Thursday, 17th October 2019

Recent News

ಕಿಂಗ್ಸ್ ಇಲೆವೆನ್ ಪಂಜಾಬ್‍ನಿಂದ ಅಶ್ವಿನ್ ಔಟ್?- ಯಾರಾಗ್ತಾರೆ ಕಿಂಗ್ಸ್ ಕ್ಯಾಪ್ಟನ್?

ಮುಂಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕರಾಗಿರುವ ಆರ್.ಅಶ್ವಿನ್ ಅವರನ್ನು ತಂಡದಿಂದ ಕೈಬಿಡಲು ತಂಡದ ಮ್ಯಾನೇಜ್‍ಮೆಂಟ್ ನಿರ್ಧರಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಬಾಲಿವುಡ್ ನಟಿ ಪ್ರೀತಿ ಜಿಂಟಾ ಒಡೆತನದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕಳೆದ ಎರಡು ಟೂರ್ನಿಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡಿಲ್ಲ. ಕಳೆದ 2 ಟೂರ್ನಿಗಳಲ್ಲಿ ಅಶ್ವಿನ್ ನಾಯಕತ್ವದಲ್ಲಿ ಮುನ್ನಡೆದಿದ್ದ ತಂಡ 6 ಮತ್ತು 5ನೇ ಕ್ರಮಾಂಕದಲ್ಲಿ ತನ್ನ ಜರ್ನಿಯನ್ನು ಅಂತ್ಯಗೊಳಿಸಿತ್ತು. ಕಿಂಗ್ಸ್ ಇಲೆವೆನ್ ಪರ 28 ಪಂದ್ಯಗಳನ್ನು ಆಡಿರುವ ಅಶ್ವಿನ್, 25 ವಿಕೆಟ್ ಪಡೆದಿದ್ದಾರೆ. ಒಟ್ಟಾರೆ ಐಪಿಎಲ್‍ನಲ್ಲಿ 139 ಪಂದ್ಯಗಳನ್ನು ಆಡಿರುವ ಅಶ್ವಿನ್ 125 ವಿಕೆಟ್ ಪಡೆದಿದ್ದಾರೆ. 2018 ರಲ್ಲಿ ತಂಡ 7.8 ಕೋಟಿ ರೂ.ಗಳನ್ನು ನೀಡಿ ಅಶ್ವಿನ್ ರನ್ನು ಖರೀದಿ ಮಾಡಿತ್ತು.

ಮುಂದಿನ ಟೂರ್ನಿಯಲ್ಲಿ ಅಶ್ವಿನ್ ಅವರನ್ನು ಬೇರೆ ತಂಡಕ್ಕೆ ಬಿಟ್ಟುಕೊಡಲು ತೀರ್ಮಾನಿಸಲಾಗಿದ್ದು, ಈ ಕುರಿತ ನಿರ್ಧಾರ ಶೀಘ್ರವೇ ಪ್ರಕಟ ಮಾಡಲಾಗುತ್ತದೆ ಎನ್ನಲಾಗಿದೆ. ರಾಜಸ್ಥಾನ್ ರಾಯಲ್ಸ್ ತಂಡ ಅಶ್ವಿನ್ ರನ್ನು ಖರೀದಿ ಮಾಡಲು ಚಿಂತನೆ ನಡೆಸಿದೆಯಂತೆ. ಸದ್ಯ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮ್ಯಾನೇಜ್‍ಮೆಂಟ್ ಸದ್ಯ ಅಶ್ವಿನ್‍ರ ಸ್ಥಾನದಲ್ಲಿ ಕನ್ನಡಿಗ ಕೆಎಲ್ ರಾಹುಲ್‍ರನ್ನು ನಾಯಕರಾಗಿ ಆಯ್ಕೆ ಮಾಡುವ ಚಿಂತನೆಯಲ್ಲಿದೆ ಎಂದು ಮಾಧ್ಯಮ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇತ್ತ ತಂಡದ ಕೋಚ್ ಬದಲಾವಣೆಯನ್ನು ಮಾಡಲಾಗುತ್ತಿದೆ. ಈ ಸ್ಥಾನದಲ್ಲಿ ಜಾರ್ಜ್ ಬೈಲಿ ಮತ್ತು ಡ್ಯಾರೆನ್ ಲೆಹ್ಮನ್ ಅವರು ಆಯ್ಕೆಯಾಗುವ ಸಾಧ್ಯತೆ ಇದೆ.

ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಟೂರ್ನಿಯ ಮೊದಲ ಪಂದ್ಯದಿಂದಲೂ ಅಶ್ವಿನ್ ಅವಕಾಶವನ್ನು ಪಡೆದಿರಲಿಲ್ಲ. ತಂಡದಿಂದ ಅನುಭವಿ ಅಶ್ವಿನ್ ಹಾಗೂ ರೋಹಿತ್ ಶರ್ಮಾರನ್ನು ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಹಲವು ವಿಮರ್ಶೆಗಳು ಕೂಡ ಎದುರಾಗಿತ್ತು. ಅಲ್ಲದೇ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ತಂಡದ ಆಯ್ಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೇ ಸಂದರ್ಭದಲ್ಲೇ ಕಿಂಗ್ಸ್ ಇಲೆವೆನ್ ತಂಡ ನಾಯಕತವ ಕಳೆದುಕೊಳ್ಳುವ ಸುದ್ದಿ ಹೊರಬಿದ್ದಿದೆ.

Leave a Reply

Your email address will not be published. Required fields are marked *