Tuesday, 21st January 2020

Recent News

ಅಧಿಕಾರ ಮೊದಲೇ ನಿಶ್ಚಯವಾಗಿರುತ್ತೆ, ತಲಕಾವೇರಿಗೆ ಬಂದ್ರೆ ಹೋಗಲ್ಲ: ಸಿಎಂ ಎಚ್‍ಡಿಕೆ

ಮಡಿಕೇರಿ: ಅಧಿಕಾರಕ್ಕೆ ಬರುವುದು ಮೊದಲೇ ನಿಶ್ಚಯವಾಗಿರುತ್ತೆ, ತಲಕಾವೇರಿಗೆ ಬಂದ ಕೂಡಲೇ ಅಧಿಕಾರ ಹೋಗುವುದಿಲ್ಲವೆಂದು ಸಿಎಂ ಕುಮಾರಸ್ವಾಮಿಯವರು ಹೇಳಿದ್ದಾರೆ.

ಕಾವೇರಿ ತಾಯಿಯ ತೀರ್ಥೋದ್ಭವದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರೇ ಆಗಲಿ ಅಧಿಕಾರಕ್ಕೆ ಬರುವುದು ಮೊದಲೇ ನಿಶ್ಚಯವಾಗಿರುತ್ತದೆ. ಕೇವಲ ತಲಕಾವೇರಿಗೆ ಬಂದ ಮಾತ್ರಕ್ಕೆ ಅಧಿಕಾರ ಹೋಗುತ್ತದೆ ಎನ್ನುವುದು ಅವರವರ ವಿಚಾರಕ್ಕೆ ಬಿಟ್ಟಿದ್ದು, ತಲಕಾವೇರಿಗೆ ಬಂದರೆ ಅಧಿಕಾರ ಹೋಗಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಧಿಕಾರ ಜನತೆಯ ಅನುಗ್ರಹ, ದೇವಿಯ ವರ. ನಮ್ಮ ಸರ್ಕಾರ ಸದೃಢವಾಗಿಯೇ ಇರಲಿದೆ. ಪ್ರವಾಹದಿಂದ ಉಂಟಾಗಿರುವ ಕೊಡಗಿನ ಸಮಸ್ಯೆಯ ಪರಿಹಾರಕ್ಕೆ ಕಾವೇರಿ ತಾಯಿಯ ಶಕ್ತಿ ಬೇಕಿದೆ. ಸರ್ಕಾರ, ಮುಖ್ಯಮಂತ್ರಿಗಿರಿ ಶಾಶ್ವತವಲ್ಲ. ಇದಲ್ಲದೇ ಚಾಮರಾಜನಗರದ ದೇವಾಲಯಕ್ಕೂ ಭೇಟಿ ನೀಡುತ್ತೇನೆ ಎಂದು ತಿಳಿಸಿದರು.

ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಸಿಎಂ ಕುಮಾರಸ್ವಾಮಿ ಸಂಪ್ರದಾಯಕ್ಕೆ ಸೆಡ್ಡು ಹೊಡೆದು, ಕಾವೇರಿ ತಾಯಿಯ ತೀರ್ಥೋದ್ಭವದಲ್ಲಿ ಭಾಗವಹಿಸಿದ್ದರು. ಸಚಿವರಾದ ಸಾ.ರಾ.ಮಹೇಶ್, ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಹಾಗೂ ಶಾಸಕರಾದ ಅಪ್ಪಚ್ಚು ರಂಜನ್, ಬೋಪಯ್ಯ ಅವರು ಭಾಗವಹಿಸಿದ್ದರು.

ಬುಧವಾರ ಸಂಜೆ 6.43ರ ಮೇಷ ಲಗ್ನದಲ್ಲಿ ಮಹಾಮಂಗಳಾರತಿಯ ನಂತರ ಕಾವೇರಿ ತಾಯಿಯು ತೀರ್ಥ ರೂಪದಲ್ಲಿ ಬ್ರಹ್ಮ ಕುಂಡಿಕೆಯಿಂದ ಉಕ್ಕಿ ಹರಿದಳು. ಉಗಮದ ನಂತರ ಭಕ್ತರ ದಂಡು ಕಾವೇರಿ ತೀರ್ಥವನ್ನು ಪಡೆಯಲು ಮುಗಿಬಿದ್ದರು. ವರ್ಷಕ್ಕೊಮ್ಮೆ ನಡೆಯುವ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ದೇಶದ ವಿವಿಧೆಡೆಗಳಿಂದ ಸಹಸ್ರಾರು ಸಂಖ್ಯೆಯ ಭಕ್ತರು ಆಗಮಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *