Connect with us

Bengaluru City

ಘಟಾನುಘಟಿ ನಾಯಕರನ್ನೇ ಸೋಲಿಸಿದ ಬಿಜೆಪಿ- ರಾಜ್ಯದಲ್ಲಿ ಕಮಲ ಅರಳಲು ಪ್ರಮುಖ ಕಾರಣಗಳೇನು?

Published

on

ಬೆಂಗಳೂರು: ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಕರ್ನಾಟಕದಲ್ಲಿಯೂ ಬಿಜೆಪಿ ಮೇಲುಗೈ ಸಾಧಿಸಿದೆ. ಹಿರಿಯ ಘಟಾನುಘಟಿ ಮುಖಂಡರುಗಳಾದ ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ಕೆಎಚ್ ಮುನಿಯಪ್ಪ, ದಿಗ್ವಿಜಯ್ ಸಿಂಗ್  ಸೋಲಿನ ರುಚಿ ಕಂಡಿದ್ದಾರೆ.

ಬಿಜೆಪಿಗೆ ಒಂದಂಕಿಯೇ ಗತಿ ಎಂದು ಗೇಲಿ ಮಾಡುತ್ತಿದ್ದ ಎರಡೂ ಪಕ್ಷಗಳ ನಾಯಕರಿಗೆ ಫಲಿತಾಂಶ ಶಾಕ್ ನೀಡಿದೆ. ನೋಡ್ತಾ ಇರಿ, 22 ಸೀಟ್ ಗೆದ್ದೇ ಗೆಲ್ಲುತ್ತೇವೆ ಎಂದು ಹೇಳುತ್ತಿದ್ದ ಯಡಿಯೂರಪ್ಪ ಭವಿಷ್ಯವಾಣಿ ನಿಜವಾಗಿದೆ. ಬೀದರ್‍ನಿಂದ ಹಿಡಿದು ಚಾಮರಾಜನಗರದವರೆಗೆ, ಇತ್ತ ದಕ್ಷಿಣ ಕನ್ನಡದಿಂದ ತುಮಕೂರಿನ ಪಾವಗಡದವರೆಗೂ ಇಡೀ ಕರ್ನಾಟಕ ಕೇಸರಿ ಮಯವಾಗಿದೆ. ಕೇವಲ ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್, ಹಾಸನದಲ್ಲಿ ಜೆಡಿಎಸ್ ಹಾಗೂ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಮಂದಹಾಸ ಬೀರಿದ್ದಾರೆ.

28 ವರ್ಷಗಳ ಬಳಿಕ ಮೊದಲ ಬಾರಿಗೆ ಪಕ್ಷವೊಂದು ಸ್ವತಂತ್ರವಾಗಿ ಕರ್ನಾಟಕದಲ್ಲಿ ಅತ್ಯಧಿಕ ಸ್ಥಾನಗಳನ್ನು ಗೆದ್ದುಕೊಂಡಿದೆ. 1989ರಲ್ಲಿ ಕಾಂಗ್ರೆಸ್ 27 ಸ್ಥಾನಗಳನ್ನು ಗೆದ್ದಿದ್ದರೆ ಜನತಾದಳ 1 ಸ್ಥಾನವನ್ನಷ್ಟೇ ಗೆದ್ದುಕೊಂಡಿದೆ. 1991ರಲ್ಲಿ ಕಾಂಗ್ರೆಸ್ 23, ಎಸ್‍ಪಿ 1, ಬಿಜೆಪಿ 4 ಸ್ಥಾನಗಳನ್ನು ಗೆದ್ದುಕೊಂಡಿತ್ತು.

ಪ್ರಚಂಡ ಗೆಲುವಿಗೆ ಕಾರಣಗಳೇನು..?
* ಮೈತ್ರಿ ಸರ್ಕಾರ ರಚನೆಯಾದ ಕೂಡಲೇ ಬಿಜೆಪಿ ಆಪರೇಷನ್ ಕಮಲಕ್ಕೆ ಕೈ ಹಾಕಿತ್ತು. ಶಾಸಕರಿಗೆ ವಿಶ್ವಾಸ ಇಲ್ಲ, ಮೈತ್ರಿ ಸರ್ಕಾರ ಅಸ್ಥಿರವಾಗಿದೆ ಎಂದು ಬಿಂಬಿಸಿದ್ದರು. ಬಿಜೆಪಿಯ ಆಪರೇಷನ್ ಪಾಲಿಟಿಕ್ಸ್ ನಿಂದ ಕಂಗೆಟ್ಟ ದೋಸ್ತಿ ಸರ್ಕಾರ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತಾಡಲಿಲ್ಲ. ಬದಲಾಗಿ ಆಪರೇಷನ್ ಕಲಮದ ಬಗ್ಗೆ ಮಾತನಾಡಿತು. ಅಲ್ಲದೆ ಬಿಜೆಪಿ ಡೆಡ್‍ಲೈನ್‍ಗಳಿಗೆ ತಿರುಗೇಟು ಕೊಡುವುದರಲ್ಲೇ ಮೈತ್ರಿ ಸರ್ಕಾರ ಮಗ್ನವಾಗಿತ್ತು. ಸಿದ್ದರಾಮಯ್ಯ ವರ್ಸಸ್ ಕುಮಾರಸ್ವಾಮಿ ನಡುವೆ ಕಾದಾಟ ಶುರುವಾಗಿತ್ತು. ಇತ್ತ ಇಬ್ಬರ ಆಪ್ತ ಸಚಿವರು, ಶಾಸಕರು ಬೀದಿಯಲ್ಲಿ ವಾಕ್ಸಮರ ಮಾಡಿದ್ದು ಕೂಡ ಬಿಜೆಪಿ ಜಯಗಳಿಸಲು ಸುಲಭ ದಾರಿಯಾಯಿತು.

* ಮೈತ್ರಿ ಸರ್ಕಾರದ ನಾಯಕರು ಸುಮಲತಾ ಎಂಟ್ರಿಯನ್ನು ನಿರ್ಲಕ್ಷ್ಯಿಸಿತ್ತು. ಸುಮಲತಾ ಸ್ಪರ್ಧೆಯಿಂದಾಗುವ ನಷ್ಟವನ್ನ ಲೆಕ್ಕ ಹಾಕದೇ ಇದ್ದರು. ಅಲ್ಲದೆ ಸುಮಲತಾ ನಿಂದನೆ ಮಾಡಿ ಮೈತ್ರಿ ಪಡೆ ನಾಯಕರು ಕೆಟ್ಟಿದ್ದರು. ಮಾಯಾಂಗನೆ, ಗಂಡ ಸತ್ತವರು ಹೇಳಿಕೆಗಳಿಗೆ ಎಲ್ಲ ಕಡೆ ಆಕ್ರೋಶ ವ್ಯಕ್ತವಾಗಿತ್ತು. ಈ ಎಲ್ಲಾ ಕಾರಣಗಳು ಕಮಲದ ಜಯಕ್ಕೆ ದಾರಿ ಮಾಡಿಕೊಟ್ಟಿತ್ತು.

* ಮಂಡ್ಯದ ಅಖಾಡ ಗಲಾಟೆ ಮೇಲೆ ಗಲಾಟೆ, ಮೈತ್ರಿಗೆ ಬಿಜೆಪಿ ನಿತ್ಯ ತರಾಟೆ ನಡೆಯುತ್ತಿತ್ತು. ಜಿಲ್ಲೆಯ ರಾಜಕಾರಣದ ಬಗ್ಗೆ ಮೈತ್ರಿ ನಾಯಕರು ಹೆಚ್ಚು ತಲೆಕೆಡಿಸಿಕೊಂಡಿದ್ದರು. ಮೈತ್ರಿ ಧರ್ಮ ಪಾಲನೆಯಾಗಿಲ್ಲ ಎಂಬ ಕೂಗು ಬೇರೆ ಕ್ಷೇತ್ರಗಳಿಗೆ ಹರಡಿದ್ದು ಕೂಡ ಕಾರಣವಾಗಿದೆ.

* ಮಂಡ್ಯದಲ್ಲಿ ಸುಮಲತಾ ಟೀಕಿಸಲು ಹೋಗಿ ಮೂರು ತಿಂಗಳು ಮನರಂಜನೆ ನೀಡಿದ್ದರು. ಈ ಪುಕ್ಕಟ್ಟೆ ಮನರಂಜನೆಯಿಂದ ನಿಖಿಲ್‍ಗೆ, ಸರ್ಕಾರಕ್ಕೆ ಫುಲ್ ಡ್ಯಾಮೇಜ್ ಆಗಿದೆ. ಸರ್ಕಾರದ ಆಡಳಿತ ಯಂತ್ರ ಮೂರು ತಿಂಗಳು ಸಂಪೂರ್ಣ ನಿಂತಿತ್ತು. ಸೀಟು ಹಂಚಿಕೆಗಾಗಿ ಮೈತ್ರಿ ನಾಯಕರು ಮಾಡಿದ ಸರ್ಕಸ್ ಮಾಡುತ್ತಿದ್ದರು. `ಯುದ್ಧ ಕಾಲೇ ಶಸ್ತ್ರಾಭ್ಯಾಸ’ ಎನ್ನುವಂತೆ ಕಡೆ ಗಳಿಗೆಯಲ್ಲಿ ಕ್ಷೇತ್ರ ಹಂಚಿಕೆ ಮಾಡಿದ್ದು ಬಿಜೆಪಿಗೆ ಪ್ಲಸ್ ಆಗಿದೆ.

* ಮೈತ್ರಿ ಸೀಟು ಫೈನಲ್ ಆದರೂ ಕ್ಷೇತ್ರಗಳನ್ನ ಸಮರ್ಪಕವಾಗಿ ಹಂಚಿಕೊಳ್ಳಲಿಲ್ಲ. ಸೀಟು ಕೊಡಬೇಕು ಎಂಬ ಸೂತ್ರಕ್ಕೆ ಗಂಟುಬಿದ್ದು ಕ್ಷೇತ್ರ ಮಾರ್ಕ್ ಮಾಡಲು ಎಡವಿದ್ದರು. ಇದೇ ಕ್ಷೇತ್ರ ಬೇಕು ಎಂದು ಮೈತ್ರಿ ನಾಯಕರು ಹಠಕ್ಕೆ ಬಿದ್ದಿದ್ದರು. ಮೈಸೂರಿಗಾಗಿ ಸಿದ್ದರಾಮಯ್ಯ, ಚಿಕ್ಕಬಳ್ಳಾಪುರಕ್ಕಾಗಿ ಮೊಯ್ಲಿ ಹಟಕ್ಕೆ ಬಿದ್ದಿದ್ದು ಕೂಡ ರಾಜ್ಯದಲ್ಲಿ ಇಂದು ಕಮಲ ಅರಳಲು ಕಾರಣವಾಯಿತು.

* ಮೈತ್ರಿ ನಾಯಕರು ಗೌಡರ ಕ್ಷೇತ್ರ ಆಯ್ಕೆಯಲ್ಲಿ ಸರ್ಕಸ್ ಮಾಡಿದ್ದರು. ಕೊನೆಯವರೆಗೂ ಪರದಾಡಿ ಕಡೆಗೆ ತುಮಕೂರಿಗೆ ಶಿಫ್ಟ್ ಆಗಿದ್ದರು. ಬೆಂಗಳೂರು ಉತ್ತರವನ್ನು ಕೊನೆ ಕ್ಷಣದಲ್ಲಿ ಕೈಗೆ ಬಿಟ್ಟುಕೊಟ್ಟಿದ್ದರು. ಹಾಲಿ ಸಂಸದರ ಕ್ಷೇತ್ರವನ್ನ ದೇವೇಗೌಡರಿಗೆ ಕಾಂಗ್ರೆಸ್ ಬಿಟ್ಟುಕೊಟ್ಟಿತ್ತು. ಗೌಡರ ಎದುರು ತೊಡೆತಟ್ಟಿ ಬಳಿಕ ಸುಮ್ಮನಾಗಿ ಒಳ ಏಟು ಕೊಟ್ಟಿತ್ತು.

* ಪ್ರಧಾನಿ ನರೇಂದ್ರ ಮೋದಿಗೆ ಪದೇ ಪದೇ ಹಿಗ್ಗಾಮುಗ್ಗಾ ಬೈಯುತ್ತಿದ್ದರು. ಪ್ರಚಾರದ ಉದ್ದಕ್ಕೂ ಏಕವಚನ, ದುಬಾರಿ ಮಾತುಗಳನ್ನಾಡಿದ್ದರು. ಈ ಮಧ್ಯೆ ಕಾಂಗ್ರೆಸ್‍ನಲ್ಲೇ ನಾಯಕರುಗಳ ಒಳ ಜಗಳ ಸೃಷ್ಟಿಯಾಗಿತ್ತು. ಡಿಕೆಶಿ ಹಾಗೂ ಪರಂ ಬಣ, ಸಿದ್ದರಾಮಯ್ಯ ಹಾಗೂ ದಿನೇಶ್ ಬಣಗಳ ಒಳ ಜಗಳ ಆರಂಭವಾಗಿತ್ತು. ಆದರೆ ಮೈತ್ರಿ ನಾಯಕರು ದೊಡ್ಡದಾಗಿ ಒಂದಾಗಿ ಪೋಸ್ ಕೊಟ್ಟರು. ಇದು ತಳಮಟ್ಟದಲ್ಲಿ ಸಾಧ್ಯವಾಗಲೇ ಇಲ್ಲ. ಜೆಡಿಎಸ್, ಕಾಂಗ್ರೆಸ್ ಮೈತ್ರಿ ಕಾರ್ಯಕರ್ತರು ಒಂದಾಗದಿರುವುದು ಕೂಡ ಬಿಜೆಪಿ ಗೆಲುವಿಗೆ ರೀಸನ್ ಆಗಿದೆ.

* ರೆಸಾರ್ಟ್ ಪಾಲಿಟಿಕ್ಸ್ ವೇಳೆ ಕಾಂಗ್ರೆಸ್ ಶಾಸಕರ ಕಚ್ಚಾಟ, ಬಳ್ಳಾರಿ ಸೇರಿ ಮೂರ್ನಾಲ್ಕು ಕ್ಷೇತ್ರಗಳ ಮೇಲೆ ಪರಿಣಾಮ ಬೀರಿತ್ತು. ಕಾಂಗ್ರೆಸ್‍ಗೆ ಹಲವು ಕ್ಷೇತ್ರಗಳಲ್ಲಿ ಅತೃಪ್ತ ಶಾಸಕರ ಕಾಟ ಹೆಚ್ಚಾಗಿತ್ತು. ಬೆಳಗಾವಿ, ಚಿಕ್ಕೋಡಿಯಲ್ಲಿ ರಮೇಶ್ ಜಾರಕಿಹೊಳಿ ಬಹಿರಂಗ ಸಮರ ಸಾರಿದ್ದರು. ಅಭ್ಯರ್ಥಿ ಆಯ್ಕೆಗಾಗಿ ಹೆಚ್ಚು ಗೊಂದಲ ಸೃಷ್ಟಿ ಮಾಡಿಕೊಳ್ಳದೇ ಇದ್ದಿದ್ದರು. ಬೆಂಗಳೂರು ದಕ್ಷಿಣ ಹೊರತುಪಡಿಸಿ ಉಳಿದ ಕಡೆ ಸುಲಭವಾಗಿ ಅಭ್ಯರ್ಥಿ ಆಯ್ಕೆಯಾಗಿದ್ದರು.

* ಟಿಕೆಟ್ ತಪ್ಪಿದ ಆಕಾಂಕ್ಷಿಗಳನ್ನ ಬಿಎಸ್ ಯಡಿಯೂರಪ್ಪ ಅವರು ತಮ್ಮ ವಿಶ್ವಾಸಕ್ಕೆ ತೆಗೆದುಕೊಂಡಿದ್ದರು. ಉಮೇಶ್ ಕತ್ತಿ ವಿಚಾರದಲ್ಲಿ ಬಿಎಸ್‍ವೈ ಜಾಣ ಹೆಜ್ಜೆ ಇಟ್ಟಿದ್ದು ಕೂಡ ಇಲ್ಲಿ ಪ್ಲಸ್ ಆಗಿದೆ. ಮೋದಿ ಅಲೆ ಕಾರಣ ಹಾಲಿ ಸಂಸದರಿಗೆಲ್ಲಾ ಬಿಜೆಪಿ ಟಿಕೆಟ್ ಕೊಟ್ಟಿತ್ತು. ಚಾಮರಾಜನಗರ, ಚಿಕ್ಕೋಡಿ, ಬೆಂಗಳೂರು ದಕ್ಷಿಣದಲ್ಲಿ ಹೊಸ ಪ್ರಯೋಗ ಮಾಡಲಾಗಿತ್ತು. ಲೋಕ ಪ್ರಚಾರ ವೇಳೆ ಬಿಜೆಪಿ ವಿನೂತನ ಅಸ್ತ್ರ ಪ್ರಯೋಗ ಮಾಡಲಾಗಿತ್ತು. ಒಂದು ವೋಟು ಎರಡು ಸರ್ಕಾರ ಎಂಬ ಕ್ಯಾಂಪೇನ್ ನಡೆಸಿದ್ದು ಬಿಜೆಪಿ ಗೆಲುವಿಗೆ ಕಾರಣ ಎನ್ನಬಹುದು.

* ಮೋದಿ ಅಲೆಯನ್ನ ಹರಡಲು ಬಿಜೆಪಿ ಪ್ಲ್ಯಾನ್ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ಕೇಂದ್ರ ಭಾಗದಲ್ಲಿ ಸೇರಿ 7 ಜಾಥಾಗಳನ್ನ ನಡೆಸಿದ್ದರು. ಪ್ರಚಾರದ ವೇಳೆ ರಾಜ್ಯ ಮೈತ್ರಿ ಸರ್ಕಾರವನ್ನ ಮೋದಿ ಮಾತುಗಳಲ್ಲೇ ತಿವಿದಿದ್ದರು. ಕುಮಾರಸ್ವಾಮಿ, ದೇವೇಗೌಡರ ಕುಟುಂಬವನ್ನ ಪ್ರಧಾನಿ ಮೋದಿ ಟೀಕಿಸಿದ್ದರು.

* ರಾಜ್ಯ ಬಿಜೆಪಿ ಬಿಎಸ್‍ವೈ ನೇತೃತ್ವದಲ್ಲಿ ಒಟ್ಟಾಗಿ ಪ್ರಚಾರ ಮಾಡಿದ್ದರು. ಮೋದಿ ಒಂದೆಡೆ, ಬಿಎಸ್‍ವೈ ಇನ್ನೊಂದೆಡೆ ಡಬಲ್ ಪ್ರಚಾರ ನಡೆಸಿದ್ದರು. ಅಲ್ಲದೆ ಪೇಜ್ ಪ್ರಮುಖ್ ಸಂಘಟನೆಯನ್ನ ಮುಂದುವರಿಸಿಕೊಂಡು ಬಂದಿದ್ದು, ವಿಧಾನಸಭೆ ಮಾದರಿಯಲ್ಲೇ ಲೋಕಸಭೆ ಚುನಾವಣೆ ಎದುರಿಸಿರುವುದು ಬಿಜೆಪಿ ಪಕ್ಷ ಇಂದು ರಾಜ್ಯದಲ್ಲಿ ಗೆಲ್ಲಲು ಪ್ರಮುಖ ಕಾರಣವಾಗಿದೆ.