Connect with us

Bengaluru City

ಹಿಂದಿ ಬಗ್ಗೆ ಅಭಿಮಾನ ಮೆರೆದಿದ್ದ ಅಮಿತ್ ಶಾಗೆ ಬಿಎಸ್‍ವೈ ಟಾಂಗ್

Published

on

ಬೆಂಗಳೂರು: ಹಿಂದಿ ಹೇರಿಕೆ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊನೆಗೂ ಮೌನ ಮುರಿದಿದ್ದು ಕನ್ನಡ ಭಾಷಾ ಸ್ವಾಭಿಮಾನಕ್ಕೆ ಧಕ್ಕೆ ತರುವ ಯಾವ ಪ್ರಯತ್ನವನ್ನೂ ನಮ್ಮ ಸರ್ಕಾರ ಸಹಿಸುವುದಿಲ್ಲ ಎಂದು ಟ್ವೀಟ್ ಮಾಡುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಟಾಂಗ್ ನೀಡಿದ್ದಾರೆ.

ಅಮಿತ್ ಶಾ ಅವರ ಒಂದು ದೇಶ, ಒಂದೇ ಭಾಷೆ ಹೇಳಿಕೆ ಕುರಿತು ದೇಶಾದ್ಯಂತ ಭಾರೀ ಚರ್ಚೆ ನಡೆಯುತ್ತಿದ್ದು, ದಕ್ಷಿಣ ಭಾರತದ ರಾಜಕೀಯ ನಾಯಕರು ಅವರ ಹೇಳಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಿ, ಖಂಡನೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಇಂದು ಟ್ವೀಟ್ ಮಾಡಿರುವ ಸಿಎಂ, ಭಾರತೀಯ ಸಂವಿಧಾನ ಅಂಗೀಕರಿಸಿದ ಭಾಷೆಗಳಲ್ಲಿ ಯಾವುದೇ ತಾರತಮ್ಯ ಸಲ್ಲದು. ಕರ್ನಾಟಕ ರಾಜ್ಯದಲ್ಲಿ ಕನ್ನಡವೇ ಅಧಿಕೃತ ಭಾಷೆ ಮತ್ತು ಕನ್ನಡ ಭಾಷಾ ಸ್ವಾಭಿಮಾನಕ್ಕೆ ಧಕ್ಕೆ ತರುವ ಯಾವ ಪ್ರಯತ್ನವನ್ನೂ ನಮ್ಮ ಸರ್ಕಾರ ಸಹಿಸುವುದಿಲ್ಲ. ನಮ್ಮ ದೇಶದಲ್ಲಿನ ಎಲ್ಲ ಅಧಿಕೃತ ಭಾಷೆಗಳು ಸಮಾನವಾಗಿವೆ. ಅದೇ ರೀತಿ ಕರ್ನಾಟಕದಲ್ಲಿಯೂ ಕನ್ನಡ ಪ್ರಮುಖ ಭಾಷೆಯಾಗಿದೆ. ಕನ್ನಡದ ಮಹತ್ವ ಹಾಗೂ ಅಸ್ಮಿತೆಯ ವಿಚಾರದಲ್ಲಿ ನಾವು ಎಂದಿಗೂ ರಾಜಿಯಾಗುವುದಿಲ್ಲ. ಅಲ್ಲದೆ, ಕನ್ನಡ ಹಾಗೂ ರಾಜ್ಯದ ಸಂಸ್ಕೃತಿಯನ್ನು ಬೆಳೆಸಲು ಕಟಿಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.

`ಹಿಂದಿ ದಿವಸ್’ ಆಚರಣೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 14ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿಯಲ್ಲಿ ಮಾತನಾಡಿ, ಈ ದೇಶದ ವಿಶೇಷತೆ ಅಂದರೆ ಭಾಷೆ. ಜಗತ್ತಿನ ಯಾವುದೇ ಭಾಷೆಯ ಜೊತೆ ಹೋಲಿಸಿ ನೋಡಿದಾಗ ನಮ್ಮ ಭಾಷೆಯ ವ್ಯಾಪಕತೆ, ಸಮೃದ್ಧತೆಯೇ ಸರ್ವಶ್ರೇಷ್ಠ ಎಂದಿದ್ದರು. ಅಲ್ಲದೇ ಭಾಷೆಗಳು ಮತ್ತು ಉಪಭಾಷೆಗಳ ವೈವಿಧ್ಯತೆಯು ನಮ್ಮ ರಾಷ್ಟ್ರದ ಶಕ್ತಿ. ಆದರೆ, ನಮ್ಮ ರಾಷ್ಟ್ರವು ಒಂದೇ ಭಾಷೆಯನ್ನು ಹೊಂದುವ ಅವಶ್ಯಕತೆಯಿದೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಹಿಂದಿಯನ್ನು `ರಾಜ್ ಭಾಷಾ’ ಎಂದು ಕರೆದು ಸ್ವೀಕರಿಸಿದ್ದರು. ಮಾತೃ ಭಾಷೆಯ ಜೊತೆಗೆ ಹಿಂದಿ ಭಾಷೆಯನ್ನು ಹೆಚ್ಚಾಗಿ ಬಳಸಿ ಎಂದಿದ್ದರು ಎಂದು ಹೇಳಿದ್ದರು.

ಭಾರತವನ್ನು ಒಂದುಗೂಡಿಸುವ ಸಾಮರ್ಥ್ಯ ಹಿಂದಿ ಭಾಷೆಗೆ ಇದೆ. ಭಾರತವೂ ವಿಭಿನ್ನ ಭಾಷೆಗಳ ದೇಶ. ಪ್ರತಿ ಭಾಷೆಗೂ ತನ್ನದೇ ಮಹತ್ವವಿದೆ. ಆದರೆ ಜಾಗತಿಕವಾಗಿ ಭಾರತದ ಅಸ್ಮಿತೆ ಆಗುವ ಭಾಷೆಯ ಅಗತ್ಯವಿದೆ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದರು. ಶಾ ಅವರ ಈ ಹೇಳಿಗೆ ಬಿಜೆಪಿ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಕೂಡ ದನಿಗೂಡಿಸಿದ್ದರು.