Wednesday, 11th December 2019

10 ಕೋಟಿ ರೂ. ವೆಚ್ಚದಲ್ಲಿ ಸಂತ್ರಸ್ತರಿಗೆ ಮನೆ ಕಟ್ಟಿಕೊಡಲು ನಿರ್ಧಾರ – ಸುಧಾಮೂರ್ತಿ

ಬೆಂಗಳೂರು: ಸಾಕಷ್ಟು ಅಗತ್ಯ ವಸ್ತುಗಳನ್ನು ನೆರೆ ಸಂತ್ರಸ್ತರಿಗೆ ಕಳುಹಿಸಿ, ಸಿಎಂ ಪರಿಹಾರ ನಿಧಿಗೆ 50 ಲಕ್ಷ ರೂ. ನೀಡಿರುವುದು ಮಾತ್ರವಲ್ಲದೆ, ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಮನೆಗಳನ್ನು ಕಟ್ಟಿಸಿಕೊಡಲು ಸಹ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಅವರು ನಿರ್ಧರಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾ ಮೂರ್ತಿ ಅವರು, ಈಗಾಗಲೇ ಸಂತ್ರಸ್ತರಿಗೆ ಸಾಕಷ್ಟು ಅಗತ್ಯ ವಸ್ತುಗಳನ್ನು ಕಳುಹಿಸಿ ಕೊಡಲಾಗಿದೆ. ಅಲ್ಲದೆ, ಮಳೆಯ ಅಬ್ಬರ ಹಾಗೂ ಪ್ರವಾಹ ಕಡಿಮೆಯಾದ ಬಳಿಕ ಮನೆ ಕಟ್ಟಿಕೊಡಲೂ ಸಹ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

ತುಂಬಾ ಪ್ರವಾಹ ಪೀಡಿತ ಹಾಗೂ ಕಾನೂನಿನ ದೃಷ್ಟಿಯಿಂದ ಸರಿಯಾಗಿರುವ ಜಾಗವನ್ನು ಹುಡುಕಿ ಮನೆ ಕಟ್ಟಿಕೊಡಲು ನಿರ್ಧರಿಸಲಾಗಿದೆ. ಈ ಅಗತ್ಯ ವಸ್ತುಗಳನ್ನು ಸಾಗಿಸುವ ತುರ್ತು ಸೇವೆಯನ್ನು ಹೊರತು ಪಡಿಸಿ ಸುಮಾರು 10 ಕೋಟಿ ರೂ.ಗಳ ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡಲಾಗುವುದು. ಪ್ರವಾಹದಿಂದ ಯಾವ ಜಾಗದಲ್ಲಿ ಹೆಚ್ಚು ಹಾನಿಯಾಗಿದೆ ಹಾಗೂ ಯಾವುದು ಸೂಕ್ತ ಜಾಗ ಎಂಬುದನ್ನು ನೋಡಿಕೊಂಡು ಅಲ್ಲಿ ಸಂತ್ರಸ್ತರಿಗೆ ಮನೆ ಕಟ್ಟಿಕೊಡುತ್ತೇವೆ ಎಂದರು.

ಮನೆ ನಿರ್ಮಿಸಿಕೊಡಲು ಸುಮಾರು 10 ಕೋಟಿ ರೂ. ಮೀಸಲಿರಿಸಿದ್ದೇವೆ. ಕಳೆದ ಬಾರಿ ಕೊಡಗಿನಲ್ಲಿ ಪ್ರವಾಹ ಸಂಭವಿಸಿದಾಗ 2,500 ಮನೆಗಳನ್ನು ನಿರ್ಮಿಸಿದ್ದೆವು. ಆಂಧ್ರದಲ್ಲಿ ಪ್ರವಾಹ ಸಂಭವಿಸಿದಾಗ 250 ಮನೆ ನಿರ್ಮಾಣ ಮಾಡಿದ್ದೇವು. ಹೀಗೆ ಹಾನಿಯ ಪ್ರಮಾಣವನ್ನು ನೋಡಿಕೊಂಡು ಅಗತ್ಯವಿದ್ದಷ್ಟು ಮನೆಗಳನ್ನು ನಿರ್ಮಿಸಲಾಗುವುದು. ಇದಕ್ಕಾಗಿ ನಮ್ಮ ಗುತ್ತಿಗೆದಾರ ರಮೇಶ್ ರೆಡ್ಡಿ ಅವರ ತಂಡ ಸಿದ್ಧವಾಗಿದೆ. ಅವರ ನೇತೃತ್ವದಲ್ಲೇ ಮನೆ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಈಗಾಗಲೇ ಸಿದ್ಧ ಆಹಾರ ಪದಾರ್ಥವನ್ನು ಹೊರತುಪಡಿಸಿ ಎಲ್ಲವನ್ನೂ ಕಳುಹಿಸಿ ಕೊಡುತ್ತಿದ್ದೇವೆ. ನಮ್ಮ ತಂಡ ಯಾವಾಗಲೂ ಇಂತಹ ಕಾರ್ಯಗಳಿಗೆ ಸದಾ ಸಿದ್ಧವಿರುತ್ತದೆ. ಪ್ರವಾಹ ಕೈ ಮೀರಿ ಹೋಗುತ್ತಿದೆ ಎನ್ನುವಷ್ಟರಲ್ಲಿ ನಾವು 50 ಲಕ್ಷ ರೂ. ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಂದಾಯ ಮಾಡಿದ್ದೇವೆ. ಉತ್ತಮ ಗುಣಮಟ್ಟದ ವಸ್ತುಗಳನ್ನೇ ನೀಡಲಾಗುತ್ತಿದ್ದು, ನಾವು ಬಳಸುವ ರೀತಿಯ ವಸ್ತುಗಳನ್ನೇ ಕಳುಹಿಸುತ್ತೇವೆ ಎಂದು ತಿಳಿಸಿದ್ದಾರೆ.

ಒಂದು ಕುಟುಂಬಕ್ಕೆ ಒಂದು ಚೀಲದಂತೆ ಅದರಲ್ಲಿ ಬಟ್ಟೆ ಸೇರಿದಂತೆ ಕುಟುಂಬಕ್ಕೆ ಬೇಕಾದ ಎಲ್ಲ ಬಗೆಯ ವಸ್ತಗಳನ್ನು ಪ್ಯಾಕ್ ಮಾಡಿ ವಿತರಿಸುತ್ತೇವೆ. ಈ ಕಿಟ್‍ನಲ್ಲಿ ಉಪ್ಪು, ಸಕ್ಕರೆ, ಮೇಣದ ಬತ್ತಿ, ಬೆಂಕಿ ಪೊಟ್ಟಣ, ಸೋಪ್, ಪೇಸ್ಟ್, ಸ್ಯಾನಿಟರಿ ಪ್ಯಾಡ್, ಮಕ್ಕಳ ಫ್ರಾಕ್, ದೊಡ್ಡವರ ಬಟ್ಟೆಗಳು, ಔಷಧಿ, ಸೊಳ್ಳೆ ಬತ್ತಿ ಸೇರಿದಂತೆ ಒಂದು ಕುಟುಂಬಕ್ಕೆ ಅಗತ್ಯವಿರುವ ಎಲ್ಲ ರೀತಿಯ ವಸ್ತುಗಳನ್ನು ನೀಡುತ್ತೇವೆ. ವಿತರಿಸಲೂ ಸಹ ನಮ್ಮದೇ ಸ್ವಯಂ ಸೇವಕರಿದ್ದು, ಅವರ ಮೂಲಕವೇ ಎಲ್ಲ ವಸ್ತುಗಳು ಹಂಚಲಾಗುತ್ತದೆ. ಹೀಗಾಗಿ ಯಾವುದೇ ರೀತಿಯ ದುರ್ಬಳಕೆಯಾಗುವ ಸಂದರ್ಭ ಬರುವುದಿಲ್ಲ ಎಂದು ವಿವರಿಸಿದರು.

ವಸ್ತುಗಳನ್ನು ಸಾಗಿಸಲು ಟ್ರಕ್ ಸಮಸ್ಯೆ ಉಂಟಾಗಿತ್ತು. ಆಗ ಜಪಾನಂದ ಸ್ವಾಮೀಜಿಯವರೊಂದಿಗೆ ಮಾತನಾಡಿಕೊಂಡು ಟ್ರಕ್ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಆ ಟ್ರಕ್‍ಗಳ ಮೂಲಕ ಸಂತ್ರಸ್ತರಿಗೆ ವಸ್ತುಗಳನ್ನು ತಲುಪಿಸಲಾಗುತ್ತಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *