Connect with us

Bengaluru City

ಡಬ್ಬಿಂಗ್ ಮಾಡಿದ್ರೆ ಯಾರದ್ದೋ ಮಗುವಿಗೆ ಇನ್ಯಾರೋ ತಂದೆ ಆದಂಗೆ ಇರುತ್ತೆ: ದರ್ಶನ್

Published

on

ಬೆಂಗಳೂರು: ಡಬ್ಬಿಂಗ್ ಮಾಡಿದ್ರೆ ಯಾರದ್ದೋ ಮಗುವಿಗೆ ಇನ್ಯಾರೋ ತಂದೆ ಆದಂಗೆ ಇರುತ್ತೆ ಅಂತ ನಟ ದರ್ಶನ್ ಹೇಳಿದ್ದಾರೆ.

ಇಂದು ಫ್ರೀಡಂ ಪಾರ್ಕ್‍ನಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆದ ಡಬ್ಬಿಂಗ್ ವಿರುದ್ಧದ ಪ್ರತಿಭಟನೆಯಲ್ಲಿ ಮಾತನಾಡಿದ ದರ್ಶನ್, ಖಂಡಿತ ಡಬ್ಬಿಂಗ್ ವಿರುದ್ಧದ ಹೋರಾಟಕ್ಕೆ ಸಾಥ್ ಕೊಡ್ತಿನಿ. ಪಕ್ಕದ ರಾಜ್ಯದ ಎಲ್ಲಾ ಊಟ ನಮ್ಮ ಊರಲ್ಲಿ ಸಿಗುತ್ತೆ. ಅದೇ ನಮ್ಮ ಊಟ ಉಪ್ ಸಾರು ಮುದ್ದೆ ಬೇರೆ ಊರಲ್ಲಿ ಸಿಗುತ್ತಾ ಎಂದು ಪ್ರಶ್ನಿಸಿ ಖಂಡಿತ ಡಬ್ಬಿಂಗ್ ಬೇಡ ಅಂದ್ರು.

ಜಗ್ಗೇಶ್ ಗರಂ: ಇದೇ ವೇಳೆ ನಟ ಜಗ್ಗೇಶ್ ಮಾತನಾಡಿ ತಮ್ಮ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದವರ ವಿರುದ್ಧ ವಾಗ್ದಾಳಿ ನಡೆಸಿದ್ರು. ನಾನು ಡಬ್ಬಿಂಗ್ ವಿರೋಧಿಸಿ ಮಾತನಾಡಿದ್ದಕ್ಕೆ ಅದ್ಯಾರಿಗೋ 50 ಲಕ್ಷ ಲಾಸ್ ಆಗಿದ್ಯಂತೆ. ನಾನು ಕಟ್ಟಿಕೊಡಬೇಕಂತೆ. ನೀನು ಸಿಗು ಕಟ್ಟಿಕೊಡ್ತೀನಿ. ನಾನೇನು ರೇಪ್ ಮಾಡಿದ್ದಿನಾ? ಕಳ್ಳತನ ಮಾಡಿದ್ದಿನಾ? ಕನ್ನಡದ ಪರ ಸೊಲ್ಲೆತ್ತಿದ್ದೀನಿ. ಜೈಲಿಗೆ ಕಳಿಸಿದ್ರೆ ಸಂತೋಷವಾಗಿ ಹೋಗ್ತಿನಿ. ಕಾಲರ್ ಎತ್ತಿ ಬೇಕಾದ್ರೆ ಕನ್ನಡಕ್ಕಾಗಿ ಜೈಲಿಗೆ ಹೋಗ್ತೀನಿ. ಇದಕ್ಕೆಲ್ಲಾ ಕೇರ್ ಮಾಡಲ್ಲ ಅಂದ್ರು.

ಕನ್ನಡದ ನೆಲಕ್ಕೆ 35 ರ್ವಗಳಿಂದ ನಮ್ಮದೇ ಆದ ಕಲಾ ಸೇವೆ ಮಾಡಿದ್ದೇವೆ. ನಮಗೆ ಎಲ್ಲವೂ ಸಿಕ್ಕಿದೆ. ಮುಂದಿನ ಪೀಳಿಗೆಯವರು ಬೆಳೆಯೋದು ಬೇಡ್ವಾ? ಅಂದ್ರು. ಎಫ್‍ಎಂ ರೇಡಿಯೋಗಳ ವಿರುದ್ಧ ವಾಗ್ದಾಳಿ ಮಾಡಿದ ಜಗ್ಗೇಶ್, ಕನ್ನಡ ಸ್ಟೇಷನ್ ಅಂತ ಇರೋದು. ಆದ್ರೆ ಹಿಂದಿ ಹಾಡು ಹಾಕ್ತಾರೆ. ಈಗ ನಮ್ಮ ಸಿನಿಮಾವನ್ನ ಕಸೆದುಕೊಳ್ಳುತ್ತಿದ್ದಾರೆ. ಅಕ್ಕಪಕ್ಕದ ರಾಜ್ಯದಲ್ಲಿ ಕನ್ನಡಿಗರು ಹೆಚ್ಚು ಜನರಿದ್ದಾರೆ. ಅಲ್ಲಿ ಕನ್ನಡ ಚಿತ್ರಗಳ ಪ್ರದರ್ಶನದ ಬಗ್ಗೆ ಯಾಕೆ ಧ್ವನಿ ಎತ್ತಲಿಲ್ಲ ಅಂತ ಪ್ರಶ್ನಿಸಿದ್ರು.

80 ವರ್ಷಗಳ ಇತಿಹಾಸವಿರುವ ಈ ಕನ್ನಡ ಚಿತ್ರರಂಗವನ್ನ ಸಾಯಿಸಬೇಡಿ. ಕನ್ನಡ ಶಾಲೆಗಳ ಮುಚ್ಚಿ ಹೋದಾಗ ಏನ್ ಮಾಡಿದ್ರಿ ಸ್ವಾಮಿ ಅಂತ ಪ್ರಶ್ನಿಸಿದ್ರು. ಹೆದರಿಕೆ ಕರೆಗಳು ಬರ್ತಿವೆ. ನಾನು ಈ ರೀತಿಯ ಫೋನ್ ಕಾಲ್‍ಗಳಿಗೆ ಹೆದರೋದಿಲ್ಲ ಅಂತ ಹೇಳಿದ್ರು.

ನಿರ್ದೇಶಕ ಎಂಎಸ್ ರಮೇಶ್: ಯಾವುದೇ ಕಾರಣಕ್ಕೂ ಡಬ್ಬಿಂಗ್ ಬರಲು ಬಿಡಲ್ಲ.

ಸಾಧು ಕೋಕಿಲ: ತಾಕತ್ ಇದ್ರೆ ಎಲ್ಲ ಭಾಷೆಯನ್ನ ಕನ್ನಡ ಭಾಷೆಯಲ್ಲಿ ಡಬ್ ಮಾಡಲಿ. ಅದು ಮಾಡೋಕೆ ಆಗಲ್ಲ. ಸಿನಿಮಾ ಯಾಕೆ ಡಬ್ ಮಾಡ್ತಾರೆ.

ಬುಲೆಟ್ ಪ್ರಕಾಶ್: ಹೋರಾಟ ಇಲ್ಲಿಗೆ ನಿಲ್ಲಲ್ಲ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಹೊರಾಟ ನಡೆಯುತ್ತೆ.

ನಾಗತಿಹಳ್ಳಿ ಚಂದ್ರಶೇಖರ್: ಕಂಠದಾನ ಮಾಡಿ ಇಡೀ ಸಿನಿಮಾ ಪ್ರೋಸೆಸ್ ಮಟ್ಟ ಹಾಕಲಾಗುತ್ತಿದೆ. ಇದು ಕಥೆ ಮತ್ತು ಸೃಜನಶೀಲ ಚಿತ್ರಗಳಿಗೆ ಅಪಾಯಕಾರಿ. ಒಟ್ಟು ಭಾಷೆಗೆ ಪೆಟ್ಟು ಬೀಳುತ್ತಿದೆ. ಕನ್ನಡ ಪರ ಹೋರಾಟಗಾರರು ನಮ್ಮ ನಾಡು ನುಡಿಗಾಗಿ ಹೋರಾಟ ಮಾಡ್ತಿದ್ದಾರೆ. ಸಂಸ್ಕೃತಿಯ ಬಗ್ಗೆ ಸ್ವಲ್ಪನಾದ್ರೂ ಗೌರವ ಕೊಡಬೇಕು.

ವಿ.ಮನೋಹರ್: ಡಬ್ಬಿಂಗ್‍ಗೆ ಅವಕಾಶ ನೀಡಿದ್ರೆ ಕನ್ನಡ ಚಿತ್ರರಂಗಕ್ಕೆ ಉಳಿಗಾಲವಿಲ್ಲ.

ಹಾಸ್ಯ ನಟ ಮಿತ್ರ: ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್ ಸಿನಿಮಾಗಳು ಬರಬಾರದು. ನಮ್ಮ ಹೋರಾಟ ಮುಂದುವರೆಯುತ್ತೆ.

ಸೃಜನ್: ಕನ್ನಡ ಚಿತ್ರರಂಗದಲ್ಲಿ ಸಾವಿರಾರು ಕುಟುಂಬ ಕೆಲಸ ಮಾಡ್ತಿದೆ. ಡಬ್ಬಿಂಗ್ ಬಂದ್ರೆ ಅವರ ಕುಟುಂಬ ಬೀದಿಗೆ ಬರುತ್ತೆ. ಯಾವುದೇ ಕಾರಣಕ್ಕೂ ಡಬ್ಬಿಂಗ್ ಬೇಡ. ಡಬ್ಬಿಂಗ್ ಸಿನಿಮಾ ನೋಡೋಲ್ಲ ಅಂತ ಪ್ರಮಾಣ ಮಾಡಿ ಆಗ ಡಬ್ಬಿಂಗ್ ಬರಲ್ಲ.

ಪ್ರಜ್ವಲ್ ದೇವರಾಜ್: ಚಿತ್ರರಂಗದಿಂದ ಸಾವಿರಾರು ಕುಟುಂಬಗಳು ಊಟ ಮಾಡ್ತಿವೆ. ದೊಡ್ಡವರ ಮಾರ್ಗದರ್ಶನದಲ್ಲಿ ಹೋರಾಟ ಮಾಡ್ತಿವಿ.

ಮಂಡ್ಯ ರಮೇಶ್: ನಿರ್ಮಾಪಕರು ಮನಸ್ಸು ಮಾಡಿದ್ರೆ ಡಬ್ಬಿಂಗ್ ನಿಲ್ಲಿಸೋದು ದೊಡ್ಡ ವಿಷಯವಲ್ಲ. ಡಬ್ಬಿಂಗ್ ಕಲಾವಿದರು ಯಾವುದೇ ಡಬ್ಬಿಂಗ್ ಮಾಡಬಾರದು. ಡಬ್ಬಿಂಗ್ ಖಂಡಿತ ಬೇಡ.

ಪ್ರತಿಭಟನೆಯಲ್ಲಿ ಭಾಗಿಯಾದವರು: ದರ್ಶನ್, ಜಗ್ಗೇಶ್, ಸೃಜನ್ ಲೋಕೇಶ್, ದರ್ಶನ್, ಪ್ರಜ್ವಲ್ ದೇವರಾಜ್, ದಿನಕರ್ ತುಗುದೀಪ್, ಕವಿರಾಜ್, ವಾಟಾಳ್ ನಾಗರಾಜ್, ಪ್ರವೀಣ್ ಕುಮಾರ್ ಶೆಟ್ಟಿ, ಕುಮಾರ್, ನಟ ರವಿಶಂಕರ್, ತಬಲನಾಣಿ, ನಿರ್ದೇಶಕ ಸಾಯಿಪ್ರಕಾಶ್, ಮಿತ್ರಾ, ಸಂಗೀತ ನಿರ್ದೇಶಕ ವಿ. ಮನೋಹರ್ ಸೇರಿದಂತೆ ಸ್ಯಾಂಡಲ್‍ವುಡ್‍ನ ನಟರು, ನಿದೇಶಕರು, ಕನ್ನಡಪರ ಸಂಘಟನೆಗಳು ಹಾಗೂ ಕಿರುತೆರೆ ನಟರು ಡಬ್ಬಿಂಗ್ ವಿರುದ್ಧದ ಪ್ರತಿಭಟನಾಯಲ್ಲಿ ಭಾಗಿಯಾಗಿದ್ರು.