Connect with us

IPL Stories

ಫ್ರೀ ಹಿಟ್ ಎಸೆತಕ್ಕೆ ಔಟ್ – ಕೆಟ್ಟ ದಾಖಲೆ ಬರೆದ ಆರ್‌ಸಿಬಿ ಇಬ್ಬರು ಆಟಗಾರರು

Published

on

– ಕ್ರಿಕೆಟ್ ಇತಿಹಾಸದಲ್ಲೇ ಮೂರನೇ ಬಾರೀ ಫ್ರೀ ಹಿಟ್‍ನಲ್ಲಿ ರನೌಟ್

ಅಬುಧಾಬಿ: ಐಪಿಎಲ್‍ನಲ್ಲಿ ಎರಡು ಬಾರಿ ಫ್ರೀ ಹಿಟ್ ಬಾಲಿನಲ್ಲೇ ರಾಯಲ್ ಚಾಲೆಜಂರ್ಸ್ ಬೆಂಗಳೂರು ತಂಡದ ಆಟಗಾರರು ಔಟ್ ಆಗಿ ಕೆಟ್ಟ ದಾಖಲೆ ಬರೆದಿದ್ದಾರೆ.

ಶುಕ್ರವಾರ ಅಬುಧಾಬಿ ಮೈದಾನದಲ್ಲಿ ನಡೆದ ಐಪಿಎಲ್-2020ಯ ಎಲಿಮಿನೇಟರ್-1 ಪಂದ್ಯದಲ್ಲಿ ಬೆಂಗಳೂರು ತಂಡ ಹೀನಾಯವಾಗಿ ಸೋತಿದೆ. ಈ ಮೂಲಕ ಐಪಿಎಲ್-2020ಯಿಂದ ಹೊರಗೆ ಬಿದ್ದಿದೆ. ಆದರೆ ಶುಕ್ರವಾರದ ಪಂದ್ಯದಲ್ಲಿ ಆರ್‌ಸಿಬಿ ಆಟಗಾರ ಮೊಯೀನ್ ಅಲಿ ಫ್ರೀ ಹಿಟ್ ಬಾಲಿನಲ್ಲಿ ರನೌಟ್ ಆಗುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ.

ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡ ಮೊದಲೇ ಮೂರು ವಿಕೆಟ್‍ಗಳನ್ನು ಕಳೆದುಕೊಂಡು ಅಪಾಯಕ್ಕೆ ಸಿಲುಕಿತ್ತು. ಈ ವೇಳೆ 3ನೇ ಆಟಗಾರನಾಗಿ ಆರೋನ್ ಫಿಂಚ್ ಔಟ್ ಆದ ನಂತರ ಮೊಯೀನ್ ಅಲಿಯವರು ಕಣಕ್ಕಿಳಿದಿದ್ದರು. ಈ ವೇಳೆ 10ನೇ ಓವರ್ 4ನೇ ಬಾಲನ್ನು ನದೀಮ್ ಅವರು ನೋಬಾಲ್ ಹಾಕಿದರು. ನಂತರದ ಫ್ರೀ ಹಿಟ್ ಬಾಲನ್ನು ಆಫ್ ಸೈಡ್ ಕಡೆಗೆ ಭಾರಿಸಿದ ಅಲಿ ರನ್ ಹೋಡಲು ಬಂದರು. ಆದರೆ ರಶೀದ್ ಖಾನ್ ನಾನ್ ಸ್ಟ್ರೈಕ್‍ನಲ್ಲಿದ್ದ ವಿಕೆಟ್‍ಗೆ ನೇರವಾಗಿ ಬಾಲನ್ನು ಎಸೆದ ಕಾರಣ ರನೌಟ್‍ಗೆ ಬಲಿಯಾದರು.

ಈ ಮೂಲಕ ಫ್ರೀ ಹಿಟ್‍ನಲ್ಲಿ ಔಟ್ ಆದ ಎರಡನೇ ಆರ್‌ಸಿಬಿ ಆಟಗಾರ ಎಂಬ ಕೆಟ್ಟ ದಾಖಲೆಯನ್ನು ಮೊಯೀನ್ ಅಲಿ ಬರೆದರು. ಪಂದ್ಯದ ಬಳಿಕ ಕ್ರಿಕೆಟ್ ಅಭಿಮಾನಿಗಳು ಅಲಿ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ 2017ರ ಐಪಿಎಲ್‍ನಲ್ಲಿ ಆರ್‌ಸಿಬಿ ಪರವಾಗಿ ಆಡುತ್ತಿದ್ದ ಕೇದರ್ ಜಾಧವ್ ಕೂಡ ಫ್ರೀ ಹಿಟ್‍ನಲ್ಲಿ ಔಟ್ ಆಗಿದ್ದರು. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಬುಮ್ರಾ ಅವರು ನೋಬಾಲ್ ಎಸೆದು ಫ್ರೀ ಹಿಟ್‍ನಲ್ಲಿ ಜಾಧವ್ ಅವರನ್ನು ರನೌಟ್ ಮಾಡಿದ್ದರು.

ಫ್ರೀ ಹಿಟ್ ಬ್ಯಾಟ್ಸ್ ಮನ್‍ಗೆ ವರವಿದ್ದಂತೆ ಈ ಬಾಲಿನಲ್ಲಿ ಆತ ವಿಕೆಟ್ ಆದರೂ ಕ್ಯಾಚ್ ಕೊಟ್ಟರು ಔಟ್ ಇರುವುದಿಲ್ಲ. ಈ ಬಾಲಿನಲ್ಲಿ ರನೌಟ್ ಆಗುವುದು ಅಪರೂಪ. ಆದರೆ ಕ್ರಿಕೆಟ್ ಇತಿಹಾಸದಲ್ಲಿ ಮೂರು ಬಾರಿ ಈ ಘಟನೆ ನಡೆದಿದ್ದು, ಎರಡು ಬಾರಿ ಐಪಿಎಲ್‍ನಲ್ಲಿ ನಡೆದಿರುವುದು ವಿಶೇಷವಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲೂ ಫ್ರೀಹಿಟ್‍ನಲ್ಲಿ ಬ್ಯಾಟ್ಸ್ ಮನ್ ಔಟ್ ಆಗಿದ್ದು, 2006ರಲ್ಲಿ ಜೋಹಾನ್ಸ್ ಬರ್ಗ್‍ನಲ್ಲಿ ನಡೆದ ಮೊದಲ ಟಿ-20 ಪಂದ್ಯದಲ್ಲಿ ಆಫ್ರಿಕಾದ ರಾಬಿನ್ ಪೀಟರ್ಸನ್, ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಫ್ರೀ ಹಿಟ್‍ನಲ್ಲಿ ರನೌಟ್ ಆಗಿದ್ದರು.

ಶುಕ್ರವಾರದ ಎಲಿಮಿನೇಟರ್-1 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜೇಸನ್ ಹೋಲ್ಡರ್ ಅವರ ದಾಳಿಗೆ ತತ್ತರಿಸಿ ಆರಂಭಿಕ ಆಘಾತಕ್ಕೆ ಒಳಗಾಯ್ತು. ಆದರೆ ಕೊನೆಯಲ್ಲಿ ಎಬಿ ಡಿವಿಲಿಯರ್ಸ್ ಕುಸಿದ ಆರ್‌ಸಿಬಿಗೆ ಆಸರೆಯಾದರು. ಪರಿಣಾಮ ನಿಗದಿತ 20 ಓವರಿನಲ್ಲಿ 131 ರನ್ ಪೇರಿಸಿತು. ಈ ಗುರಿನ್ನು ಬೆನ್ನಟ್ಟಿದ ಹೈದರಾಬಾದ್ ತಂಡ ಕೇನ್ ವಿಲಿಯಮ್ಸನ್ ಅವರ ಭರ್ಜರಿ ಬ್ಯಾಟಿಂಗ್‍ನಿಂದ ಇನ್ನೂ 2 ಬಾಲ್ ಇರುವಂತೆ ಗೆದ್ದು ಬೀಗಿ ಆರ್‍ಸಿಬಿಯನ್ನು ಐಪಿಎಲ್‍ನಿಂದ ಹೊರಗಟ್ಟಿತು.

Click to comment

Leave a Reply

Your email address will not be published. Required fields are marked *