Connect with us

Cinema

ದಾಖಲೆ ಬರೆದ ರೌಡಿ ಬೇಬಿ ಹಾಡು- ಸಾಯಿ ಪಲ್ಲವಿ ಅಭಿಮಾನಿಗಳು ಗರಂ

Published

on

ಚೆನ್ನೈ: ಧನಷ್ ಹಾಗೂ ಸಾಯಿ ಪಲ್ಲವಿ ಅಭಿನಯದ ಮಾರಿ 2 ಸಿನಿಮಾ ಅಷ್ಟೇನು ಯಶಸ್ಸು ಕಾಣದಿದ್ದರೂ ರೌಡಿ ಬೇಬಿ ಹಾಡು ಮಾತ್ರ ಸಖತ್ ಸೆನ್ಸೇಶನ್ ಕ್ರಿಯೇಟ್ ಮಾಡಿತ್ತು. ಹೀಗಾಗಿ 100 ಕೋಟಿ ವ್ಯೂ ಪಡೆದಿದ್ದು, ಚಿತ್ರತಂಡ ಸಂಭ್ರಮಿಸುತ್ತಿದೆ. ಆದರೆ ಸಾಯಿ ಪಲ್ಲವಿ ಅಭಿಮಾನಿಗಳು ಮಾತ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಲಾಜಿ ಮೋಹನ್ ನಿರ್ದೇಶನದ ಮಾರಿ 2 ಸಿನಿಮಾದ ರೌಡಿ ಬೇಬಿ ಹಾಡನ್ನು ಯುವನ್ ಶಂಕರ್ ರಾಜಾ ಕಂಪೋಸ್ ಮಾಡಿದ್ದು, ಸಖತ್ ಹಿಟ್ ಆಗಿದೆ. ಇದೀಗ ಯೂಟ್ಯೂಬ್‍ನಲ್ಲಿ 1 ಬಿಲಿಯನ್ ವ್ಯೂವ್ಸ್ ಸಹ ಪಡೆದಿದೆ. ಚಿತ್ರತಂಡ ಇದರ ಸಂಭ್ರಮಾಚರಣೆ ಮಾಡಿದೆ. ಅಲ್ಲದೆ ಧನುಶ್ ಅವರ ವಂಡರ್‍ಬಾರ್ ಫಿಲಂಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟರ್ ಬಿಡುಗಡೆ ಮಾಡಿ ಸಂತಸ ವ್ಯಕ್ತಪಡಿಸಿದೆ.

ಕಾಮನ್ ಡಿಪಿ(ಸಿಡಿಪಿ) ಮೂಲಕ ರೌಡಿಬೇಬಿಹಿಟ್ಸ್1ಬಿಲಿಯನ್‍ವ್ಯೂವ್ಸ್ ಹ್ಯಾಷ್ ಟ್ಯಾಗ್‍ನೊಂದಿಗೆ ಪೋಸ್ಟ್ ಮಾಡಲಾಗಿದೆ. ಇದರಲ್ಲಿ ಕೇವಲ ಧನುಷ್ ಫೋಟೋ ಮಾತ್ರವಿದ್ದು, ಸಾಯಿಪಲ್ಲವಿ ಅವರನ್ನು ಸೈಡ್‍ಲೈನ್ ಮಾಡಲಾಗಿದೆ. ಹೀಗಾಗಿ ಅವರ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧನುಷ್ ಉತ್ತಮ ಡ್ಯಾನ್ಸರ್ ಆಗಿರಬಹುದು ಆದರೆ ಸಾಯಿ ಪಲ್ಲವಿ ಹಾಗೂ ಯುವನ್ ಅವರ ಸಂಗೀತದಿಂದ ಹಾಡು ಹಿಟ್ ಆಗಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

ಇನ್ನೂ ಕೆಲ ಅಭಿಮಾನಿಗಳು ಸಾಯಿ ಪಲ್ಲವಿ ಮಾತ್ರ ಇರುವ ಸಿಡಿಪಿಯನ್ನು ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.

ರೌಡಿ ಬೇಬಿ ಹಾಡಿನಲ್ಲಿ ಧನುಷ್ ಜೊತೆಗೆ ಸಾಯಿಪಲ್ಲವಿ ಸಹ ಅಷ್ಟೇ ಪವರ್‍ಫುಲ್ ಸ್ಟೆಪ್ ಹಾಕಿದ್ದು, ಭರ್ಜರಿ ಡ್ಯಾನ್ಸ್ ಮಾಡಿದ್ದರು. ಇಬ್ಬರ ಕಾಂಬಿನೇಶನ್ ಹಾಗೂ ಯುವನ್ ಶಂಕರ್ ಅವರ ಕಂಪೋಸ್, ಪ್ರಭುದೇವ್ ಹಾಗೂ ಜಾನಿ ಕೋರಿಯೋಗ್ರಫಿಯಲ್ಲಿ ಸಾಂಗ್ ಮೂಡಿಬಂದಿತ್ತು. ಈಗ ಸಂಭ್ರಮದ ವೇಳೆ ಇವರ್ಯಾರ ಚಿತ್ರ ಹಾಕದೇ, ಕೇವಲ ಧನುಷ್ ಫೊಟೋ ಹಾಕಿದ್ದಕ್ಕೆ ಸಾಯಿ ಪಲ್ಲವಿ ಅಭಿಮಾನಿಗಳು ಅಸಮಾಧಾನ ಹೊರ ಹಾಕಿದ್ದಾರೆ.

2015ರಲ್ಲಿ ಬಿಡುಗಡೆಯಾದ ಮಾರಿ ಸಿನಿಮಾ ಸಖತ್ ಹಿಟ್ ಆಗಿತ್ತು. ಹೀಗಾಗಿ ಈ ಸಿನಿಮಾದ ಸೀಕ್ವೆಲ್ ಎಂಬಂತೆ ಮಾರಿ 2 ಸಿನಿಮಾ ಮಾಡಲಾಗಿತ್ತು. ಎರಡು ವರ್ಷಗಳ ಹಿಂದೆ ಸಿನಿಮಾ ಬಿಡುಗಡೆಯಾಗಿತ್ತು. ಚಿತ್ರವನ್ನು ಸ್ವತಃ ಧನುಷ್ ಅವರು ತಮ್ಮ ಸ್ವಂತ ಬ್ಯಾನರ್‍ನಲ್ಲಿ ವಂಡರ್‍ಬಾರ್ ಫಿಲಂಸ್ ಅಡಿ ನಿರ್ಮಿಸಿದ್ದರು. ಆದರೆ ಚಿತ್ರ ಅಷ್ಟೇನು ಯಶಸ್ಸು ಕಾಣಲಿಲ್ಲ. ಆದರೆ ರೌಡಿ ಬೇಬಿ ಹಾಡು ಮಾತ್ರ ಭರ್ಜರಿ ಸದ್ದು ಮಾಡಿತ್ತು.

Click to comment

Leave a Reply

Your email address will not be published. Required fields are marked *

www.publictv.in