Connect with us

Districts

ರೈತರ ಪ್ರತಿಭಟನೆಯಲ್ಲಿ ದೇಶದ್ರೋಹಿ ಕೆಲಸ – ಗಣರಾಜ್ಯೋತ್ಸವ ದಿನ ದೇಶಕ್ಕೆ ಅಪಮಾನ

Published

on

ನವದೆಹಲಿ: ಬಹುಶಃ ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಇಂತಹ ಸನ್ನಿವೇಶ ಹಿಂದೆಂದೂ ಕಂಡು ಬಂದಿರಲಿಲ್ಲ. ಗಣರಾಜ್ಯೋತ್ಸವದ ದಿನವೇ ರಾಷ್ಟ್ರ ರಾಜಧಾನಿ ರಣಾಂಗಣವಾಗಿ ಮಾರ್ಪಟ್ಟಿದೆ. ಗಣ ರಾಜ್ಯೋತ್ಸವದ ದಿನವಾದ ಇಂದು ದೇಶಕ್ಕೆ ಅಪಮಾನವಾಗಿದೆ. ರೈತ ದಂಗೆಯ ನೆಪದಲ್ಲಿ ಕೆಲ ಸಮಾಜಘಾತಕ ಶಕ್ತಿಗಳು ಮಾಡಬಾರದ್ದನ್ನು ಮಾಡಿವೆ.

ಕೆಂಪುಕೋಟೆಯಲ್ಲಿ ಕಂಡು ಬಂದ ದೃಶ್ಯಗಳು ಇತ್ತೀಚಿಗೆ ಅಮೆರಿಕಾದ ಸಂಸತ್ ಮೇಲೆ ನಡೆದ ದಾಳಿಯನ್ನು ನೆನಪಿಸುವಂತಿದ್ದವು. ಇಂದಿರಾ ಗಾಂಧಿ ಹತ್ಯೆ ಬಳಿಕ ದೆಹಲಿಯಲ್ಲಿ ಸಿಖ್ ದಂಗೆ ನಡೆದಿತ್ತು. ಆದರೆ ಕೆಂಪುಕೋಟೆಗೆ ಲಗ್ಗೆ ಹಾಕುವ ಮಟ್ಟಕ್ಕೆ ಹೋಗಿರಲಿಲ್ಲ. ದೆಹಲಿ ದಂಗೆಯ ಒಂದೊಂದು ದೃಶ್ಯವೂ ಭಯಾನಕವಾಗಿವೆ.

ರೈತರ ಹೋರಾಟದ ಹಿಂದೆ ಖಲಿಸ್ತಾನ್ ಪ್ರತ್ಯೇಕತಾವಾದಿಗಳ ಪಾತ್ರವಿದೆ ಎಂಬ ಆರೋಪ ಮೊದಲಿಂದಲೂ ಕೇಳಿಬರುತ್ತಿತ್ತು. ಈಗ ಈ ಆರೋಪ ನಿಜ ಎನ್ನುವುದು ಇಂದಿನ ಘಟನೆಗಳಿಂದ ಸಾಬೀತು ಆದಂತಿವೆ. ಕೆಂಪುಕೋಟೆ ಮೇಲೆ ಕೇವಲ ರಾಷ್ಟ್ರೀಯ ಧ್ವಜವನ್ನು ಹಾರಿಸಬೇಕೆಂಬ ನಿಯಮವಿದೆ. ಸ್ವಾತಂತ್ರ್ಯ ಬಂದ ದಿನದಿಂದಲೂ ಇದನ್ನು ಪಾಲಿಸಿಕೊಂಡು ಬರಲಾಗಿತ್ತು. ಆದರೆ ರೈತರ ವೇಷದಲ್ಲಿದ್ದ ಕೆಲ ಸಮಾಜಘಾತಕರು ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ, ಪೊಲೀಸ್ ಭದ್ರತೆ ಬೇಧಿಸಿ ಕೆಂಪುಕೋಟೆಗೆ ಲಗ್ಗೆ ಹಾಕಿ ದಾಂಧಲೆ ನಡೆಸಿದ್ದಾರೆ.

ಪ್ರಧಾನಿ ಹಾರಿಸುವ ರಾಷ್ಟ್ರಧ್ವಜದ ಪಕ್ಕದಲ್ಲೇ ಇರುವ ಎಡಭಾಗದ ಖಾಲಿ ಸ್ಥಂಭದಲ್ಲಿ ರೈತ ಧ್ವಜದ ಜೊತೆಗೆ ಸಿಖ್(ನಿಶಾನ್ ಸಾಹೀಬ್) ಧ್ವಜವನ್ನು ಹಾರಿಸಲಾಗಿದೆ. ಅಲ್ಲದೇ, ಭಾರತದ ತ್ರಿವರ್ಣ ಧ್ವಜವನ್ನು ನೀಡಿದರೆ ಅದನ್ನು ದೇಶದ್ರೋಹಿಯೊಬ್ಬ ಕೆಳೆಗೆಸೆದು ಅಪಮಾನ ಕೂಡ ಮಾಡಿದ್ದಾನೆ.

ಕೆಂಪುಕೋಟೆಯ ಗುಮ್ಮಟವನ್ನೂ ಏರಿದ ದೇಶದ್ರೋಹಿಗಳು ಧ್ವಜ ಹಾರಿಸಿ ವಿಕೃತಿ ಮೆರೆದಿದ್ದಾರೆ. ನಿಹಾಂಗ್ ಸಿಖ್ ಪಡೆಯ ಸದಸ್ಯರು ರಾಜಾರೋಷವಾಗಿ ಕೆಂಪುಕೋಟೆ ಮುಂದೆ ಕತ್ತಿ ಝಳಪಿಸಿದ್ದಾರೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿಯೂ ಇಂತಹ ಸನ್ನಿವೇಶ ಕಂಡು ಬಂದಿರಲಿಲ್ಲ.

ಪ್ರತಿಭಟನಾಕಾರರ ಪೈಕಿ ಒಬ್ಬನ ಕೈಯಲ್ಲಿ ಖಲೀಸ್ತಾನ್ ಎಂದು ಬರೆದಿರುವ ಕಡಗ ಕೂಡ ಕಂಡು ಬಂದಿದೆ. ಈ ಕಾರಣಕ್ಕೆ ರೈತರ ಹೋರಾಟದ ಹಿಂದೆ ಖಲಿಸ್ತಾನ್ ಪ್ರತ್ಯೇಕತಾವಾದಿಗಳ ಪಾತ್ರವಿದೆ ಎನ್ನುವ ಅನುಮಾನ ನಿಜ ಎನ್ನುವವರ ಮಾತಿಗೆ ಮತ್ತಷ್ಟು ಬಲ ಬಂದಿದೆ.

ಇಂದಿನ ಘಟನೆಯನ್ನು ಗಮನಿಸಿದ್ರೆ ರೈತ ಹೋರಾಟದ ಮೇಲೆ ಕಿಸಾನ್ ಯೂನಿಯನ್ ಹಿಡಿತ ಕಳೆದುಕೊಂಡಿದ್ಯಾ ಎಂಬ ಪ್ರಶ್ನೆ ಕೂಡ ಎದ್ದಿದೆ. ಕೇಂದ್ರ ಸರ್ಕಾರ ಇಂದಿನ ಘಟನಾವಳಿಗಳನ್ನು ಗಂಭೀರವಾಗಿ ಪರಿಗಣಿಸಿದೆ. ಗೃಹ ಸಚಿವ ಅಮಿತ್ ಷಾ ನೇತೃತ್ವದಲ್ಲಿ ತುರ್ತು ಸಭೆ ಕೂಡ ನಡೆಸಲಾಗಿದೆ.

ದೇಶಕ್ಕೆ ಅಪಮಾನ ಹೇಗೆ?
– ಕೆಂಪು ಕೋಟೆ ಮೇಲೆ ಹಾರಿದ ಕಿಸಾನ್ ಧ್ವಜ, ಸಿಖ್ ಧ್ವಜ
– ರಾಷ್ಟ್ರಧ್ವಜ ಎಸೆದು ಅಪಮಾನ ಮಾಡಿದ ದೇಶದ್ರೋಹಿ
– ಪೊಲೀಸರಿಗೆ ಕತ್ತಿ ತೋರಿಸಿ ಬೆದರಿಸಿದ ನಿಹಾಂಗ್ ಸಿಖ್ ಪಡೆ
– ರೈತ ಹೋರಾಟದಲ್ಲಿ ಖಲೀಸ್ತಾನಿಗಳ ಭಾಗಿ; ಕೈ ಕಡಗದಿಂದ ದೃಢ

Click to comment

Leave a Reply

Your email address will not be published. Required fields are marked *