Cricket
ಫಿಟ್ನೆಸ್ ಪರೀಕ್ಷೆಯಲ್ಲಿ ಹಿಟ್ಮ್ಯಾನ್ ರೋಹಿತ್ ಶರ್ಮಾ ಪಾಸ್

ನವದೆಹಲಿ: ಟೀಂ ಇಂಡಿಯಾದ ಹಿಟ್ ಮ್ಯಾನ್, ಆರಂಭಿಕ ಆಟಗಾರ ರೋಹಿತ್ ಶರ್ಮಾ ಫಿಟ್ನೆಸ್ ಪರೀಕ್ಷೆ ಪೂರ್ಣಗೊಳಿಸಿದ್ದು, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾಗಿಯಾಗುವ ಸಾಧ್ಯತೆಗಳಿವೆ. ಶುಕ್ರವಾರ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ರೋಹಿತ್ ಶರ್ಮಾ ಫಿಟ್ ಆಗಿದ್ದಾರೆ ಎಂದು ಘೋಷಿಸಿದ್ದು, ಡಿಸೆಂಬರ್ 14ರಂದು ಆಸ್ಟ್ರೇಲಿಯಾದತ್ತ ಪ್ರಯಾಣ ಬೆಳೆಸಲಿದ್ದಾರೆ ಎಂದು ಕೆಲ ರಾಷ್ಟ್ರೀಯ ಮಾಧ್ಯಮಗಳು ವರದಿ ಬಿತ್ತರಿಸಿವೆ.
ಐಪಿಎಲ್ ವೇಳೆ ರೋಹಿತ್ ಶರ್ಮಾ ಮಂಡಿರಜ್ಜು ಗಾಯದ ಸಮಸ್ಯೆಗೆ ಒಳಗಾಗಿದ್ದರು. ಈ ಹಿನ್ನೆಲೆ ಐಪಿಎಲ್ ನ ನಾಲ್ಕು ಪಂದ್ಯಗಳಿಗೆ ರೋಹಿತ್ ಶರ್ಮಾ ಅಲಭ್ಯರಾಗಿದ್ದರು. ಗಾಯದ ಸಮಸ್ಯೆ ಹಿನ್ನೆಲೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯಿಂದ ರೋಹಿತ್ ಶರ್ಮಾರ ಹೆಸರನ್ನ ಕೈಬಿಟ್ಟಿತ್ತು. ಇದೀಗ ಟೆಸ್ಟ್ ತಂಡವನ್ನ ರೋಹಿತ್ ಶರ್ಮಾ ಸೇರ್ಪಡೆಯಾಗಲಿದ್ದಾರೆ.
ಐಪಿಎಲ್ ಫೈನಲ್ ಬಳಿಕ ರೋಹಿತ್ ಶರ್ಮಾ ಯುಎಇ ನಿಂದ ನೇರವಾಗಿ ಭಾರತಕ್ಕೆ ಹಿಂದಿರುಗಿದ್ದರು. ಫಿಟ್ನೆಸ್ ಪರೀಕ್ಷೆಗಾಗಿ ನವೆಂಬರ್ 19ರಂದು ಬೆಂಗಳೂರಿನ ಎನ್ಸಿಎ ತಲುಪಿದ್ದರು.
ಡಿಸೆಂಬರ್ 14ರಂದು ಆಸ್ಟ್ರೇಲಿಯಾಕ್ಕೆ ರೋಹಿತ್ ಶರ್ಮಾ ತೆರಳಿದರೆ 14 ದಿನ ಕಡ್ಡಾಯವಾಗಿ ಕ್ವಾರಂಟೈನ್ ನಲ್ಲಿರಬೇಕಾಗುತ್ತದೆ. ಡಿಸೆಂಬರ್ 26ರವರೆಗೂ ತರಬೇತಿಯಿಂದ ದೂರ ಉಳಿಯಬೇಕಾಗುತ್ತದೆ. ಆರಂಭದ ಎರಡು ಟೆಸ್ಟ್ (ಜನವರಿ 7 ರಿಂದ 11)ಗಳಿಗೆ ರೋಹಿತ್ ಶರ್ಮಾ ಅಲಭ್ಯರಾಗುವ ಸಾಧ್ಯತೆಗಳಿವೆ. ಜನವರಿ 15 ರಿಂದ 19ರವರೆಗೆ ನಡೆಯುವ ಪಂದ್ಯಕ್ಕೆ ಎಂಟ್ರಿ ಕೊಡಬಹುದು ಎನ್ನಲಾಗಿದೆ.
