Connect with us

Cinema

ಮಲ್ಪೆಯ ಬ್ಲ್ಯಾಕ್ ರಾಕ್ ನಡುವೆ ರಾಕಿಂಗ್ ಸ್ಟಾರ್ ಯಶ್ ಖದರ್

Published

on

ಉಡುಪಿ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-1 ಚಿತ್ರ 2018ರಲ್ಲಿ ವಿಶ್ವದಾದ್ಯಂತ ಸೌಂಡ್ ಮಾಡಿತ್ತು. ಇದೀಗ ಕೆಜಿಎಫ್-2 ಮತ್ತೆ ಧೂಳೆಬ್ಬಿಸಲು ತಯಾರಾಗುತ್ತಿದೆ. ಲಾಕ್‍ಡೌನ್ ಫ್ರೀ ಆದ ನಂತರ ಚಿತ್ರದ ಚಿತ್ರೀಕರಣ ಜೋರಾಗಿ ನಡೆಯುತ್ತಿದೆ. ಇದೀಗ ಚಿತ್ರದ ಜಬರ್ದಸ್ತ್ ಸೀಕ್ವೆನ್ಸ್ ಉಡುಪಿಯ ಮಲ್ಪೆಯಲ್ಲಿ ನಡೆಯುತ್ತಿದೆ.

ಕಪ್ಪು ಬಣ್ಣದ 8-10 ಕಾರುಗಳು, ಅರಬ್ಬಿ ಸಮುದ್ರದ ತಟದಲ್ಲಿ ಐದಾರು ಬೋಟುಗಳು, ಬ್ರೌನ್ ಅಂಡ್ ವೈಟ್ ಡ್ರೆಸ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಮಿಂಚುತ್ತಿದ್ದಾರೆ. ಕೊರೊನ ಲಾಕ್‍ಡೌನ್ ಮುಗಿಸಿದ ನಂತರ ಕೆಜಿಎಫ್ ಚಿತ್ರತಂಡ ಚಿತ್ರೀಕರಣ ಜೋರಾಗಿ ನಡೆಸುತ್ತಿದೆ. ಪ್ರಶಾಂತ್ ನೀಲ್ ಬೆಟಾಲಿಯನ್ ಉಡುಪಿ ಜಿಲ್ಲೆ ಮಲ್ಪೆ ಸಮೀಪದ ಪಡುಕೆರೆ ಕಡಲಕಿನಾರೆಯಲ್ಲಿ ಶೂಟಿಂಗ್ ನಡೆಯುತ್ತಿದೆ. ಚಿತ್ರದ ನಾಯಕ ಯಶ್ ಮತ್ತು ನಾಯಕಿ ಶ್ರೀನಿಧಿ ಶೆಟ್ಟಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

ಎಂಟು ಹತ್ತು ಕಾರುಗಳು ಗಿರ್ ಗಿರ್ ಅಂತ ರೌಂಡ್ ಹೊಡೀತಿದ್ರೆ ನಡುವೆ ಯಶ್ ಬಿಳಿ ಅಂಗಿ ಬ್ರೌನ್ ಪ್ಯಾಂಟ್ ನಲ್ಲಿ ಮಿರ ಮಿರ ಮಿಂಚುತ್ತಿದ್ದರು. ಪಕ್ಕದಲ್ಲಿ ಶ್ರೀನಿಧಿ ಗೋಲ್ಡನ್ ಮತ್ತು ಬ್ಲ್ಯಾಕ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಸೀಕ್ವೆನ್ಸ್ ಒಂದನ್ನು ಪಡುಕೆರೆ ಕಡಲಕಿನಾರೆಯಲ್ಲಿ ಚಿತ್ರೀಕರಿಸಲಾಯಿತು. 2 ಗ್ಯಾಂಗ್ ಸ್ಟರ್ ಗುಂಪುಗಳು ಅರಬ್ಬಿ ಸಮುದ್ರದಲ್ಲಿ ಮುಖಾಮುಖಿಯಾಗುವ ದೃಶ್ಯವನ್ನು ಕೂಡ ಈ ಸಂದರ್ಭದಲ್ಲಿ ಸೆರೆಹಿಡಿಯಲಾಯಿತು. ಅರಬ್ಬಿ ಸಮುದ್ರದಲ್ಲಿ ಒಟ್ಟು ಮೂರು ಮೀನುಗಾರಿಕಾ ಬೋಟ್ ಗಳನ್ನು ಕೆಜಿಎಫ್-2 ಚಿತ್ರಕ್ಕೆ ಬಳಸಲಾಗಿದೆ.

ರಾಕಿ ಬಾಯ್‍ನನ್ನು ನೋಡಬೇಕು ಸೆಲ್ಫಿ ತೆಗಿಬೇಕು ಅಂತ ನೂರಾರು ಮಂದಿ ಪಡುಕೆರೆ ಕಡಲಕಿನಾರೆಗೆ ಬಂದಿದ್ದರು. ಆದರೆ ಸಮುದ್ರ ತೀರದಲ್ಲಿ ಸುಮಾರು ನೂರು ಮಂದಿ ಬೌನ್ಸರ್ ಗಳು ಮೊಬೈಲ್ ಚಿತ್ರೀಕರಣ ನಡೆಸದಂತೆ ತಡೆದರು ಯಶ್ ಅವರನ್ನು ಹತ್ತಿರದಿಂದ ನೋಡಬೇಕು ಎಂದು ದೂರದ ಊರುಗಳಿಂದ ಬಂದಿದ್ದ ಯುವಕ-ಯುವತಿಯರಿಗೆ ನಿರಾಶೆಯಾಯಿತು.

ಉಡುಪಿಯಲ್ಲಿ ಕೆಜಿಎಫ್ ಚಿತ್ರ ತಂಡ ಮೂರು ದಿನ ಟೆಂಡ್ ಹಾಕಿದೆ. ಮಲ್ಪೆ ಬೀಚ್, ಮಲ್ಪೆ ಬಂದರು, ಪಡುಕೆರೆ ಬ್ರಿಜ್ ಆಸುಪಾಸಿನಲ್ಲಿ ಚಿತ್ರೀಕರಣ ನಡೆಸಲಿದೆ. ಮಹಾರಾಷ್ಟ್ರದಲ್ಲಿ ಕೊರೊನಾ ಅಟ್ಟಹಾಸ ಜೋರಾಗಿರುವುದರಿಂದ ಮಲ್ಪೆ-ಪಡುಕೆರೆ ಕಡಲ ತೀರವನ್ನು ಮುಂಬೈ ಮಾದರಿಯಲ್ಲಿ ಚಿತ್ರೀಕರಿಸಲಾಗುತ್ತಿದೆ ಎಂಬ ಮಾಹಿತಿ ಇದೆ.

Click to comment

Leave a Reply

Your email address will not be published. Required fields are marked *