Connect with us

Bengaluru City

ರೋಷನ್ ಬೇಗ್ ಸ್ಫೋಟಕ ಹೇಳಿಕೆಯ ಹಿಂದಿದ್ಯಾ ಬಿಜೆಪಿ?

Published

on

ಬೆಂಗಳೂರು: ಇಂದು ಮಾಜಿ ಸಚಿವ ರೋಷನ್ ಬೇಗ್ ಹೇಳಿಕೆ ಕೈ ಅಂಗಳದಲ್ಲಿ ಸಂಚಲನವನ್ನೇ ಹುಟ್ಟು ಹಾಕಿದೆ. ಬಿಜೆಪಿಯಿಂದ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ರಾಜ್ಯ ಮತ್ತು ಕೇಂದ್ರ ನಾಯಕರ ಬಗ್ಗೆ ರೋಷನ್ ಬೇಗ್ ಮಾತನಾಡಿದ್ದಾರೆ ಎನ್ನಲಾಗಿದೆ.

ಈ ಬಾರಿ ಸಚಿವ ಸ್ಥಾನ ಹಾಗೂ ಪುತ್ರನಿಗೆ ಎಂಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ರೋಷನ್ ಬೇಗ್ ಅಸಮಾಧಾನಗೊಂಡಿದ್ದರು. ಈ ಅಸಮಾಧಾನವನ್ನೇ ಬಂಡವಾಳವಾಗಿಸಿಕೊಂಡ ಬಿಜೆಪಿ ರೋಷನ್ ಬೇಗ್ ಅವರನ್ನ ಸೆಳೆಯುವ ಪ್ರಯತ್ನಕ್ಕೆ ಮುಂದಾಗಿತ್ತು. ಬಿಜೆಪಿ ಜೊತೆಗಿನ ಮಾತುಕತೆ ಅಂತ್ಯವಾಗಿದ್ದು, ಕಮಲ ಹಿಡಿಯಲು ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ರೋಷನ್ ಬೇಗ್ ಕಾಂಗ್ರೆಸ್ ವಿರುದ್ಧ ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬಿಜೆಪಿಯ ಪ್ಲಾನ್ ಏನು?:
ರಾಜ್ಯ ಬಿಜೆಪಿ ಅಲ್ಪಸಂಖ್ಯಾತರ ಓಲೈಕೆಗಾಗಿ ದೊಡ್ಡ ಪ್ರಭಾವಿ ನಾಯಕರನ್ನು ಹೊಂದಿಲ್ಲ. ಹೀಗಾಗಿ ಮುಸ್ಲಿಂ ಪ್ರಾಬಲ್ಯವುಳ್ಳ ಕ್ಷೇತ್ರದಲ್ಲಿ ಬಿಜೆಪಿಗೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಭೀತಿ ಕಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ರೋಷನ್ ಬೇಗ್‍ರತ್ತ ಬಿಜೆಪಿ ಮುಖ ಮಾಡಿತ್ತು. ಸಚಿವ ಸ್ಥಾನ ಮತ್ತು ಎಂಪಿ ಟಿಕೆಟ್ ಸಿಗದೇ ಅಸಮಾಧಾನಗೊಂಡಿದ್ದ ರೋಷನ್ ಬೇಗ್ ರನ್ನು ಬಿಜೆಪಿ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್-ಜೆಡಿಎಸ್ ಜೊತೆ ದೋಸ್ತಿ ಮಾಡಿಕೊಂಡು ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿಕೊಂಡಿದ್ದರೂ ರೋಷನ್ ಬೇಗ್ ಅವರನ್ನ ಸೈಡ್ ಲೈನ್ ಮಾಡಿ ಸಚಿವ ಸ್ಥಾನ ನೀಡಿರಲಿಲ್ಲ. ಬದಲಾಗಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್‍ನಿಂದ ಕಾಂಗ್ರೆಸ್ ಸೇರಿದ್ದ ಜಮೀರ್ ಅಹ್ಮದ್ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಹೀಗೆ ಮುಂದುವರಿದರೆ ಪಕ್ಷದಲ್ಲಿ ತಮ್ಮ ಅಸ್ತಿತ್ವ ಮತ್ತು ಪುತ್ರನ ರಾಜಕೀಯ ಭವಿಷ್ಯದ ಬಗ್ಗೆ ಬೇಗ್ ಚಿಂತೆಗೀಡಾಗಿದ್ದರು. ಈ ಸಮಯದಲ್ಲಿ ಬಿಜೆಪಿಯ ನೀಡಿದ ಆಹ್ವಾನವನ್ನು ರೋಷನ್ ಬೇಗ್ ಸ್ವೀಕರಿಸಿದ್ದಾರೆ ಎನ್ನಲಾಗುತ್ತಿದೆ.

ರೋಷನ್ ಬೇಗ್ ಹೇಳಿಕೆ ಬೆನ್ನಲ್ಲೆ ಕಾಂಗ್ರೆಸ್ ಶೋಕಾಸ್ ನೋಟಿಸ್ ನೀಡಿದೆ. ಇತ್ತ ಕೈ ನಾಯಕರು ರೋಷನ್ ಬೇಗ್ ಬೇಕಾದರೆ ಬಿಜೆಪಿ ಸೇರಬಹುದು ಎಂದು ಸಲಹೆಯನ್ನು ನೀಡುವ ಮೂಲಕ ಕಿಡಿಕಾರಿದ್ದಾರೆ.

ಬೆಂಗಳೂರು ಕೇಂದ್ರದ ಕೈ ಅಭ್ಯರ್ಥಿ ರಿಜ್ವಾನ್ ಅರ್ಷದ್, ರೋಷನ್ ಬೇಗ್ ಅವರೇ ಮೊಸಳೆ ಕಣ್ಣಿರು ಹಾಕುವುದನ್ನು ನಿಲ್ಲಿಸಿ. ಅಲ್ಪಸಂಖ್ಯಾತರ ಪರವಾಗಿ ಡೋಂಗಿ ಮಾತಾಡಬೇಡಿ. ನಿಮಗೆ ತಾಕತ್ತು ಇದ್ದರೆ ರಾಜೀನಾಮೆ ಕೊಟ್ಟು ಶಿವಾಜಿನಗರದಲ್ಲಿ ಚುನಾವಣೆ ಎದುರಿಸಿ. ನಿಮಗೆ ಕಾಂಗ್ರೆಸ್ ಸರಿಯಿಲ್ಲ ಅಂತ ಹೇಳುವುದಾದರೆ ಬಿಜೆಪಿಯಿಂದ ಸ್ಪರ್ಧೆ ಮಾಡಿ ಎಂದು ರಿಜ್ವಾನ್ ಸವಾಲು ಎಸೆದಿದ್ದು ನೋಡಿದರೆ ಬಿಜೆಪಿಯತ್ತ ರೋಷನ್ ಬೇಗ್ ಹೋಗಲಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.

ರೋಷನ್ ಬೇಗ್ ಹೇಳಿಕೆಗೆ ಬಿಜೆಪಿ ಮುಖಂಡ ಆರ್. ಅಶೋಕ್ ಪ್ರತಿಕ್ರಿಯಿಸಿ, ಮೇ 23ಕ್ಕೆ ಲಾವಾರಸ ಉಕ್ಕಿ ಯಾರ ಮೇಲೆ ಹರಿಯುತ್ತದೋ ಗೊತ್ತಿಲ್ಲ. ಭೂಕಂಪ ಆಗಿ ಕಾಂಗ್ರೆಸ್ ಮನೆ ಬಿದ್ದು ಹೋಗಲಿದೆ. ಕಾಂಗ್ರೆಸ್ಸಿನವರೇ ಈ ಫಿಲ್ಮ್ ಪ್ರೊಡ್ಯೂಸರ್ ಗಳಾಗಿದ್ದು, 23 ರಂದು ಈ ಸರ್ಕಾರ ಸತ್ತು ಹೋಗುತ್ತದೆ ಎಂದು ಡಾಕ್ಟರ್ ಘೋಷಣೆ ಮಾಡಲಿದ್ದಾರೆ. ಕೇವಲ ರೋಷನ್ ಬೇಗ್ ಒಬ್ಬರ ಪ್ರಶ್ನೆ ಅಲ್ಲ, ಅನೇಕ ಜನ ದಾರಿ ಹುಡುಕುತ್ತಿದ್ದಾರೆ. ದಾರಿ ಯಾವುದಯ್ಯಾ ಎಂದು ಹುಡುಕುತ್ತಿರುವವರಿಗೆ ಬಿಜೆಪಿ ದಾರಿ ತೋರಿಸಲಿದೆ ಎಂದು ಹೇಳಿಕೆ ನೀಡಿದ್ದು ಹಲವು ಅನುಮಾನಗಳನ್ನು ಹುಟ್ಟಿ ಹಾಕಿದೆ.

https://www.youtube.com/watch?v=7ISeRQjsDZk