Tuesday, 16th July 2019

ಮೊಬೈಲ್ ಕಸಿದು, ಅಕ್ಕಿಯೊಂದಿಗೆ ಪರಾರಿ – ಕೊಡಗಿಗೆ ಕೆಂಪು ಉಗ್ರರು ಎಂಟ್ರಿ?

ಮಡಿಕೇರಿ: ಮಧ್ಯ ಭಾರತದಲ್ಲಿ ರಕ್ಷಣಾ ಪಡೆಗಳ ಕಾರ್ಯಾಚರಣೆಗೆ ಹೆದರಿ ನಕ್ಸಲರು ದಕ್ಷಿಣ ಭಾರತ ಅದರಲ್ಲೂ ಕರ್ನಾಟಕದ ಕಡೆ ವಲಸೆ ಹೋಗುತ್ತಿದ್ದಾರೆ ಎನ್ನುವ ವರದಿಯ ಬೆನ್ನಲ್ಲೇ ಕೊಡಗಿಗೆ ಮತ್ತೆ ಕೆಂಪು ಉಗ್ರರು ಪ್ರವೇಶಿಸಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.

ಜಿಲ್ಲೆಯ ತಡಿಯಂಡಮೋಳ್ ಬೆಟ್ಟ ತಪ್ಪಲಿನಲ್ಲಿ ನಕ್ಸಲರು ಅಕ್ಕಿ ಹಾಗೂ ಮೊಬೈಲ್‍ನೊಂದಿಗೆ ಕಾಡಿನೊಳಗೆ ಪರಾರಿಯಾಗಿದ್ದಾರೆ. ಬೆಟ್ಟದ ತಪ್ಪಲಿನ ಯವಕಪಾಡಿ ಗ್ರಾಮದಲ್ಲಿ ಶಂಕಿತ ನಕ್ಸಲರು ಪ್ರತ್ಯಕ್ಷರಾಗಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಇಂದು ಇಬ್ಬರು ಕೆಂಪು ಉಗ್ರರು ಗ್ರಾಮದ ಎರಡು ಮನೆಗಳಿಗೆ ಬಂದಿದ್ದರು. ನಕ್ಸಲರು ಸುಮಾರು 30 ವರ್ಷ ಪ್ರಾಯದ ಓರ್ವ ಮಹಿಳೆ ಹಾಗೂ ಓರ್ವ ಪುರುಷ ಎಂದು ಶಂಕಿಸಲಾಗಿದೆ. ನಕ್ಸಲರ ತಂಡ ಮನೆಯಲ್ಲಿ ಯಾರೂ ಇಲ್ಲದ ಹಿನ್ನೆಲೆಯಲ್ಲಿ ಗ್ರಾಮದ ಕುಟ್ಟಪ್ಪ ಅವರ ಮನೆಗೆ ನುಗ್ಗಿ ಅಕ್ಕಿ ಹೊತ್ತುಕೊಂಡು ಹೋಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಗ್ರಾಮದ ಅರುಣ ಎಂಬವರ ಮನೆಗೂ ನಕ್ಸಲರು ನುಗ್ಗಿದ್ದಾರೆ. ಮನೆಗೆ ನುಗ್ಗಿದ ನಕ್ಸಲರು ಅರುಣ ಅವರ ಪತ್ನಿಯ ಮೊಬೈಲ್ ಕಸಿದು, ಬೆದರಿಕೆ ಹಾಕಿ ಅಲ್ಲಿಂದ ಪರಾರಿ ಆಗಿದ್ದಾರೆ. ಸದ್ಯ ನಕ್ಸಲರಿಂದ ಬೆಟ್ಟ ತಪ್ಪಲಿನ ಗ್ರಾಮಗಳ ಜನತೆಯಲ್ಲಿ ಆತಂಕ ಹೆಚ್ಚಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಕೊಡಗು ಪೊಲೀಸ್ ಹಾಗೂ ಎಎನ್‍ಎಫ್ ಪಡೆ ಗ್ರಾಮಕ್ಕೆ ದೌಡಾಯಿಸಿದೆ.

Leave a Reply

Your email address will not be published. Required fields are marked *