Saturday, 25th May 2019

Recent News

ಹಂಸಲೇಖಾರಿಂದ ರೇವಾ ವಿವಿ ಮಾಧ್ಯಮ ಕೇಂದ್ರ ಉದ್ಘಾಟನೆ

ಬೆಂಗಳೂರು: ರೇವಾ ವಿಶ್ವವಿದ್ಯಾಲಯ ಹಚ್ಚ ಹಸಿರಿನ ನಿತ್ಯ ತೋರಣದ ವಿದ್ಯಾ ದೇವಾಲಯ ಎಂದು ನಾದಬ್ರಹ್ಮರೆಂದು ಪ್ರಖ್ಯಾತಿ ಹೊಂದಿರುವ ಸಂಗೀತ ನಿರ್ದೇಶಕ ಹಂಸಲೇಖ ಅವರು ಬಣ್ಣಿಸಿದ್ದಾರೆ.

ರೇವಾ ವಿಶ್ವವಿದ್ಯಾಲಯದಲ್ಲಿ ನೂತನವಾಗಿ ನಿರ್ಮಿಸಿರುವ ಮಾಧ್ಯಮಕೇಂದ್ರ(ಮೀಡಿಯಾ ಸೆಂಟರ್)ವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರು ನಗರ ಒತ್ತಡದ ಮತ್ತು ಸಂಚಾರ ದಟ್ಟಣೆಯ ಕಿಷ್ಕಿಂದೆ ಎಂದು ಹೆಸರಾಗುತ್ತಿದೆ. ಅಂತಹ ಆಲೋಚನೆಗಳಿಂದ ಹೊರ ಬರಲು ಬೆಂಗಳೂರಿನಿಂದ ಕೊಂಚ ಹೊರವಲಯದಲ್ಲಿ ರೇವಾ ವಿದ್ಯಾದೇವಾಲಯವಿದೆ. ಇದರ ಮಾಧ್ಯಮಕೇಂದ್ರದ ಉದ್ಘಾಟನೆಗೆ ನನ್ನನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದಾರೆ. ಇದು ನನ್ನ ಪುಣ್ಯ. ಈ ವಿಶ್ವವಿದ್ಯಾಲಯದ ಬಗ್ಗೆ ಕೇಳಿದ್ದೆ ಆದರೆ ಇವತ್ತು ನೋಡುವಂತಹ ಭಾಗ್ಯ ಲಭಿಸಿದೆ. ಒಳಗೆ ಬಂದು ನೋಡಿದಾಗ ಇದೊಂದು ಹಚ್ಚ ಹಸಿರಿನ ನಿತ್ಯ ತೋರಣವೆಂದು ಭಾಸವಾಯಿತು ಎಂದರು.

ಈ ರೇವಾ ವಿಶ್ವವಿದ್ಯಾಲಯದಲ್ಲಿ ಮಾಧ್ಯಮಕೇಂದ್ರವನ್ನು ವೃತ್ತಿಪರವಾಗಿ ನಿರ್ಮಾಣ ಮಾಡಲಾಗಿದೆ. ಈ ಕೇಂದ್ರ ಉದ್ಘಾಟನೆಗೊಳ್ಳುವ ಮೂಲಕ ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ. ಪಿ. ಶ್ಯಾಮರಾಜು ಅವರ ಕನಸು ನನಸಾಗಿದೆ.

ವಿದ್ಯಾರ್ಥಿಗಳು ಕೊಡುಗೆ ನೀಡಲಿ
ಇವತ್ತು ಸುದ್ದಿಯಿಂದ ಜೀವನ. ಆದರೆ ಶಿಕ್ಷಕರಾದ ನಾವು ಸುದ್ದಿ ಒಳಗಿನ ವೈಬ್ರೆಂಟ್‍ನಿಂದ ಜೀವನ ಎನ್ನುತ್ತೇವೆ. ಪ್ರತಿಯೊಂದು ವೈಬ್ರೆಷನ್ ಒಂದು ಮೆಸೇಜ್ ಇದ್ದಂತೆ. ಇವತ್ತಿನಿಂದ ಮೀಡಿಯಾ ಸೆಂಟರ್ ನಲ್ಲಿ ಪಾಸಿಟಿವ್ ವೈಬ್ರೆಷನ್ ಪ್ರಾರಂಭವಾಗಿದೆ. ಈ ವಿಶ್ವವಿದ್ಯಾಲಯದಲ್ಲಿ ಪ್ರತಿವರ್ಷ ಐದು ಸಾವಿರ ವಿದ್ಯಾರ್ಥಿಗಳು ತೇರ್ಗಡೆಯಾಗಿ ಹೊರ ಹೋಗುತ್ತಿದ್ದಾರೆ. ಅವರೆಲ್ಲ ಈ ನಾಡಿಗೆ ಕೊಡುಗೆಯನ್ನು ನೀಡಲಿ ಎಂದು ಹಾರೈಸಿದರು.

ಈ ಸ್ಟುಡಿಯೋದಲ್ಲಿ ಪ್ರದರ್ಶನ ಕಲೆಗೆ ಒಂದು ಪ್ರತ್ಯೇಕ ವಿಭಾಗ ತೆರೆಯಲಾಗಿದೆ. ಜೊತೆಗೆ ಇದಕ್ಕೆ ಪ್ರತಿಭಾನ್ವಿತ ಸಿಬ್ಬಂಧಿಯನ್ನು ನೇಮಕ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಜಾನಪದಕ್ಕೆ ಸಂಬಂಧಿಸಿದಂತೆ ಕೆಲಸ ಮಾಡುವಾಗ ನಾನು ಇವರ ಜೊತೆ ಕೈಜೋಡಿಸುತ್ತೇನೆ ಎಂದರು.

ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಪಿ. ಶ್ಯಾಮರಾಜುರವರು ಮಾತನಾಡಿ, ನಮ್ಮ ವಿಶ್ವವಿದ್ಯಾಲಯದಲ್ಲಿ 15 ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವತ್ತು ಉದ್ಘಾಟನೆಗೊಂಡಿರುವ ಸ್ಟುಡಿಯೋದಿಂದ ಪತ್ರಿಕೋದ್ಯಮ ಮತ್ತು ಇತರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ತರಗತಿಯಲ್ಲಿ ಒತ್ತಡದಲ್ಲಿರುವ ವಿದ್ಯಾರ್ಥಿಗಳು ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಕಲೆ ಮತ್ತು ತಂತ್ರಜ್ಞಾನದ ಬಗ್ಗೆ ತಿಳಿದುಕೊಂಡು ತಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ವಿದ್ಯಾರ್ಥಿಗಳು ಪದವಿಯ ಜತೆಗೆ ತಂತ್ರಜ್ಞಾನಗಳ ಬಗ್ಗೆಯೂ ತಿಳಿದು ಹೊರಜಗತ್ತಿಗೆ ಕಾಲಿಡಲಿ ಎಂಬ ಉದ್ದೇಶದಿಂದ ಈ ಮಾಧ್ಯಮ ಕೇಂದ್ರವನ್ನು ತೆರೆಯಲಾಗಿದೆ ಎಂದು ತಿಳಿಸಿದರು.

1 ಕೋಟಿ ವೆಚ್ಚದಲ್ಲಿ ಮಾಧ್ಯಮ ಕೇಂದ್ರ:
ಮಲ್ಟಿ ಮೀಡಿಯಾ, ಮೀಡಿಯಾ ಎಡಿಟಿಂಗ್, ಅನಿಮೇಶನ್ ತಂತ್ರಜ್ಞಾನ, ಕಂಪ್ಯೂಟರ್ ಗ್ರಾಫಿಕ್ಸ್, ಆನ್‍ಲೈನ್ ವಿಡಿಯೋ ಎಡಿಟಿಂಗ್, ಕ್ಯಾಂಪಸ್ ಟಿ.ವಿ., ಕ್ಯಾಂಪಸ್ ರೇಡಿಯೋ, ವೆಬ್ ರೇಡಿಯೋ ಹಾಗೂ ವಾರ್ತಾ ನಿರೂಪಣೆ, ಚರ್ಚೆಗೆ ಸಂಬಂಧಿಸಿದ ಸ್ಟುಡಿಯೋಗಳು ಮಾಧ್ಯಮ ಕೇಂದ್ರದಲ್ಲಿದ್ದು, ಒಂದು ಕೋಟಿ ವೆಚ್ಚದಲ್ಲಿ ಈ ಕೇಂದ್ರವನ್ನು ನಿರ್ಮಿಸಲಾಗಿದೆ.

ಕಾರ್ಯಕ್ರಮದಲ್ಲಿ ಉಪಕುಲಪತಿಗಳಾದ ಡಾ. ಎಸ್. ವೈ ಕುಲಕರ್ಣಿ, ಕುಲಸಚಿವರಾದ ಡಾ. ಧನಂಜಯ್, ವಿಭಾಗದ ಮುಖ್ಯಸ್ಥರಾದ ಡಾ. ಬೀನಾ ಜಿ., ಡಾ. ಪಾಯಲ್ ದತ್ತ ಚೌದರಿ ಮತ್ತು ಮಂಜುನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *