Wednesday, 26th June 2019

Recent News

ವಿಶ್ವದ ಅತಿದೊಡ್ಡ ಮೊಬೈಲ್ ಉತ್ಪಾದನಾ ಘಟಕ ನೋಯ್ಡಾದಲ್ಲಿ ಲೋಕಾರ್ಪಣೆ – ವಿಶೇಷತೆ ಏನು? ಎಷ್ಟು ಮಂದಿಗೆ ಉದ್ಯೋಗ ಸಿಗುತ್ತೆ?

ಲಕ್ನೋ: ಪ್ರತಿಷ್ಠಿತ ಸ್ಯಾಮ್‍ಸಂಗ್ ಕಂಪೆನಿಯು ಜಗತ್ತಿನಲ್ಲಿಯೇ ಅತಿ ದೊಡ್ಡ ಮೊಬೈಲ್ ಫ್ಯಾಕ್ಟರಿಯನ್ನು ಉತ್ತರ ಪ್ರದೇಶದ ನೋಯ್ಡಾದಲ್ಲಿ ನಿರ್ಮಿಸಿದ್ದು, ಇಂದು ಇದರ ಉದ್ಘಾಟನೆಯು ಸೋಮವಾರ ಅದ್ಧೂರಿಯಾಗಿ ನಡೆಯಿತು.

ನೋಯ್ಡಾದ 81ನೇ ವಿಭಾಗದಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಯ ಅಡಿಯಲ್ಲಿ ಸುಮಾರು 35 ಎಕರೆ ಪ್ರದೇಶದಲ್ಲಿ ವಿಸ್ತಾರವಾಗಿ ಸ್ಯಾಮ್‍ಸಂಗ್ ಎಲೆಕ್ಟ್ರಾನಿಕ್ಸ್ ಫೆಸಿಲಿಟೀಸ್ ಘಟಕ ತಲೆ ಎತ್ತಿದೆ. ಈ ಘಟಕದ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್-ಜಿ-ಇನ್ ರವರು ನೆರವೇರಿಸಿದರು.

ಏನಿದರ ವಿಶೇಷತೆ?
ಪ್ರಪಂಚದಲ್ಲಿಯೇ ಅತಿದೊಡ್ಡ ಎಲೆಕ್ಟ್ರಾನಿಕ್ ಉಪಕರಣ ಉತ್ಪಾದಕ ಘಟಕವಾಗಿದ್ದು, ಸುಮಾರು 35 ಎಕರೆ ಪ್ರದೇಶದಲ್ಲಿ ತಯಾರಿಕಾ ಘಟಕ ನಿರ್ಮಾಣವಾಗಿದೆ. ಈ ಘಟಕದಲ್ಲಿ ಉತ್ಪನ್ನಗಳಾದ, ಸ್ಮಾರ್ಟ್ ಫೋನ್, ಏರ್ ಕಂಡೀಷನರ್, ರೆಫ್ರಿಜರೇಟರ್, ಫ್ಲ್ಯಾಟ್ ಪ್ಯಾನೆಲ್ ಟಿವಿ, ವಾಷಿಂಗ್ ಮೆಷಿನ್ ಹಾಗೂ ಅನೇಕ ಉತ್ಪನ್ನಗಳು ತಯಾರಾಗಲಿದೆ.

ಪ್ರತಿ ತಿಂಗಳಿಗೆ ಸುಮಾರು 1.2 ಕೋಟಿ ಮೊಬೈಲ್ ಫೋನ್ ಗಳನ್ನು ತಯಾರಿಸುವ ಸಾಮರ್ಥ್ಯವನ್ನು ಈ ಘಟಕ ಹೊಂದಿದೆ. ಪ್ರಸ್ತುತವಾಗಿ ಸ್ಯಾಮ್‍ಸಂಗ್ ಕಂಪನಿಯು ಭಾರತದಲ್ಲಿ 67 ಲಕ್ಷ ಸ್ಮಾರ್ಟ್ ಫೋನ್‍ಗಳನ್ನು ತಯಾರಿಸುತ್ತಿದೆ.

ಭಾರತದಲ್ಲಿ ಸ್ಯಾಮ್‍ಸಂಗ್ ಹಿನ್ನೆಲೆ ಏನು?
ಮೂಲತಃ ದಕ್ಷಿಣ ಕೊರಿಯಾದ ಸ್ಯಾಮ್ಸಂಗ್ ಸಂಸ್ಥೆ 1995 ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ತನ್ನ ಉತ್ಪಾದನಾ ಘಟಕವನ್ನು ಆರಂಭಿಸಿತ್ತು. ನೋಯ್ಡಾ ಹಾಗೂ ಪೆರಂಬದೂರ್ ನಲ್ಲಿ ತನ್ನ ಎರಡು ಉತ್ಪಾದನಾ ಘಟಕಗಳನ್ನು ನಿರ್ಮಿಸಿತ್ತು.

1997 ರಲ್ಲಿ ಟಿವಿ, 2003 ರಲ್ಲಿ ರೆಫ್ರೇಜರೇಟರ್, 2005 ರಲ್ಲಿ ಫ್ಲ್ಯಾಟ್ ಟಿವಿ, 2007ರಲ್ಲಿ ಮೊಬೈಲ್ ಫೋನ್‍ಗಳನ್ನು ತಯಾರಿಸಿ ಹಾಗೂ 2012 ರಲ್ಲಿ ಸ್ಯಾಮ್‍ಸಂಗ್ ನೋಯ್ಡಾ ಘಟಕವು ಗೆಲಾಕ್ಸಿ ಎಸ್3 ಫೋನನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಭಾರತದಲ್ಲಿ ಸುಮಾರು 70 ಸಾವಿರ ಜನರಿಗೆ ಉದ್ಯೋಗ ನೀಡಿರುವ ಸ್ಯಾಮ್‍ಸಂಗ್ ಹೊಸ ಘಟಕದಿಂದ 35 ಸಾವಿರ ಮಂದಿಗೆ ಉದ್ಯೋಗ ಸಿಗಲಿದೆ.

2017ರ ಜೂನ್ ನಲ್ಲಿ ನೋಯ್ಡಾದ ಘಟಕದ ಮೇಲೆ ಸುಮಾರು 4,915 ಕೋಟಿ ರೂ.ಗಳನ್ನು ಹೂಡಿಕೆ ಮಾಡಲು ದಕ್ಷಿಣ ಕೊರಿಯಾ ಮುಂದಾಗಿತ್ತು. ಈ ವರ್ಷ ಹೊಸ ಘಟಕವು ಹೂಡಿಕೆಗಿಂತ ದುಪ್ಪಟ್ಟು ವೆಚ್ಚದಲ್ಲಿ ನಿರ್ಮಾಣವಾಗಿದೆ.

ಸದ್ಯ ಕಂಪನಿಯು ಭಾರತದಲ್ಲಿ ಸುಮಾರು 10%ರಷ್ಟು ಸಾಧನಗಳನ್ನು ತಯಾರಿಕೆ ಮಾಡುತ್ತಿದೆ. ಮುಂದಿನ ಮೂರು ವರ್ಷದಲ್ಲಿ ಅಂದಾಜು 50% ರಷ್ಟು ತಯಾರಿಕೆ ಮಾಡುವ ಗುರಿಯನ್ನು ಹೊಂದಿದೆ. ಸ್ಯಾಮ್‍ಸಂಗ್ ಇಂಡಿಯಾ ಆರ್ಥಿಕ ವರ್ಷ 2016-17 ರಲ್ಲಿ ಶೇ. 27ರಷ್ಟು ಮೊಬೈಲ್ ವ್ಯವಹಾರ ನಡೆಸಿದೆ.

ಸ್ಯಾಮ್‍ಸಂಗ್ ಘಟಕವನ್ನು ಉದ್ಘಾಟನೆಗೊಳಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ದಕ್ಷಿಣ ಕೊರಿಯಾ ಅಧ್ಯಕ್ಷರು ಹಾಗೂ ಸ್ಯಾಮ್ಸಂಗ್ ಮುಖ್ಯಸ್ಥರಾದ ಎಚ್.ಸಿ.ಹಾಂಗ್‍ರವರು ಅಭಿನಂದನೆ ಸಲ್ಲಿಸಿ, ಅತಿದೊಡ್ಡ ಮೊಬೈಲ್ ಉತ್ಪಾದಕ ಘಟಕವನ್ನು ಭಾರತದಲ್ಲಿ ಸ್ಥಾಪಿಸಿದಕ್ಕೆ ಸಂತಸ ವ್ಯಕ್ತಪಡಿಸಿದರು. ಭಾರತದ ಇಲೆಕ್ಟ್ರಾನಿಕ್ ಉತ್ಪಾದನಾ ಕ್ಷೇತ್ರದಲ್ಲಿ ಭಾರತ ವಿಶ್ವದಲ್ಲಿಯೇ ಮತ್ತೊಮ್ಮೆ ಗುರುತಿಸಿಕೊಳ್ಳುವಂತಾಗಿದೆ. 2014ರಿಂದ ಉತ್ಪಾದನಾ ವಲಯದಲ್ಲಿ ಒಟ್ಟು 4 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ .ಈ ಘಟಕದಿಂದಾಗಿ ಭಾರತ ಮತ್ತು ದಕ್ಷಿಣ ಕೊರಿಯಾ ನಡುವಿನ ಸಂಬಂಧ ಮತ್ತಷ್ಟು ವೃದ್ಧಿವಾಗಿದೆ. ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ಈ ಘಟಕ ಪ್ರಾರಂಭವಾಗಿದೆ. ಈ ಘಟಕದಿಂದ ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಅನುಕೂಲವಾಗಲಿದ್ದು, ಮುಕ್ತ ಮಾರುಕಟ್ಟೆ ಅವಕಾಶವನ್ನು ಪಡೆಯಬಹುದಾಗಿದೆ ಎಂದರು.

 

Leave a Reply

Your email address will not be published. Required fields are marked *