯೇ ಶಿವಮೊಗ್ಗ ಮೂಲದ ಎಂಜಿನಿಯರ್ ಶ್ರೀನಿವಾಸ್ ಅವರನ್ನು ಈ ವರ್ಷ ಮದುವೆಯಾದರು. ಗೆಳೆಯ ಶ್ರೀನಿವಾಸ್ ಅವರನ್ನು ಕುವೆಂಪು ಅವರ ‘ಮಂತ್ರ ಮಾಂಗಲ್ಯ’ ವಿವಾಹ ಪದ್ದತಿಯ ಮೂಲಕ ಕುಪ್ಪಳ್ಳಿಯಲ್ಲೇ ವಿವಾಹವಾಗಬೇಕೆಂದು ಸುಮನಾ ಬಯಸಿದ್ದರು. ಆದರೆ ಕೋವಿಡ್ 19 ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‍ಡೌನ್ ಜಾರಿಯಾದ ಕಾರಣ ಪಾಂಡಿಚೇರಿಯಲ್ಲಿ ಮದುವೆ ನಡೆಯಿತು.

ನಟಿ ಮಯೂರಿ ತಮ್ಮ ಬಹುಕಾಲದ ಗೆಳೆಯ ಅರುಣ್ ಜೊತೆ ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಜೂನ್ 12ರಂದು ಶುಭಲಗ್ನದಲ್ಲಿ ಮದುವೆಯಾಗಿದ್ದಾರೆ. ಅರುಣ್ ಮತ್ತು ಮಯೂರಿ ಸುಮಾರು 10 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದು, ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದಾರೆ. ಕೆಲ ದಿನಗಳ ಹಿಂದೆ ತಾಯಿ ಆಗುತ್ತಿರುವ ವಿಷಯವನ್ನ ಮಯೂರಿ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು.

ಆಗಸ್ಟ್ ನಲ್ಲಿ ನಟ ವಿನಾಯಕ್ ಜೋಶಿ ತಮ್ಮ ಬಹುಕಾಲದ ಗೆಳತಿ ವರ್ಷಾ ಬೆಳವಾಡಿ ಜೊತೆಗೆ ಸಪ್ತಪದಿ ತುಳಿದರು. ವರ್ಷಾ ಬೆಳವಾಡಿ ಅವರು ರಾಷ್ಟ್ರ ಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿ ಖ್ಯಾತಿ ಪಡೆದಿದ್ದಾರೆ. ಇವರಿಬ್ಬರಿಗೆ ಬ್ಯಾಲದಲ್ಲಿ ಪರಿಚಯವಿತ್ತು. ಅಲ್ಲದೇ 25 ವರ್ಷಗಳ ನಂತರ ಮತ್ತೆ ಸಾಮಾನ್ಯ ಸ್ನೇಹಿತರಾಗಿ ಪರಿಚಯರಾಗಿದ್ದರು. ಇಬ್ಬರ ಸ್ನೇಹ ಪ್ರೀತಿಯಲ್ಲಿ ಬದಲಾಗಿತ್ತು.

ರಾಜಹಂಸ ಸಿನಿಮಾ ಖ್ಯಾತಿಯ ನಟ ಗೌರಿಶಂಕರ್ ಅಕ್ಟೋಬರ್ 29ರಂದು ಫ್ಯಾಶನ್ ಡಿಸೈನರ್ ಅರುಣಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕೊಲ್ಲರು ಮೂಕಾಂಬಿಕೆ ದೇವಸ್ಥಾನದಲ್ಲಿ ಮದುವೆ ನಡೆದಿತ್ತು. ನವೆಂಬರ್ 4ರಂದು ಖ್ಯಾತ ನಟ ರಾಜ್ ದೀಪಕ್ ಶೆಟ್ಟಿ ಬಹುಕಾಲದ ಗೆಳತಿ ಸೋನಿಯಾ ರಾಡ್ರಿಗಸ್ ಜೊತೆ ಸಪ್ತಪದಿ ತುಳಿದರು. ಡಿಸೆಂಬರ್ 28ರಂದು ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ಮದುವೆ ಬೆಂಗಳೂರು ಹೊರ ವಲಯದ ರೆಸಾರ್ಟ್ ನಲ್ಲಿ ನಡೆದಿತ್ತು. ಅಕ್ಷಯ್ ಜೊತೆ ನಿಹಾರಿಕಾ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದರು.

Click to comment

Leave a Reply

Your email address will not be published. Required fields are marked *

www.publictv.in