ನವದೆಹಲಿ: ತೀವ್ರ ನಿರ್ಣಾಯಕ ಎನಿಸಿರುವ 2024 ರ ಲೋಕಸಭೆ ಚುನಾವಣೆ ಗೆಲ್ಲಲು ವಿರೋಧ ಪಕ್ಷಗಳು ತಯಾರಿ ಆರಂಭಿಸಿವೆ. ಇದರ ಭಾಗವಾಗಿ ಜೂನ್ 23 ರಂದು ಪಾಟ್ನಾದಲ್ಲಿ ಎಲ್ಲ ವಿಪಕ್ಷಗಳನ್ನು ಒಗ್ಗೂಡಿಸಿ ಸಮಾನ ಮನಸ್ಕ ವೇದಿಕೆ ಸೃಷ್ಟಿಸಲು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಪ್ರಯತ್ನಿಸುತ್ತಿದ್ದು, ಸದ್ಯ ಈ ಪ್ರಯತ್ನಕ್ಕೆ ಹಿನ್ನಡೆಯಾಗುವ ಲಕ್ಷಣಗಳು ಕಂಡು ಬಂದಿವೆ.
ನಿತೀಶ್ ಕುಮಾರ್ ಕರೆದಿರುವ ಸಭೆಯಿಂದ ದೂರ ಉಳಿಯಲು ತೆಲಂಗಾಣದ ಭಾರತ್ ರಾಷ್ಟ್ರ ಸಮಿತಿ (BRS), ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷ (TDP) ಮತ್ತು ಒಡಿಶಾದ ಬಿಜು ಜನತಾ ದಳ (BJD) ನಿರ್ಧರಿಸಿವೆ. ಸಭೆಯಲ್ಲಿ ಭಾಗಿಯಾದರೂ ಕಾಂಗ್ರೆಸ್ (Congress) ಜೊತೆಗೆ ಕೈ ಜೋಡಿಸುವುದಿಲ್ಲ ಎನ್ನುವ ಸಂದೇಶವನ್ನು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ರವಾನಿಸಿದ್ದಾರೆ.
Advertisement
Advertisement
ಆಪ್ ಸರ್ಕಾರ ಮಣಿಸಲು ಸುಪ್ರೀಂಕೋರ್ಟ್ ನಿರ್ಧಾರದ ವಿರುದ್ಧ ತಂದಿರುವ ಸುಗ್ರೀವಾಜ್ಞೆಗೆ ರಾಜ್ಯಸಭೆಯಲ್ಲಿ ಒಪ್ಪಿಗೆ ನೀಡದಂತೆ ವಿಪಕ್ಷಗಳನ್ನು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದ್ದಾರೆ. ಇದರ ಭಾಗವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿಗೆ ಅವರು ಪ್ರಯತ್ನಿಸಿದ್ದು ಭೇಟಿಗೆ ಸಮಯ ನೀಡಿಲ್ಲ. ಇದರಿಂದ ಆಕ್ರೋಶಗೊಂಡಿರುವ ಕೇಜ್ರಿವಾಲ್ ಮುಂಬರುವ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯಲ್ಲಿ ಅಖಾಡಕ್ಕೆ ಇಳಿಯಲು ನಿರ್ಧರಿಸಿದ್ದು ಕಾಂಗ್ರೆಸ್ ವಿರುದ್ಧ ಈಗಾಗಲೇ ಹೋರಾಟ ಆರಂಭಿಸಿದ್ದಾರೆ.
Advertisement
Advertisement
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮೈತ್ರಿಗೆ ಷರತ್ತು ವಿಧಿಸಿದ್ದಾರೆ. ಬಂಗಾಳದಲ್ಲಿ ಟಿಎಂಸಿ ಎದುರಾಳಿಗಳಾದ ಎಡ ಪಕ್ಷಗಳಿಂದ ಕಾಂಗ್ರೆಸ್ ಮೈತ್ರಿ ಮುರಿದುಕೊಂಡರೆ ಮಾತ್ರ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳವ ಬಗ್ಗೆ ಪರಿಶೀಲಿಸಬಹುದು ಎಂದು ಹೇಳಿದ್ದಾರೆ. ಜೂನ್ 23 ಪಾಟ್ನಾದಲ್ಲಿ ನಡೆಯಲಿರುವ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್, ಸೀತರಾಮ್ ಯೆಚೂರಿ ಭಾಗಿಯಾಗಲಿದ್ದು ಅಂದಿನ ಮಾತುಕತೆ ಕುತೂಹಲ ಮೂಡಿಸಿದೆ.
ರಾಜ್ಯದಲ್ಲಿನ ಅಸ್ತಿತ್ವ ಮತ್ತು ಹಿತಾಸಕ್ತಿಯ ಕಾರಣಕ್ಕೆ ತೆಲಂಗಾಣದ ಭಾರತ್ ರಾಷ್ಟ್ರ ಸಮಿತಿ (BRS), ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷ (TDP) ಮತ್ತು ಒಡಿಶಾದ ಬಿಜು ಜನತಾ ದಳ (BJD) ನಿರ್ಧರಿಸಿವೆ. ಮುಂಬರುವ ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ನಾವು ಸ್ಪರ್ಧಿಸಲಿದ್ದೇವೆ ಎಂದು ಮುಖ್ಯಸ್ಥ ಕೆ ಚಂದ್ರಶೇಖರ್ ರಾವ್ ಹೇಳಿದ್ದಾರೆ. ಇತ್ತೀಚೆಗೆ ಅವರ ಒಂದು ಭಾಷಣದಲ್ಲಿ ಕಾಂಗ್ರೆಸ್ ಅನ್ನು ಬಂಗಾಳ ಕೊಲ್ಲಿಯಲ್ಲಿ ಎಸೆಯಬೇಕು ಎಂದು ಹೇಳಿದರು. ಇದನ್ನೂ ಓದಿ: ಮೋದಿ ಮುಂದೆ ಮಾತಾಡೋ ಧಮ್ ಇದ್ದಿದ್ದು ಬಿಎಸ್‌ವೈಗೆ ಮಾತ್ರ – ರಾಮಲಿಂಗಾ ರೆಡ್ಡಿ
ಟಿಡಿಪಿಯ ಚಂದ್ರಬಾಬು ನಾಯ್ಡು ಆಂಧ್ರಪ್ರದೇಶದಲ್ಲಿ ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಜೊತೆಗಿನ ಮೈತ್ರಿಯನ್ನು ನವೀಕರಿಸುವ ಬಗ್ಗೆ ಚಿಂತಿಸಿದೆ ಎನ್ನಲಾಗಿದೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಕೂಡಾ ಮೈತ್ರಿಗೆ ಹಿಂದೇಟು ಹಾಕಿದ್ದಾರೆ ಎನ್ನಲಾಗುತ್ತಿದೆ. ಮೊದಲಿನಿಂದಲೂ ಎರಡು ರಾಷ್ಟ್ರೀಯ ಪಕ್ಷಗಳಿಂದ ಪಟ್ನಾಯಕ್ ಅಂತರ ಕಾಯ್ದುಕೊಂಡಿದ್ದಾರೆ. ಮುಖ್ಯವಾಗಿ ರಾಜ್ಯದಲ್ಲಿ ಬಿಜೆಡಿಗೆ ಕಾಂಗ್ರೆಸ್ ಪ್ರಬಲ ಸ್ಪರ್ಧಿಯಾಗಿದೆ. ಇನ್ನು ಉತ್ತರ ಪ್ರದೇಶದಲ್ಲಿ ಮಾಯಾವತಿಯವರ ಬಹುಜನ ಸಮಾಜ ಪಕ್ಷವನ್ನು (BSP) ಪಾಟ್ನಾ ಸಭೆಗೆ ಆಹ್ವಾನಿಸಲಾಗಿಲ್ಲ.
ಸುಮಾರು 125 ಲೋಕಸಭೆಯನ್ನು ಹೊಂದಿರುವ ಪಂಜಾಬ್, ದೆಹಲಿ, ಒಡಿಶಾ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಪಶ್ಚಿಮ ಬಂಗಾಳದಲ್ಲಿ ‘ಒಂದು ಸ್ಥಾನ, ಒಬ್ಬ ವಿರೋಧ ಪಕ್ಷದ ಅಭ್ಯರ್ಥಿ’ ಸೂತ್ರದ ಮೇಲೆ ಒಪ್ಪಂದ ಮಾಡಿಕೊಳ್ಳಲು ನಿತೀಶ್ ಕುಮಾರ್ ಪ್ರಯತ್ನಿಸುತ್ತಿದ್ದಾರೆ. ಆದರೆ ಪ್ರತಿಪಕ್ಷಗಳ ಷರತ್ತುಗಳು ಕಾಂಗ್ರೆಸ್ ನಿರ್ಧಾರವನ್ನು ಅವಲಂಬಿಸಿದ್ದು ಸಭೆ ಯಶಸ್ವಿಯಾಗಬಲ್ಲದೇ ಕಾದು ನೋಡಬೇಕು. ಇದನ್ನೂ ಓದಿ: ಕೋಮು ಗಲಭೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ 25 ಲಕ್ಷ ಪರಿಹಾರ – ಶೀಘ್ರದಲ್ಲೇ ಸರ್ಕಾರಿ ಉದ್ಯೋಗ