ಎರಡನೇ ಮಗುವಿನ ನಿರೀಕ್ಷೆಯಲ್ಲಿ ಸಲ್ಮಾನ್ ಖಾನ್ ಸಹೋದರಿ

ಮುಂಬೈ: ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಅವರ ಸಹೋದರಿ ಅರ್ಪಿತಾ ಖಾನ್ ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ.

ಬುಧವಾರ ಮುಂಬೈನಲ್ಲಿ ನಡೆದ ಐಫಾ ಅವಾರ್ಡ್ ಕಾರ್ಯಕ್ರಮಕ್ಕೆ ಅರ್ಪಿತಾ ಅವರ ಪತಿ ಆಯೂಷ್ ಶರ್ಮಾ ಆಗಮಿಸಿದ್ದರು. ರೆಡ್ ಕಾರ್ಪೆಟ್ ವೇಳೆ ಮಾಧ್ಯಮದವರು ಆಯೂಷ್ ಅವರನ್ನು ಮಾತನಾಡಿಸಿದ್ದಾರೆ. ಆಗ ಆಯೂಷ್ ತಾವು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದೇನೆ ಎಂದು ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಆಯೂಷ್ ಶರ್ಮಾ ಅವರು, “ಹೊಸ ಆಗಮನ ಯಾವಾಗಲೂ ರೋಮಾಂಚನಕಾರಿ ಎಂದು ನಾನು ಭಾವಿಸುತ್ತೇನೆ. ನಾನು ಹಾಗೂ ಅರ್ಪಿತಾ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದೇವೆ. ನಮ್ಮ ಜೀವನ ಅದ್ಭುತ ಪಯಣವಾಗಿದೆ. ಆದ್ದರಿಂದ ಇದು ಮತ್ತೆ ಪ್ರಾರಂಭವಾಗುತ್ತಿದೆ. ಮಗುವಿನ ಆಗಮನಕ್ಕೆ ನಮಗೆ ಕಾಯಲು ಆಗುತ್ತಿಲ್ಲ” ಎಂದು ಹೇಳಿದ್ದಾರೆ.

ಆಯೂಷ್ ಹಾಗೂ ಅರ್ಪಿತಾ 2014 ನವೆಂಬರ್ 18ರಂದು ಹೈದರಾಬಾದ್‍ನ ತಾಜ್ ಫಾಲಕ್‍ನೂಮಾ ಅರಮನೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2016 ಮಾರ್ಚ್ 30ರಂದು ಅರ್ಪಿತಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಬಳಿಕ ಆ ಮಗುವಿಗೆ ಅಹಿಲ್ ಎಂದು ನಾಮಕರಣ ಮಾಡಿದ್ದರು. ಅರ್ಪಿತಾ ಎರಡನೇ ಮಗುವಿಗೆ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ಬಿ-ಟೌನ್‍ನಲ್ಲಿ ಹರಿದಾಡುತ್ತಿತ್ತು. ಆದರೆ ಈಗ ಸ್ವತಃ ಆಯೂಷ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

2018ರಲ್ಲಿ ‘ಲವ್ ಯಾತ್ರಿ’ ಚಿತ್ರದ ಮೂಲಕ ಆಯೂಷ್ ಶರ್ಮಾ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದರು.

Leave a Reply

Your email address will not be published. Required fields are marked *