Connect with us

Latest

ಸ್ವಾರ್ಥ ಒಳ್ಳೆಯದಲ್ಲ ಎಂಬುದು ಎಲ್ಲರಿಗೂ ಗೊತ್ತು- ಶಿವಸೇನೆಗೆ ಮೋಹನ್ ಭಾಗವತ್ ಟಾಂಗ್

Published

on

ಮುಂಬೈ: ಸ್ವಾರ್ಥವು ಕೆಟ್ಟದ್ದೆಂದು ಎಲ್ಲರಿಗೂ ತಿಳಿದಿರುತ್ತದೆ. ಆದರೆ ಕೆಲವೇ ಜನರು ಅದನ್ನು ತ್ಯಜಿಸುತ್ತಾರೆ ಎಂದು ಹೇಳುವ ಮೂಲಕ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಶಿವಸೇನೆಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ನಾಗ್ಪುರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಕುರಿತು ಮಾತನಾಡಿದ ಅವರು, ಎರಡೂ ಪಕ್ಷಗಳ ಹೆಸರನ್ನು ಉಲ್ಲೇಖಿಸದೆ ಪರೋಕ್ಷವಾಗಿ ಶಿವಸೇನೆಗೆ ಟಾಂಗ್ ನೀಡಿದರು. ಇಬ್ಬರೂ ಸಹ ನಷ್ಟ ಅನುಭವಿಸಬೇಕಾಗುತ್ತದೆ. ಸ್ವಾರ್ಥ ಕೆಟ್ಟದ್ದು ಎಂದು ಎಲ್ಲರಿಗೂ ತಿಳಿದಿದೆ. ಆದರೆ ಕೆಲವರು ಮಾತ್ರ ತಮ್ಮ ಸ್ವಾರ್ಥವನ್ನು ತ್ಯಜಿಸುತ್ತಾರೆ. ನೀವು ದೇಶ ಅಥವಾ ವ್ಯಕ್ತಿಯನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ ಎಂದು ಹೇಳಿದರು. ಇದನ್ನೂ ಓದಿ: ಮತ್ತೆ ಬಿಜೆಪಿ ಮೈತ್ರಿ ಕಡೆಗೆ ಒಲವು ತೋರಿದ ಶಿವಸೇನೆ

ಒಂದು ವಿಷಯದ ಬಗ್ಗೆ ಹೋರಾಡಲು ಹೋದರೆ ಇಬ್ಬರೂ ನಷ್ಟ ಅನುಭವಿಸುತ್ತಾರೆ ಎಂದು ಎಲ್ಲರಿಗೂ ತಿಳಿದಿದೆ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಹಾಗೂ ಶರದ್ ಪವಾರ್ ಅವರ ಎನ್‍ಸಿಪಿ ಸೇರಿದಂತೆ ಯಾವುದೇ ಪ್ರಮುಖ ಪಕ್ಷಗಳು ಸರ್ಕಾರ ರಚಿಸಲು ಬೇಕಾದ ಸಂಖ್ಯೆಯನ್ನು ಹೆಚ್ಚಿಸಲು ಸಾಧ್ಯವಾಗದ ಕಾರಣ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿ ಮಾಡಲಾಗಿದೆ. ಒಟ್ಟು 288 ಕ್ಷೇತ್ರಗಳ ಪೈಕಿ ಬಿಜೆಪಿ 105, ಶಿವಸೇನೆ 56, ಎನ್‍ಸಿಪಿ, ಕಾಂಗ್ರೆಸ್ ಹಾಗೂ ಇತರರು 102 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ.

ಅತಿ ಹೆಚ್ಚು ಸ್ಥಾನ ಗಳಿಸಿದ ಬಿಜೆಪಿ ಸರ್ಕಾರ ರಚಿಸುವಂತೆ ರಾಜ್ಯಪಾಲರು ಆಹ್ವಾನ ನೀಡಿದ್ದರು. ಆದರೆ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ನಾವು ಸರ್ಕಾರ ರಚಿಸುವುದಿಲ್ಲ ಎಂದು ಹೇಳಿದ್ದರು. ಶಿವಸೇನೆಯು ಎನ್‍ಸಿಪಿ ಹಾಗೂ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲು ಮುಂದಾಗಿದೆ. ಆದರೆ ಇದು ಸಾಧ್ಯವಾಗಿಲ್ಲ, ಇನ್ನೂ ಸಹ ಮಾತುಕತೆ ನಡೆಯುತ್ತಿದೆ. ಇದರ ಮಧ್ಯೆ ಮೋಹನ್ ಭಾಗವತ್ ಅವರ ಹೇಳಿಕೆ ಮಹತ್ವ ಪಡೆದಿದೆ.