CinemaLatestMain PostNational

RRR ಆಡಿಯೋ ರೈಟ್ಸ್ ಲಹರಿ ಪಾಲು

ಬೆಂಗಳೂರು: ಬಾಹುಬಲಿ ಖ್ಯಾತಿಯ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರ ಬಹುನಿರೀಕ್ಷಿತ ಆರ್‌ಆರ್‌ಆರ್‌ ಚಿತ್ರದ ಆಡಿಯೋ ರೈಟ್ಸ್ ಸೇಲ್ ಆಗಿದ್ದು, ಲಹರಿ ಹಾಗೂ ಟಿ ಸಿರೀಸ್ ಸಂಸ್ಥೆ ಪಾಲಾಗಿದೆ.

ಆರ್‌ಆರ್‌ಆರ್‌ ಚಿತ್ರದ ಆಡಿಯೋ ಹಕ್ಕನ್ನು ಭಾರೀ ಮೊತ್ತಕ್ಕೆ ಖರೀದಿಸಲಾಗಿದೆ. ಒಟ್ಟು 5 ಭಾಷೆಗಳಲ್ಲಿ ಆರ್‌ಆರ್‌ಆರ್‌ ತೆರೆಕಾಣುತ್ತಿದ್ದು, ಐದೂ ಭಾಷೆಯ ಆಡಿಯೋ ಹಕ್ಕನ್ನು ಲಹರಿ ಹಾಗೂ ಟಿ ಸಿರೀಸ್ ತಮ್ಮ ಜೋಳಿಗೆಗೆ ಹಾಕಿಕೊಂಡಿವೆ. ಬಾಹುಬಲಿ ಚಿತ್ರದ ಆಡಿಯೋ ಹಕ್ಕನ್ನೂ ಇದೇ ಸಂಸ್ಥೆ ದಾಖಲೆ ಮೊತ್ತಕ್ಕೆ ಖರೀದಿಸಿತ್ತು. ಇದೀಗ ಆರ್‌ಆರ್‌ಆರ್‌ ಬಾಹುಬಲಿ ದಾಖಲೆಯನ್ನೂ ಮುರಿದಿದೆ ಎನ್ನಲಾಗುತ್ತಿದೆ.

ಈ ಕುರಿತು ಲಹರಿ ಸಂಸ್ಥೆಯ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ಸಣ್ಣ ಪ್ರೋಮೋವನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಆದಷ್ಟು ಬೇಗ ಆರ್‌ಆರ್‌ಆರ್‌ ಮ್ಯೂಸಿಕ್ ಲಭ್ಯವಾಗಲಿದೆ ಎಂದು ಸಂಸ್ಥೆ ತಿಳಿಸಿದೆ. ಇಂಡಿಯಾಸ್ ಬಿಗ್ಗೆಸ್ಟ್ ಮ್ಯೂಸಿಕ್ ಲೇಬಲ್ಸ್, ಇಂಡಿಯಾಸ್ ಬಿಗ್ಗೆಸ್ಟ್ ಕೊಲಾಬರೇಷನ್, ಮ್ಯೂಸಿಕಲ್ ಎಕ್ಸ್ಟ್ರಾವೆಗಾಂಝಾ ಕಮಿಂಗ್ ಟು ಯೂ ಸೂನ್ ಎಂಬುದಾಗಿ ಚಿಕ್ಕ ಪ್ರೋಮೋದಲ್ಲಿ ಹೇಳಲಾಗಿದೆ.

ಈಗಾಗಲೇ ಆರ್‌ಆರ್‌ಆರ್‌ ಸಿನಿಮಾದ ಚಿತ್ರೀಕರಣ ಕೊನೇಯ ಹಂತ ತಲುಪಿದ್ದು, ಇದೇ ಆಗಸ್ಟ್ 1 ರಂದು ವಿಶೇಷ ಹಾಡನ್ನು ಬಿಡುಗಡೆಗೊಳಿಸಲು ಚಿತ್ರ ತಂಡ ಸಿದ್ಧತೆ ನಡೆಸಿದೆ. ಇದರ ಮಧ್ಯೆಯೇ ಜುಲೈ 15ರಂದು ಮೇಕಿಂಗ್ ವೀಡಿಯೋ ಬಿಡುಗಡೆ ಮಾಡಲು ಸಹ ತಯಾರಿ ನಡೆದಿದೆ. ಈ ಮೇಕಿಂಗ್ ವೀಡಿಯೋ ನಿಮ್ಮನ್ನು ಆರ್‍ಆರ್‍ಆರ್ ಪ್ರಪಂಚಕ್ಕೆ ಕೊಂಡೊಯ್ಯಲಿದ್ದು, ಈ ಮೂಲಕ ಚಿತ್ರವನ್ನು ಹೇಗೆ ನಿರ್ಮಿಸಲಾಗಿದೆ ಎಂಬುದರ ಝಲಕ್ ತೋರಿಸಲಾಗುತ್ತಿದೆ.

ಹೀಗೆ ಆರ್‌ಆರ್‌ಆರ್‌ ಸಿನಿಮಾ ಕುರಿತು ಚಿತ್ರ ತಂಡ ಬ್ಯಾಕ್ ಟು ಬ್ಯಾಕ್ ಅಪ್‍ಡೇಟ್ ನೀಡುತ್ತಿದೆ. ಅಂದಹಾಗೆ ಬಹುನಿರೀಕ್ಷಿತ ಆರ್‍ಆರ್‍ಆರ್ ಸಿನಿಮಾ ಅಕ್ಟೋಬರ್ 13ರಂದು ವಿಶ್ವಾದ್ಯಂತ ತೆರೆಗಪ್ಪಳಿಸುವುದಾಗಿ ಚಿತ್ರತಂಡ ಮಾಹಿತಿ ನೀಡಿದೆ. ಹೀಗಾಗಿ ಅಭಿಮಾನಿಗಳು ಆರ್‍ಆರ್‍ಆರ್ ಅಪ್‍ಡೇಟ್ಸ್‍ಗಾಗಿ ಕಾತರದಿಂದ ಕಾಯುತ್ತಿದ್ದಾರೆ.

Leave a Reply

Your email address will not be published.

Back to top button