Connect with us

Latest

ಮೇಕೆ ಕಳ್ಳತನ – ಸಂಸದ ಅಜಂ ಖಾನ್ ವಿರುದ್ಧ ಎಫ್‍ಐಆರ್

Published

on

ಲಕ್ನೋ: ಪುಸ್ತಕ ಹಾಗೂ ಎಮ್ಮೆ ಕಳ್ಳತನದ ಆರೋಪದ ನಂತರ ಇದೀಗ ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್ ವಿರುದ್ಧ ಮೇಕೆ ಕಳ್ಳತನದ ಕುರಿತು ದೂರು ದಾಖಲಾಗಿದೆ.

ರಾಂಪುರ ಪಬ್ಲಿಕ್ ಗೇಟ್‍ನ ಯತೀಮ್ ಖಾನ್ ಸರಾಯ್ ಗೇಟ್ ನಿವಾಸಿ ನಸೀಮಾ ಖಾತೂನ್(50) ಅಕ್ಟೋಬರ್ 2016ರಂದು ನೀಡಿದ ದೂರಿನ ಮೇರೆಗೆ ಅಜಂ ಖಾನ್ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಅಕ್ಟೋಬರ್ 15, 2016ರಂದು ಅಜಂ ಖಾನ್, ಏಳು ಸಹೋದ್ಯೋಗಿಗಳು ಹಾಗೂ 25 ಜನ ಅಪರಿಚಿತರು ನಮ್ಮ ಮನೆಗೆ ನುಗ್ಗಿ ಮನೆಯನ್ನು ಧ್ವಂಸಗೊಳಿಸಿದ್ದಾರೆ. ಮನೆಯಲ್ಲಿದ್ದ ಆಭರಣಗಳು, ಮೂರು ಎಮ್ಮೆ, ಒಂದು ಹಸು ಹಾಗೂ ನಾಲ್ಕು ಮೇಕೆಗಳನ್ನು ಕದ್ದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕಳೆದೆರಡು ದಶಕಗಳಿಂದ ವಕ್ಫ್ ಮಂಡಳಿಯ ಆಸ್ತಿಯಲ್ಲಿ ಬಾಡಿಗೆದಾರರಾಗಿ ವಾಸಿಸುತ್ತಿದ್ದೇನೆ. ಶಾಲೆಗೆ ಭೂಮಿ ಅಗತ್ಯವಿರುವುದರಿಂದ ಖಾನ್ ಹಾಗೂ ಅವರ ತಂಡದ ಸದಸ್ಯರು ಆ ಜಾಗವನ್ನು ಖಾಲಿ ಮಾಡುವಂತೆ ಕೇಳಿಕೊಂಡರು. ನಾವು ಖಾಲಿ ಮಾಡದ ಹಿನ್ನೆಲೆ ಮನೆಯನ್ನು ಧ್ವಂಸಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಎಫ್‍ಐಆರ್‍ನಲ್ಲಿ ಶಿಯಾ ವಕ್ಫ್ ಮಂಡಳಿಯ ಅಧ್ಯಕ್ಷ ವಸೀಮ್ ರಿಜ್ವಿ, ಸುನ್ನಿ ಕೇಂದ್ರ ವಕ್ಫ್ ಮಂಡಳಿಯ ಅಧ್ಯಕ್ಷ ಜುಫರ್ ಅಹ್ಮದ್ ಫಾರೂಕಿ ಹಾಗೂ ಮಾಜಿ ವಲಯಾಧಿಕಾರಿ ಆಲಿ ಹಸನ್ ಹೆಸರು ಸಹ ಉಲ್ಲೇಖಿಸಲಾಗಿದೆ. ವಿದ್ಯುತ್ ಕಳ್ಳತನ ಮಾಡಿರುವ ಆರೋಪದ ಮೇಲೆ ಸಂಸದ ಅಜಂ ಖಾನ್ ಪತ್ನಿ ತಂಜೀನ್ ಫಾತಿಮಾ ವಿರುದ್ಧ ಸಹ ಎಫ್‍ಐಆರ್ ದಾಖಲಿಸಲಾಗಿದೆ.

ಅಜಂ ಖಾನ್ ವಿರುದ್ಧ ರಾಜ್ಯ ಸರ್ಕಾರ ‘ಲ್ಯಾಂಡ್ ಮಾಫಿಯಾ’ ಆರೋಪ ಹೊರಿಸಿದ್ದು, ಈ ಮೂಲಕ ಅವರ ಮೇಲೆ ಒಟ್ಟು 82 ಪ್ರಕರಣಗಳು ದಾಖಲಾದಂತಾಗಿದೆ. ಅವುಗಳಲ್ಲಿ 50 ಪ್ರಕರಣಗಳು ಭೂ ಕಬಳಿಕೆಗೆ ಸಂಬಂಧಿಸಿವೆ. ಅಲಿಯಗಂಜ್ ರೈತರ ದೂರಿನ ಮೇರೆಗೆ ಅಜಂ ಖಾನ್ ವಿರುದ್ಧ ಇನ್ನೂ 28 ಪ್ರಕರಣಗಳು ದಾಖಲಾಗಿವೆ. ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ಸ್ಥಳೀಯ ಕೋರ್ಟ್‍ನಿಂದ ಅಜಂ ಖಾನ್ ಅವರ ನಿರೀಕ್ಷಣಾ ಜಾಮೀನು ಅರ್ಜಿ ಸಹ ತಿರಸ್ಕೃತಗೊಂಡಿದೆ.