Wednesday, 22nd January 2020

ಬೆಂಗ್ಳೂರು ರಸ್ತೆಗೆ ಹುತಾತ್ಮ ವೀರಯೋಧ ಮೇಜರ್ ಅಕ್ಷಯ್ ಗಿರೀಶ್ ಹೆಸರು

ಬೆಂಗಳೂರು: ನಗರದ ಪಶ್ಚಿಮ ಭಾಗದ ರಸ್ತೆಯೊಂದಕ್ಕೆ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಹೆಸರನ್ನು ಇಂದು ನಾಮಕರಣ ಮಾಡಲಾಗಿದೆ. ರಸ್ತೆಗೆ ನಾಮಕರಣ ಮಾಡುವ ಮೊದಲು ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರು ಟ್ವೀಟ್ ಮಾಡಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?:
ಕಾರ್ಗಿಲ್ ದಿವಸ್ ಪ್ರಯುಕ್ತ ಕರ್ನಾಟಕ ಹಾಗೂ ಹೆಮ್ಮೆಯ ಸೈನಿಕ ಬೆಂಗಳೂರಿನ ಮೇಜರ್ ಅಕ್ಷಯ್ ಗಿರೀಶ್ ಅವರ ಹೆಸರನ್ನು ನಗರದ ಪಶ್ಚಿಮ ಭಾಗದ ರಸ್ತೆಯೊಂದಕ್ಕೆ ನಾಮಕರಣ ಮಾಡಲಾಗುತ್ತಿದೆ. ಅಕ್ಷಯ್ ಗಿರೀಶ್ ಅವರು ನಾಗ್ರೋಟಾದಲ್ಲಿ ಉಗ್ರಗಾಮಿಗಳೊಂದಿಗೆ ಸೆಣಸಿ ವೀರಮರಣವನ್ನಪಿದ್ದರು ಅಂತ ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಅಕ್ಷಯ್ ಗಿರೀಶ್ ಕುಮಾರ್ ಯಾರು?:
ಮೂಲತಃ ಬೆಂಗಳೂರಿನ ಯಲಹಂಕದವರಾಗಿದ್ದ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಕಾಶ್ಮೀರದಲ್ಲಿ ಉಗ್ರರೊಂದಿಗೆ ನಡೆದ ಕಾದಾಟದಲ್ಲಿ 2016ರ ನವೆಂಬರ್‍ನಲ್ಲಿ ಹುತಾತ್ಮರಾಗಿದ್ದರು. ಮೇಜರ್ ಉನ್ನಿಕೃಷ್ಣನ್ ಅವರಿಗೆ ಸಂದ ಗೌರವವನ್ನು ಅಕ್ಷಯ್ ಗಿರೀಶ್ ಅವರಿಗೂ ನೀಡುವ ಉದ್ದೇಶದಿಂದ ಬಿಬಿಎಂಪಿ ಈ ನಿರ್ಧಾರ ಕೈಗೊಂಡಿತ್ತು. ಆದರೆ ರಸ್ತೆ ಆಯ್ಕೆ ವಿಚಾರದಲ್ಲಿ ಇದ್ದ ಗೊಂದಲದಿಂದಾಗಿ ಕಳೆದ ಎರಡು ವರ್ಷಗಳಿಂದ ನಾಮಕರಣ ವಿಳಂಬವಾಗಿತ್ತು.

ಎಲ್ಲಿದೆ ರಸ್ತೆ?:
ಯಲಹಂಕ ನ್ಯೂಟೌಟ್‍ನ ಎ ಸೆಕ್ಟರ್ 13ನೇ ಎ ಮುಖ್ಯರಸ್ತೆ, 3ನೇ ಎ ಅಡ್ಡರಸ್ತೆಗೆ ಮೇಯರ್ ಅಕ್ಷಯ್ ಗಿರೀಶ್ ಕುಮಾರ್ ರಸ್ತೆ ಎಂದು ನಾಮಕರಣ ಮಾಡಲಾಗಿದೆ. ಈ ವಿಚಾರವಾಗಿ ಕಳೆದ ಎರಡು ವರ್ಷಗಳಿಂದ ಬಿಬಿಎಂಪಿ ವಿಳಂಬ ನೀತಿ ಅನುಸರಿಸುತ್ತಾ ಬಂದಿತ್ತು. ಇದಕ್ಕೆ ತೀವ್ರ ವಿಷಾದ ವ್ಯಕ್ತಪಡಿಸಿದ್ದ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಬಿಬಿಎಂಪಿ ಮೇಯರ್ ಅವರಿಗೆ ಪತ್ರ ಬರೆದು ತಕ್ಷಣವೇ ನಾಮಕರಣ ಪೂರ್ಣಗೊಳ್ಳಬೇಕು ಎಂದು ಒತ್ತಾಯಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರು, ಪಾಲಿಕೆ ಸದಸ್ಯರು ಹಾಗೂ ಸ್ಥಳೀಯ ಶಾಸಕರ ಜೊತೆಗೆ ಚರ್ಚೆ ನಡೆಸಿ ಯಾವ ರಸ್ತೆಗೆ ಹೆಸರು ಇಡಬೇಕು ಎಂದು ನಿರ್ಧಾರ ಕೈಗೊಂಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Leave a Reply

Your email address will not be published. Required fields are marked *