Connect with us

ಮ್ಯಾಕ್ಸ್‌ವೆಲ್, ಎಬಿಡಿ ಸ್ಫೋಟಕ ಆಟ – ಆರ್‌ಸಿಬಿಗೆ 38 ರನ್‌ಗಳ ಭರ್ಜರಿ ಜಯ

ಮ್ಯಾಕ್ಸ್‌ವೆಲ್, ಎಬಿಡಿ ಸ್ಫೋಟಕ ಆಟ – ಆರ್‌ಸಿಬಿಗೆ 38 ರನ್‌ಗಳ ಭರ್ಜರಿ ಜಯ

ಚೆನ್ನೈ: ಎಬಿಡಿ ವಿಲಿಯರ್ಸ್ ಮತ್ತು ಗ್ಲೇನ್ ಮ್ಯಾಕ್ಸ್‌ವೆಲ್ ಅವರ ಸ್ಫೋಟಕ ಅರ್ಧಶತಕದಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 38 ರನ್‌ಗಳಿಂದ ಜಯಗಳಿಸಿದೆ.

ಗೆಲ್ಲಲು 205 ರನ್‌ಗಳ ಕಠಿಣ ಸವಾಲನ್ನು ಪಡೆದ ಕೋಲ್ಕತ್ತಾ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 166 ರನ್ ಗಳಿಸಿತು. ಕೋಲ್ಕತ್ತಾ ಪರವಾಗಿ ಆಂಡ್ರೆ ರಸೆಲ್ ಒಬ್ಬರನ್ನು ಬಿಟ್ಟರೆ ಉಳಿದ ಬ್ಯಾಟ್ಸ್ಮನ್‌ಗಳು ಸ್ಫೋಟಕವಾಗಿ ಆಡದ ಕಾರಣ ಇಂದಿನ ಪಂದ್ಯವನ್ನು ಸೋತಿದೆ.ಈ ಮೂಲಕ ಸತತ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಬೆಂಗಳೂರು ಮುಂದುವರಿದಿದೆ. ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆರ್ಸಿಬಿ ಮೊದಲ 3 ಪಂದ್ಯಗಳನ್ನು ಗೆದ್ದುಕೊಂಡಿದೆ.

ರಸೆಲ್ 31 ರನ್(20 ಎಸೆತ, 3 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರು. ಕೈಲ್ ಜೆಮಿಸನ್ 3 ವಿಕೆಟ್ ಕಿತ್ತರೆ, ಹರ್ಷಲ್ ಪಟೇಲ್ ಮತ್ತು ಯಜುವೇಂದ್ರ ಚಹಲ್ ತಲಾ 2 ವಿಕೆಟ್ ಪಡೆದರು. ವಾಷಿಂಗ್ಟನ್ ಸುಂದರ್ 1 ವಿಕೆಟ್ ಕಿತ್ತರು. ಕೋಲ್ಕತ್ತಾ ಪರವಾಗಿ ನಿತೀಶ್ ರಾಣಾ 18 ರನ್, ಶುಭಮನ್ ಗಿಲ್ 21 ರನ್, ರಾಹುಲ್ ತ್ರಿಪಾಠಿ 25 ರನ್, ಇಯಾನ್ ಮೊರ್ಗನ್ 29 ರನ್, ಶಕಿಬ್ ಉಲ್ ಹಸನ್ 26 ರನ್ ಹೊಡೆದರು.

ಆರಂಭದಲ್ಲಿ ಕುಸಿತ:
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು 9 ರನ್‌ಗಳಿಸುವಷ್ಟರಲ್ಲಿ ವಿರಾಟ್ ಕೊಹ್ಲಿ ಮತ್ತು ರಜತ್ ಪಟೀದಾರ್ ಅವರ ವಿಕೆಟ್ ಕಳೆದುಕೊಂಡಿತ್ತು. ಮೂರನೇ ವಿಕೆಟಿಗೆ ದೇವದತ್ ಪಡಿಕ್ಕಲ್ ಮತ್ತು ಗ್ಲೇನ್ ಮ್ಯಾಕ್ಸ್‌ವೆಲ್ 58 ಎಸೆತಗಳಲ್ಲಿ 86 ರನ್ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು.

4ನೇ ವಿಕೆಟಿಗೆ ಮ್ಯಾಕ್ಸ್ವೆಲ್ ಮತ್ತು ಎಬಿ ಡಿವಿಲಿಯರ್ಸ್ 37 ಎಸೆತಗಳಿಗೆ 53 ರನ್ ಹೊಡೆದರೆ ಕೊನೆಯಲ್ಲಿ ಮುರಿಯದ 5ನೇ ವಿಕೆಟಿಗೆ ಎಬಿಡಿ ಮತ್ತು ಜೆಮಿಸನ್ 20 ಎಸೆತಗಳಲ್ಲಿ 56 ರನ್ ಸಿಡಿಸಿ ತಂಡದ ಮೊತ್ತವನ್ನು 200 ರನ್‌ಗಳ ಗಡಿ ದಾಟಿಸಿದರು.

ದೇವದತ್ತ ಪಡಿಕ್ಕಲ್ 25 ರನ್(28 ಎಸೆತ, 2 ಬೌಂಡರಿ), ಗ್ಲೇನ್ ಮ್ಯಾಕ್ಸ್‌ವೆಲ್ 78 ರನ್(49 ಎಸೆತ, 9 ಬೌಂಡರಿ, 3 ಸಿಕ್ಸರ್) ಎಬಿಡಿ ವಿಲಿಯರ್ಸ್ 76 ರನ್(34 ಎಸೆತ, 9 ಬೌಂಡರಿ, 3 ಸಿಕ್ಸರ್) ಜೇಮಿಸನ್ 11 ರನ್( 4 ಎಸೆತ, 1 ಬೌಂಡರಿ, 1 ಸಿಕ್ಸರ್) ಹೊಡೆದರು.

ರಸೆಲ್ ಎಸೆದ 18ನೇ ಓವರಿನಲ್ಲಿ 17 ರನ್, ಹರ್ಭಜನ್ ಎಸೆದ 19ನೇ ಓವರಿನಲ್ಲಿ 18 ರನ್, ರಸೆಲ್ ಎಸೆದ 20ನೇ ಓವರಿನಲ್ಲಿ 21 ರನ್ ಬಂದ ಕಾರಣ ಆರ್‌ಸಿಬಿ ಉತ್ತಮ ಮೊತ್ತ ಗಳಿಸಿತ್ತು.

ರನ್ ಏರಿದ್ದು ಹೇಗೆ?
50 ರನ್ – 41 ಎಸೆತ
100 ರನ್ – 75 ಎಸೆತ
150 ರನ್ – 104 ಎಸೆತ
200 ರನ್ – 118 ಎಸೆತ
204 ರನ್- 120 ಎಸೆತ

Advertisement
Advertisement