Connect with us

Districts

ಆಣೆ ಮಾಡಿ ಕಣ್ಣೀರು ಹಾಕಿದ ಮಹೇಶ್ – ಸಾರಾ ವಿರುದ್ಧ ವಿಶ್ವನಾಥ್ ಮತ್ತೆ ಕಿಡಿ

Published

on

ಮೈಸೂರು: ಹುಣಸೂರಿನ ಅನರ್ಹ ಶಾಸಕ ಎಚ್ ವಿಶ್ವನಾಥ್ ಮತ್ತು ಮಾಜಿ ಸಚಿವ ಸಾರಾ ಮಹೇಶ್ ಇಬ್ಬರು ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದರೂ ಇಂದು ಮಹೇಶ್ ಕಣ್ಣೀರು ಹಾಕಿ ಆಣೆ ಮಾಡಿ ತೆರಳಿದ್ದಾರೆ.

ಗುರುವಾರ ಬೆಳಗ್ಗೆ 9 ಗಂಟೆಗೆ ಇಬ್ಬರು ಚಾಮುಂಡೇಶ್ವರಿ ಮುಂದೆ ಆಣೆ ಪ್ರಮಾಣ ಮಾಡುವುದಾಗಿ ಹೇಳಿದ್ದರಿಂದ ಇಂದು ಏನಾಗುತ್ತದೆ ಎನ್ನುವ ಕುತೂಹಲ ಮೂಡಿತ್ತು. 8 ನಿಮಿಷ ಮೊದಲು ಅಂದರೆ 8:52ಕ್ಕೆ ವಿಶ್ವನಾಥ್ ಮೊದಲಿಗರಾಗಿ ಬೆಟ್ಟಕ್ಕೆ ಆಗಮಿಸಿ ದೇವಾಲಯ ಪ್ರವೇಶಿಸಿದರು.

ದೇವಾಲಯದ ಮುಂಭಾಗ ನಿಂತ ವಿಶ್ವನಾಥ್ ಅವರು ಪೂಜೆ ಮಾಡಿ ಹೊರ ಬಂದರು. ವಿಶ್ವನಾಥ್ ಹೊರ ಬಂದ ಬೆನ್ನಲ್ಲೇ ಸಾರಾ ಮಹೇಶ್ ದೇವಾಲಯ ಪ್ರವೇಶಿಸಿದರು. ಸಾರಾ ಮಹೇಶ್ ದೇವಾಲಯ ಪ್ರವೇಶಿಸಿದ ವಿಚಾರ ತಿಳಿದ ವಿಶ್ವನಾಥ್ ಹೊರಗಡೆ ಅವರಿಗಾಗಿ ಕಾಯುತ್ತಾ ಕುಳಿತಿದ್ದರು. ಸುಮಾರು ಒಂದು ಗಂಟೆಗಳ ಕಾಲ ಮಹೇಶ್ ಅವರಿಗಾಗಿ ವಿಶ್ವನಾಥ್ ಹೊರಗಡೆ ಕುಳಿತಿದ್ದರು. ಒಂದು ಗಂಟೆ ಕಾದರೂ ಮಹೇಶ್ ಮಾತ್ರ ದೇವಾಲಯದ ಒಳಗಡೆಯಿಂದ ಬರಲೇ ಇಲ್ಲ. ಮಹೇಶ್ ಅವರು ಬಾರದ ಕಾರಣ ವಿಶ್ವನಾಥ್ ಮಾಜಿ ಸಚಿವರ ವಿರುದ್ಧ ವಾಗ್ದಾಳಿ ನಡೆಸಿ ತೆರಳಿದರು. ವಿಶ್ವನಾಥ್ ಹೋದ ನಂತರ ಸಾರಾ ಮಹೇಶ್ ದೇವಾಲಯದಿಂದ ಹೊರ ಬಂದರು. ಇದನ್ನೂ ಓದಿ: ನನ್ನ ಮಾತನ್ನು ತಿರುಚಬೇಡಿ, ಯಾವುದೇ ಆಣೆ ಪ್ರಮಾಣ ಮಾಡಲು ನಾನು ಬಂದಿಲ್ಲ: ವಿಶ್ವನಾಥ್

ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಬದಲಾದಂತಹ ರಾಜಕೀಯ ಪರಿಸ್ಥಿತಿಯಲ್ಲಿ ನಮ್ಮ ಪಕ್ಷದ ಮೂರು ಜನ ಶಾಸಕರು ಹೋಗಿದ್ದಾರೆ. ನಾನು ಯಾರ ಬಗ್ಗಯೂ ಚರ್ಚೆ ಮಾಡಿಲ್ಲ. ಆದರೆ ಇವರು ಹೋದ ನಂತರ ಹಾಗೂ ಪಕ್ಷದಲ್ಲಿ ಇದ್ದ ಸಂದರ್ಭದಲ್ಲಿ ವೈಯಕ್ತಿಕವಾಗಿ ಹಾಗೂ ಸಾರ್ವಜನಿಕವಾಗಿ ನನ್ನನ್ನು ಟೀಕಿಸಿದ್ದರು. ಆದಾದ ನಂತರ ಮುಂಬೈಯಿಂದ ಕೂಡ ಎರಡು ಬಾರಿ ನನ್ನ ಬಗ್ಗೆ ಮಾತನಾಡಿದ್ದರು. ನಂತರ ವಿಧಾನಸಭೆಯಲ್ಲಿ ನನ್ನ ಜೊತೆ ಮಾತನಾಡಿದ್ದನ್ನು ಉಲ್ಲೇಖ ಮಾಡಿದ್ದರು. ಆದಾದ ಬಳಿಕವೂ ಅವರು ನನ್ನ ಬಗ್ಗೆ ಟೀಕೆ ಮಾಡಿದ್ದರು ಎಂದು ದೂರಿದ್ದರು.

ನೀವು ನನ್ನ ಜೊತೆ ಚರ್ಚೆ ಮಾಡಿದ್ದೀರಿ. ಮಂತ್ರಿ ಬೇಡ ಎಂದು ಹೇಳಿದ್ದೀರಿ. ನನಗೆ ಒತ್ತಡ ಇದೆ. ಈ ವಯಸ್ಸಿನಲ್ಲಿ ಅಂತಹ ಕೆಲಸ ಮಾಡಲ್ಲ ಎಂದು ಹೇಳಿದ್ದೀರಿ. ಹಾಗಿದ್ದರೆ ಈಗ ಯಾವ ಅಂಶಕ್ಕೆ ಬಲಿ ಆಗಿದ್ದೀರಿ. ಅದನ್ನು ಬಂದು ಪ್ರಮಾಣ ಮಾಡಿ ಎಂದು ಕೇಳಿದ್ದೆ. ಮೊದಲು ಅವರು ಸಂವಿಧಾನ ಮೇಲೆ ಪ್ರಮಾಣ ಮಾಡುತ್ತೇನೆ ಎಂದು ಹೇಳಿದ್ದಾರೆ. ನಾವು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸುವ ಸಂದರ್ಭದಲ್ಲಿ ಕರ್ತವ್ಯ ನಿಷ್ಠೆ ಮತ್ತು ನಂಬಿಕೆ ಮೇಲೆ ಗೌರವ ಇದ್ದಿದ್ದರೆ ಅವರು ರಾಜೀನಾಮೆ ನೀಡುತ್ತಿರಲಿಲ್ಲ. ಆದರೆ ಈಗ ಕೊಟ್ಟಿದ್ದಾರೆ. ಹಾಗಾಗಿ ನಾನು ಅವರನ್ನು ದೇವಸ್ಥಾನಕ್ಕೆ ಕರೆದಿದ್ದೇನೆ ಎಂದು ಹೇಳಿದ್ದಾರೆ.

ಮೊದಲು ನಾವು ಸಾರ್ವಜನಿಕ ಜೀವನದಲ್ಲಿದ್ದೇವೆ. ನಮ್ಮ ಸಾರ್ವಜನಿಕ ಬದುಕು ಹಾಗೂ ವೈಯಕ್ತಿಕ ಬದುಕು ಎರಡು ಚೆನ್ನಾಗಿರಬೇಕು. ನಾನು ನಿಮ್ಮ ಮೇಲೆ ಮಾಡಿದ ಆರೋಪ ಸುಳ್ಳು ಎಂದರೆ ಪ್ರಮಾಣ ಮಾಡಿ. ಇಲ್ಲವೆಂದರೆ ವೈಯಕ್ತಿಕವಾಗಿ ಮಾಡಿದ ಆರೋಪ ನಿಜವೆಂದು ಸಾಬೀತು ಮಾಡಲಿ. ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದ್ದೇನೆ. ನಾನು ಏನೂ ಎಂಬುದು ವಿಶ್ವನಾಥ್‍ಗೆ ಸಾರ್ವಜನಿಕವಾಗಿ ಹೇಳಿದ್ದೆ. ಮೊದಲು ಅವರು ಪ್ರಮಾಣ ಮಾಡಲಿ. ನಂತರ ಅವರನ್ನು ಖರೀದಿಸುವವರನ್ನು ಕರೆದುಕೊಂಡು ಬರೋಣ ಎಂದರು.

ಇದೇ ವೇಳೆ ನಾನು ಕುರುಬ ಸಮುದಾಯದವನೂ ಎಂದು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂಬ ವಿಶ್ವನಾಥ್ ಹೇಳಿಕೆಗೂ ಸಾರಾ ತಿರುಗೇಟು ನೀಡಿದ್ದಾರೆ. ಇಷ್ಟು ದಿನ ಇಲ್ಲದ ಈ ಮಾತು ಈಗ ಯಾಕೆ ಬಂತು? ಎಂಬುದು ನನಗೆ ಗೊತ್ತಿಲ್ಲ. ನಮ್ಮ ಸಮಾಜದವರು ಇದ್ದರೂ ನಾವು ಅವರಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿ ರಾಜ್ಯಾಧ್ಯಕ್ಷ ಮಾಡಿರಲಿಲ್ವಾ? ಆಗ ನಮಗೆ ಅವರ ಜಾತಿ ಗೊತ್ತಿರಲಿಲ್ವಾ? ಅವರು ಮೊದಲು ಪ್ರಮಾಣ ಮಾಡಲಿ. ಈಗ ಈ ಬಗ್ಗೆ ಅವರು ಯಾಕೆ ಮಾತನಾಡುತ್ತಿದ್ದಾರೆ ಗೊತ್ತಿಲ್ಲ ಎಂದು ವಿಶ್ವನಾಥ್ ಆರೋಪಕ್ಕೆ ಸಾರಾ ಮಹೇಶ್ ಪ್ರತಿಕ್ರಿಯಿಸಿದರು.

ಈ ಬೆಳವಣಿಗೆ ಆದ ನಂತರ ನಾನು ಸ್ಪೀಕರ್‍ರನ್ನು ಭೇಟಿಯಾಗಿ ರಾಜೀನಾಮೆ ಪತ್ರ ನೀಡಿದ್ದೇನೆ. ಮೊದಲಿನಿಂದಲೂ ನನ್ನ ಹಾಗೂ ಸ್ಪೀಕರ್ ಸಂಬಂಧ ಚೆನ್ನಾಗಿರುವ ಕಾರಣ ಅವರು ಎರಡು ಬಾರಿ ನನ್ನನ್ನು ಕರೆದು ಸಮಾಧಾನ ಮಾಡಿ ವಾಪಸ್ ಕಳುಹಿಸಿದ್ದರು. ನಾನು ರಾಜಕೀಯ ವಿಷಯದಲ್ಲಿ ವೈಯಕ್ತಿವಾಗಿ ಯಾವತ್ತೂ ಯಾರಿಗೂ ಟೀಕೆ ಮಾಡಿಲ್ಲ. ಅವರು ನನ್ನಿಂದ ರಾಜೀನಾಮೆ ನೀಡಿಲ್ಲ. ಬದಲಿಗೆ ಅವರು ಆಮಿಷಕ್ಕೆ ಒಳಗಾಗಿ ರಾಜೀನಾಮೆ ನೀಡಿದ್ದಾರೆ ಎಂದು ಮಹೇಶ್ ತಿಳಿಸಿದರು.

ನನ್ನ ರಾಜೀನಾಮೆ ಬಗ್ಗೆ ಕುಮಾರಸ್ವಾಮಿ, ದೇವೇಗೌಡ, ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ನನಗೆ ತಿಳಿ ಹೇಳಿದ್ದಾರೆ. ರಾಜಕೀಯದಲ್ಲಿ ಇದೆಲ್ಲ ಸಹಜ ಎಂದು ಹೇಳಿದ್ದಾರೆ. ಮಂಗಳವಾರ ನಾನು ಸ್ಪೀಕರ್ ಜೊತೆ ಮಾತನಾಡಿದ್ದೇನೆ. ಎರಡ್ಮೂರು ದಿನದಲ್ಲಿ ಹೇಳುತ್ತೇನೆ ಎಂದು ಸಾರಾ ಮಹೇಶ್ ಹೇಳಿದರು.