Connect with us

Cricket

ರಾಹುಲ್ ಶತಕ, ರವಿ ಬಿಷ್ಣೋಯ್ ಬೌಲಿಂಗ್ ಕಮಾಲ್ – ಆರ್‌ಸಿಬಿಗೆ ಹೀನಾಯ ಸೋಲು

Published

on

– ಪಂಜಾಬ್ ಬೌಲಿಂಗ್ ಎದುರು ಮಂಕಾದ ಕೊಹ್ಲಿ ಪಡೆ

ದುಬೈ: ನಾಯಕ ಕೆ.ಎಲ್ ರಾಹುಲ್ ಅವರು ಭರ್ಜರಿ ಶತಕ ಮತ್ತು ರವಿ ಬಿಷ್ಣೋಯ್ ಬೌಲಿಂಗ್ ಕಮಾಲ್‍ನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐಪಿಎಲ್-2020ಯಲ್ಲಿ ತನ್ನ ಮೊದಲ ಗೆಲುವನ್ನು ದಾಖಲಿಸಿದೆ.

ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಪಂಜಾಬ್, ರಾಹುಲ್ ಅವರು ಸೂಪರ್ ಶತಕದ ನೆರವಿನಿಂದ ನಿಗದಿತ 20 ಓವರಿನಲ್ಲಿ ಭರ್ಜರಿ 206 ರನ್ ಸೇರಿಸಿತು. ಈ ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಕೊಹ್ಲಿ ಪಡೆ ಆರಂಭದಲ್ಲೇ ಮುಗ್ಗರಿಸಿತು. ಹೀಗಾಗಿ 16.5 ಓವರ್ ಆಟವಾಡಿದ ಆರ್‍ಸಿಬಿ 109 ರನ್‍ಗಳಿಸಿ ಆಲೌಟ್ ಆಯ್ತು. ಈ ಮೂಲಕ ಪಂಜಾಬ್ 98 ರನ್‍ಗಳ ದೊಡ್ಡ ಅಂತರದಲ್ಲಿ ಗೆಲವು ಸಾಧಿಸಿತು.

ಪಂಜಾಬ್ ಪರವಾಗಿ ಉತ್ತಮವಾಗಿ ಬೌಲ್ ಮಾಡಿದ ರವಿ ಬಿಷ್ಣೋಯ್ ನಾಲ್ಕು ಓವರ್ ಬೌಲ್ ಮಾಡಿ ಮೂರು ವಿಕೆಟ್ ಕಿತ್ತು 21 ರನ್ ನೀಡಿದರು. ಶೆಲ್ಡನ್ ಕಾಟ್ರೆಲ್ ಅವರು ಮೂರು ಓವರ್ ಬೌಲ್ ಮಾಡಿ ಎರಡು ವಿಕೆಟ್ ಕಿತ್ತು, ಕೇವಲ 17 ರನ್ ನೀಡಿದರು. ಇವರಿಗೆ ಉತ್ತಮ ಸಾಥ್ ಕೊಟ್ಟ ಮೊಹಮ್ಮದ್ ಶಮಿ ಮೂರು ಓವರ್ ಬೌಲ್ ಮಾಡಿ 14 ರನ್ ನೀಡಿ ಒಂದು ವಿಕೆಟ್ ಪಡೆದರು.

ಬೆಂಗಳೂರು ತಂಡಕ್ಕೆ ಆರಂಭಿಕ ಆಘಾತ ನೀಡಿದ ಶೆಲ್ಡನ್ ಕಾಟ್ರೆಲ್, ಮೊದಲ ಓವರಿನಲ್ಲೇ ಒಂದು ರನ್ ಗಳಿಸಿದ್ದ ದೇವದತ್ ಪಡಿಕ್ಕಲ್ ರವಿ ಬಿಷ್ಣೋಯ್ ಅವರಿಗೆ ಕ್ಯಾಚ್ ಇತ್ತು ಹೊರ ನಡೆದರು. ನಂತರ ಬಂದ ಜೋಶ್ ಫಿಲಿಪ್ ಅವರು ಸೊನ್ನೆ ಸುತ್ತಿ ಮೊಹಮ್ಮದ್ ಶಮಿ ಅವರ ಬೌಲಿಂಗ್‍ಗೆ ಬಲಿಯಾದರು. ನಂತರ ಮೂರನೇ ಓವರಿನಲ್ಲಿ ನಾಯಕ ವಿರಾಟ್ ಕೊಹ್ಲಿಯವರು ದೊಡ್ಡ ಹೊಡೆತಕ್ಕೆ ಕೈ ಹಾಕಿ ಕಾಟ್ರೆಲ್ ಅವರಿಗೆ ವಿಕೆಟ್ ಒಪ್ಪಿಸಿದರು.

ಪಂಜಾಬ್ ಬೌಲರ್ ಗಳು ಆಕ್ರಮಣಕಾರಿಯಾಗಿ ಬೌಲ್ ಮಾಡಿದರು. ನಂತರ ಹೊಂದಾದ ಎಬಿ ಡಿವಿಲಿಯರ್ಸ್ ಮತ್ತು ಆರನ್ ಫಿಂಚ್ ಉತ್ತಮವಾಗಿ ಬ್ಯಾಟ್ ಬೀಸಿದರು. ಪರಿಣಾಮ ಬೆಂಗಳೂರು ತಂಡ ಪವರ್ ಪ್ಲೇ ಮುಕ್ತಾಯದ ವೇಳೆಗೆ ಮೂರು ವಿಕೆಟ್ ಕಳೆದುಕೊಂಡು 40 ಪೇರಿಸಿತ್ತು. ನಂತರ ಏಳನೇ ಓವರಿನಲ್ಲಿ ರವಿ ಬಿಷ್ಣೋಯ್ ಅವರಿಗೆ ಕ್ಲೀನ್ ಬೌಲ್ಡ್ ಆದ ಆರನ್ ಫಿಂಚ್ 20 ರನ್ ಗಳಿಸಿ ಪೆವಿಲಿಯನ್ ಸೇರಿದರು. ನಂತರ ಮುರುಗನ್ ಅಶ್ವಿನ್ ಅವರ ಬೌಲಿಂಗ್‍ನಲ್ಲಿ ಸರ್ಫರಾಜ್ ಖಾನ್ ಅವರಿಗೆ ಕ್ಯಾಚ್ ಇತ್ತು 28 ರನ್ ಗಳಿಸಿದ್ದ ಡಿವಿಲಿಯರ್ಸ್ ಔಟ್ ಆದರು.

ನಂತರ ಕೆಲ ಕಾಲ ವಾಷಿಂಗ್ಟನ್ ಸುಂದರ್ ಮತ್ತು ಶಿವಂ ದುಬೆ ಕ್ರಿಸಿಗೆ ಕಚ್ಚಿಕೊಂಡಿದ್ದರು. ಆದರೆ 12ನೇ ಓವರಿನ ಕೊನೆ ಬಾಲಿನಲ್ಲಿ ಮ್ಯಾಕ್ಸ್ ವೆಲ್ ಅವರಿಗೆ ಶಿವಂ ದುಬೆ ಕ್ಲೀನ್ ಬೌಲ್ಡ್ ಆದರು. ನಂತರ ಬಂದ ಉಮೇಶ್ ಯಾದವ್ ಅವರು ಸೊನ್ನೆ ಸುತ್ತಿ ವಾಪಸ್ ಹೋದರು. 30 ರನ್ ಗಳಿಸಿ ಆಡುತ್ತಿದ್ದ ವಾಷಿಂಗ್ಟನ್ ಸುಂದರ್ ಅವರು ರವಿ ಬಿಷ್ಣೋಯ್ ಬೌಲಿಂಗ್‍ನಲ್ಲಿ ಕ್ಯಾಚ್ ಇತ್ತು ಪೆವಿಲಿಯನ್ ಸೇರಿದರು. ನಂತರ ಸೈನಿ ಮತ್ತು ಚಹಲ್ ಔಟ್ ಆಗುವ ಮೂಲಕ ಬೆಂಗಳೂರು ತಂಡ ಆಲ್‍ಔಟ್ ಆಯ್ತು.

Click to comment

Leave a Reply

Your email address will not be published. Required fields are marked *