Wednesday, 26th June 2019

ಒಡೆಯನಿಗೆ ಸಾಥ್ ನೀಡಿದ್ರು ರೆಬಲ್ ಅಂಬಿ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರ ಹೊಸ ಸಿನಿಮಾ `ಒಡೆಯ’ ಲಾಂಚ್ ಆಗಿದೆ. ಈ ಸಿನಿಮಾಕ್ಕೆ ಹಿರಿಯ ನಟ ರೆಬಲ್ ಸ್ಟಾರ್ ಅಂಬರೀಶ್ ಅವರು ಸಾಥ್ ನೀಡಿದ್ದಾರೆ.

`ಒಡೆಯ’ ದರ್ಶನ್ ಅವರ 52ನೇ ಸಿನಿಮಾವಾಗಿದೆ. ಈ ಸಿನಿಮಾದ ಮುಹೂರ್ತ ಗುರುವಾರ ಅರಮನೆ ನಗರಿ ಮೈಸೂರಿನಲ್ಲಿ ನಡೆದಿದೆ. ಈ ಸಿನಿಮಾವನ್ನು ನಿರ್ಮಾಪಕ ಸಂದೇಶ್ ನಾಗರಾಜ್ ಅವರು ನಿರ್ಮಿಸುತ್ತಿದ್ದು, ನಿನ್ನೆ ಇವರ ಹುಟ್ಟುಹಬ್ಬವಾದ ಹಿನ್ನೆಲೆಯಲ್ಲಿ ಸಿನಿಮಾದ ಮುಹೂರ್ತ ಕಾರ್ಯಕ್ರಮವನ್ನು ನೆರವೇರಿಸಲಾಗಿದೆ. ಈ ಕಾರ್ಯಕ್ರಮಕ್ಕೆ ನಟ ಅಂಬರೀಶ್ ಭಾಗಿಯಾಗಿದ್ದು, ದರ್ಶನ್ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.


ಸಂದೇಶ್ ನಾಗರಾಜ್ ಅವರು ನಟ ಅಂಬರೀಶ್ ಮತ್ತು ದರ್ಶನ್ ಇಬ್ಬರಿಗೂ ಆಪ್ತರಾಗಿದ್ದಾರೆ. ಈ ಹಿಂದೆ ಕೂಡ ಸಂದೇಶ್ ನಾಗರಾಜ್, ದರ್ಶನ್ ಅವರ `ಐರಾವತ’ ಸಿನಿಮಾಗೆ ಬಂಡವಾಳ ಹಾಕಿದ್ದರು. ಈಗ ಮತ್ತೆ ಇವರೇ ದರ್ಶನ್ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ನಟ ಅಂಬರೀಶ್ ಅವರ ಮಗ ಅಭಿಷೇಕ್ ಅವರ ಚೊಚ್ಚಲ ಚಿತ್ರ `ಅಮರ್’ ಸಿನಿಮಾ ಕೂಡ ಸಂದೇಶ್ ನಾಗರಾಜ್ ಅವರ ಬ್ಯಾನರ್ ನಲ್ಲಿ ಮೂಡಿ ಬರುತ್ತಿದೆ.

`ಒಡೆಯ’ ಸಿನಿಮಾವನ್ನು ಎಂ.ಡಿ.ಶ್ರೀಧರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಶ್ರೀಧರ್ ದರ್ಶನ್ ಜೊತೆಗೆ `ಬುಲ್ ಬುಲ್’ ಸಿನಿಮಾವನ್ನು ಮಾಡಿದ್ದರು. ಈ ಸಿನಿಮಾದ ನಂತರ ಮತ್ತೆ ಈ ಜೋಡಿ ಒಂದಾಗಿದೆ. ಈ ಸಿನಿಮಾಕ್ಕೆ ಮೊದಲು `ಒಡೆಯರ್’ ಎಂದು ಟೈಟಲ್ ಇಡಲಾಗಿತ್ತು. ಆದರೆ ಇದು ಮೈಸೂರು ಒಡೆಯರ್ ಅವರ ಮನೆತನದ ಹೆಸರು ಎಂದು ಚರ್ಚೆಗೆ ಗ್ರಾಸವಾಗಿತ್ತು. ಬಳಿಕ `ಒಡೆಯರ್’ ಟೈಟಲನ್ನು `ಒಡೆಯ’ ಎಂದು ಬದಲಿಸಲಾಗಿದೆ. ಸದ್ಯ ದರ್ಶನ್ ಅವರು `ಕುರುಕ್ಷೇತ್ರ’, `ಯಜಮಾನ’ ಮತ್ತು `ಒಡೆಯ’ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *