Saturday, 19th October 2019

Recent News

ಸಿಎಂ ವಾಸ್ತವ್ಯ ಮಾಡಿದ್ದ ಗ್ರಾಮಗಳ ಸ್ಥಿತಿ ಈಗ ಹೇಗಿದೆ? ಎಷ್ಟು ಭರವಸೆ ಪೂರ್ಣವಾಗಿದೆ? – ಕಂಪ್ಲೀಟ್ ವರದಿ ಓದಿ

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ಮತ್ತೆ ಗ್ರಾಮವಾಸ್ತವ್ಯ ಮಾಡಲು ಹೊರಟಿದ್ದಾರೆ. ಆದರೆ ಅದಕ್ಕೂ ಮುನ್ನ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ನಡೆಸಿದ್ದು, ಸಿಎಂ ಅವರು ಈ ಹಿಂದೆ ಗ್ರಾಮವಾಸ್ತವ್ಯ ಮಾಡಿದ್ದ ಗ್ರಾಮಗಳ ಸ್ಥಿತಿ ಗತಿಯ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

ಜೆಟ್ಟಿದೊಡ್ಡಿ(ರಾಮನಗರ)
2008ರಲ್ಲಿ ರಾಮನಗರದ ಜೆಟ್ಟಿದೊಡ್ಡಿ, ಕನಕಪುರ ಗ್ರಾಮಕ್ಕೆ ಭೇಟಿ ಕೊಟ್ಟ ಸಿಎಂ, ಚಿಕ್ಕ ತಾಯಮ್ಮ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದರು. ಅಂದು ಗ್ರಾಮವಾಸ್ತವ್ಯ ಮಾಡಿದ್ದ ಸಿಎಂ ಅವರು ಕೊಟ್ಟ ಮಾತಿನಲ್ಲಿ ಬೋರ್ ವೆಲ್ ಹಾಗೂ ಅಂಗನವಾಡಿ ಕೇಂದ್ರದ ಬೇಡಿಕೆ ಈಡೇರಿದ್ದು, ಸಮುದಾಯ ಭವನ ಹಾಗೂ ಸೇತುವೆ ಇದೂವರೆಗೂ ನಿರ್ಮಾಣವಾಗಿಲ್ಲ.

ಬೇವುಕಲ್ಲು ಕೊಪ್ಪಲು(ಮಂಡ್ಯ)
2016ರಲ್ಲಿ ಮಂಡ್ಯ ತಾಲೂಕಿನ ಬೇವುಕಲ್ಲು ಕೊಪ್ಪಲು ಗ್ರಾಮದ ಬಸವೇಗೌಡರ ಮನೆಯಲ್ಲಿ ಕುಮಾರಸ್ವಾಮಿ ವಾಸ್ತವ್ಯ ಹೂಡಿದ್ದರು. ಆ ಸಂದರ್ಭದಲ್ಲಿ ಗ್ರಾಮದ ಜನತೆ ತಮ್ಮೂರಿಗೆ ರಸ್ತೆ, ಆಸ್ಪತ್ರೆ, ಸಮುದಾಯ ಭವನ, ಅಂಗನವಾಡಿಗೆ ಸ್ವಂತ ಕಟ್ಟಡ, ಸ್ಮಶಾನ ಬೇಕೆಂದು ಬೇಡಿಕೆ ಇಟ್ಟಿದ್ದರು. ಭರವಸೆಗಳನ್ನು ಈಡೇರಿಸುವುದಾಗಿ ಹೇಳಿ ಹೋಗಿದ್ದ ಸಿಎಂ, ಗ್ರಾಮದ 1ರಿಂದ 1.5 ಕಿ.ಮೀಟರ್ ಕಾಂಕ್ರಿಟ್ ರಸ್ತೆ ಹಾಗೂ ಚರಂಡಿ ನಿರ್ಮಾಣ, ಜೊತೆಗೆ 5 ಕಿರುನೀರು ಸರಬರಾಜು ಟ್ಯಾಂಕ್‍ಗಳು, ರಸ್ತೆ ಹಾಗೂ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಅದನ್ನು ಹೊರತುಪಡಿಸಿ ಬೇರಾವ ಬೇಡಿಕೆಗಳ ಈಡೇರಿಕೆಗೆ ಪ್ರಯತ್ನಗಳೇ ನಡೆಯಲಿಲ್ಲ. ಆರಂಭದಲ್ಲಿ ಈ ಸೌಲಭ್ಯ ಕಲ್ಪಿಸಲು ಜಾಗ ನೋಡಲಾಯಿತು. ಆದರೆ, ಗ್ರಾಮದಲ್ಲಿ ಸರ್ಕಾರಿ ಜಾಗ ಇಲ್ಲವೆಂದು ಹೇಳಿ ಸುಮ್ಮನಾಗಿಬಿಟ್ಟರು ಎಂದು ಗ್ರಾಮಸ್ಥರು ಹೇಳಿದ್ದಾರೆ.

ಬಳಕವಾಡಿ(ಮಂಡ್ಯ)
ಮಳವಳ್ಳಿ ತಾಲೂಕಿನ ಬೆಳಕವಾಡಿ ಹೋಬಳಿಯ ಹೊನಗನಹಳ್ಳಿ ಗ್ರಾಮಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಂದು ವಾಸ್ತವ್ಯ ಹೂಡಿದಾಗ ಜನರಲ್ಲಿ ಮಹದಾಸೆ ಚಿಗುರೊಡೆದಿತ್ತು. ಜೊತೆಗೆ ಅದೇ ದಿನ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದಾಗ ಸ್ವರ್ಗಕ್ಕೆ ಮೂರೇ ಗೇಣು ಎನಿಸಿತ್ತು. ಆದರೆ, ಅಂದು ಚಿಗುರೊಡೆದ ಆಸೆ ಮರ ಆಗುವುದಿರಲಿ, ಪುಟ್ಟ ಗಿಡವಾಗುವ ಮೊದಲೇ ಬಾಡಿಹೋಗಿತ್ತು.

ಗ್ರಾಮದಲ್ಲಿ ಪರಿಶಿಷ್ಠರು ಹೆಚ್ಚಾಗಿದ್ದಾರೆ. ಲಿಂಗಾಯತರು, ಒಕ್ಕಲಿಗರು, ವಿಶ್ವಕರ್ಮರು ಸೇರಿ ಸುಮಾರು 1400-1500 ಜನರಿದ್ದಾರೆ. ವಸತಿಹೀನರೆ ಹೆಚ್ಚಾಗಿರುವ ಈ ಗ್ರಾಮದ 150 ಕುಟುಂಬಗಳಿಗೆ ಸರ್ಕಾರ ಹಿಂದೆಯೇ ನಿವೇಶನ ನೀಡಿದೆ. ಆದರೆ, ಕೂಲಿ ಮಾಡಿಕೊಂಡು ಬದುಕುತ್ತಿರುವ ಜನತೆಗೆ ಸ್ವಂತ ಸೂರು ಕಟ್ಟಿಕೊಳ್ಳಲಾಗದ ಪರಿಣಾಮ ನಿವೇಶನಗಳಲ್ಲಿ ಗಿಡಗಂಟೆ ಬೆಳೆದು ಕಾಡಿನಂತಾಗಿದೆ.

ಗ್ರಾಮವಾಸ್ತವ್ಯ ವೇಳೆ ಜನರ ಬೇಡಿಕೆಯಂತೆ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಅಡಿಗಲ್ಲು ಹಾಕಿದ್ದರು. ಅವರ ಬರುವಿಕೆ, ಹೋಗುವಿಕೆಗಾಗಿ ಕೆಲವೆಡೆ ಬೀದಿ ದೀಪ, ರಸ್ತೆಗೆ ಡಾಂಬರು ಬಂತು. ಆ ವೇಗ ಕಂಡ ಜನತೆ ತಮ್ಮೂರಿಗೆ ಸ್ವರ್ಗವೇ ಇಳಿಯಲಿದೆ ಎಂಬ ಆಸೆಯಿಂದ ನಿವೇಶನ ಇರುವವರಿಗೆ ಗುಂಪು ವಸತಿ ಯೋಜನೆಯಡಿ ಮನೆ ಕಟ್ಟಿಸಿಕೊಡಿ ಎಂದರು.

ನಾಯಕ ಜನಾಂಗದವರು ರಾಮಮಂದಿರ ಕೇಳಿಕೊಂಡರು. ಪ್ರಮುಖವಾಗಿ ದತ್ತು ಗ್ರಾಮವಾದ ತಮ್ಮೂರನ್ನು ಕಂದಾಯ ಗ್ರಾಮವನ್ನಾಗಿ ಮಾಡಿಕೊಡುವಂತೆ ಬೇಡಿಕೆ ಇಟ್ಟರು. ಆದರೆ, ಅಂಬೇಡ್ಕರ್ ಭವನ ಶಿಲಾನ್ಯಾಸ ಮಾಡಿ ಅಮೃತ ಶಿಲೆಯಲ್ಲಿ ಹೆಸರು ಕೆತ್ತಿಸಿಕೊಂಡಿದ್ದು ಬಿಟ್ಟರೆ ಉಳಿದ ಯಾವ ಕೆಲಸಗಳು ಆಗಲಿಲ್ಲ. ಗ್ರಾಮವಿರಲಿ ಮಸಣಯ್ಯನ ಮನೆ ಚಿತ್ರಣವೂ ಒಂದಿನಿತು ಹೊಸತಾಗಲಿಲ್ಲ.

ಈ ಹಿನ್ನೆಲೆಯಲ್ಲಿ ಗ್ರಾಮಸ್ಥರನ್ನು ವಾಸ್ತವ್ಯ ಅಗತ್ಯವೇ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಯಾವ ಪುರುಷಾರ್ಥಕ್ಕೆ ವಾಸ್ತವ್ಯ ಮಾಡಬೇಕೆಂದು ಕಿಡಿಕಾರುತ್ತಾರೆ. ನನ್ನ ಕುಟುಂಬ ಸದಸ್ಯರಿಗೆ ಸರ್ಕಾರಿ ನೌಕರಿ ಕೊಡಿಸುವ ಭರವಸೆ ನೀಡಿ, ಕೊಡಿಸಲಿಲ್ಲ. ಒಂದು ದಿನ ಉಳಿದುಕೊಳ್ಳಲು ನಮ್ಮ ಮನೆಯನ್ನು ದೊಡ್ಡ ಮಹಲಿನಂತೆ ಮಾಡಿ ಹೋಗಿದ್ದೇ ದೊಡ್ಡ ಸಾಧನೆ ಎಂದು ಗ್ರಾಮಸ್ಥ ಮಸಣಯ್ಯ ಗರಂ ಆಗಿದ್ದಾರೆ.

ಸಿಎಂ ಗ್ರಾಮವಾಸ್ತವ್ಯ ಹಿನ್ನೆಲೆಯಲ್ಲಿ ಶ್ರೀನಿವಾಸಶೆಟ್ಟಿ ಅವರ ಹಳೆ ಹಂಚಿನ ಹರಕು, ಮುರುಕಿನ ಮನೆಯನ್ನು ಚಕಾಚಕ್ ಬದಲಿಸಿದ್ದರು. ಚಿಕ್ಕದಾಗಿದ್ದ ಮನೆ ಗೋಡೆಯನ್ನು 3 ಅಡಿ ಎತ್ತರಿಸಲಾಗಿತ್ತು. ಮನೆ ಛಾವಣಿಗೆ ಹಸಿ ಮರದ ರೀಪರ್‍ಗಳನ್ನು ಹಾಕಿ, ಒಂದಷ್ಟು ಹಂಚುಗಳನ್ನು ತಂದು ಹಾಕಿದ್ದರು. ಮನೆಯ ಹಿಂಭಾಗ ಶೌಚಗೃಹ, ಸ್ನಾನ ಗೃಹ ನಿರ್ಮಿಸಿದ್ದರು. ಪಂಚಾಯ್ತಿ ವತಿಯಿಂದ ನಲ್ಲಿ ನೀರಿನ ಸಂಪರ್ಕ ಕಲ್ಪಿಸಿದ್ದರು. ವಾಸ್ತವ್ಯದ ಕಾರಣ ಮನೆ ದುರಸ್ತಿಗಾಗಿ 5 ದಿನ ಕುಟುಂಬದವರು ಬೇರೆಯವರ ಮನೆಯಲ್ಲಿ ಮಲಗಬೇಕಾಯಿತು.

ಸದ್ಯ ಹಸಿ ಮರದ ರೀಪರ್‍ಗಳು ಕುಟ್ಟೆ ಹಿಡಿದು ಹಾಳಾಗಿ ಹೋಗಿವೆ. ಯಾವುದೇ ವಸತಿ ಯೋಜನೆ ಅಡಿ ಮನೆ ಕಟ್ಟಲು ಸಹಾಯ ಧನ ಸಿಕ್ಕಿಲ್ಲ. ತಾವೇ ದುಡಿದು ಹಳೆ ಮನೆಯನ್ನು ಕೊಂಚ ವಿಸ್ತರಿಸಿಕೊಂಡಿದ್ದಾರೆ. ಹಿರಿಯ ಮಗ 10ನೇ ತರಗತಿ ಮುಗಿಸಿ, ಕೂಲಿ ಮಾಡಿಕೊಂಡಿದ್ದಾನೆ. ಕಿರಿಯ ಮಗ ಬೆಂಗಳೂರಿನಲ್ಲಿ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡಿದ್ದಾನೆ. ಶ್ರೀನಿವಾಸಶೆಟ್ಟಿ ಹೇಮಗಿರಿ ಸೊಸೈಟಿ ಅಲ್ಲಿ ಅಟೆಂಡರ್ ಕೆಲಸ ಮುಂದುವರಿಸಿದ್ದಾರೆ.

ಶ್ರೀನಿವಾಸಶೆಟ್ಟಿ ಮಗಳು ಲೀಲಾವತಿ ಮದುವೆಯಾಗಿ, ಮಗು ಇತ್ತು. ತಮಗೊಂದು ಚಿಲ್ಲರೆ ಅಂಗಡಿ ಹಾಕಿ ಕೊಡುವಂತೆ ಕೋರಿದಾಗ ಕುಮಾರಸ್ವಾಮಿ ಒಪ್ಪಿದ್ದರಲ್ಲದೆ, ಮಗುವಿನ ಶಿಕ್ಷಣಕ್ಕೆ ಆರ್ಥಿಕ ಸಹಾಯ, ಶೆಟ್ಟಿಯವರ ಮಕ್ಕಳಾದ ವೆಂಕಟೇಶ್, ರವಿ ವಿದ್ಯಾಭ್ಯಾಸಕ್ಕೆ ನೆರವು ನೀಡುವುದಾಗಿ ಹೇಳಿದ್ದರು. ಜೊತೆಗೆ ಜಮೀನಿನ ಬಳಿ ಒಂದು ಮನೆ ನಿರ್ಮಾಣ, ಕೊಳವೆ ಬಾವಿ ಕೊರೆಸಿಕೊಡುವ ಹಾಗೂ 2.5 ಎಕರೆ ಸರ್ಕಾರಿ ಜಮೀನು ಮಂಜೂರು ಮಾಡುವ ಭರವಸೆ ನೀಡಿದ್ದರು. ಆದರೆ ಯಾವುದೂ ಈಡೇರಿಲ್ಲ. ಬೆಂಗಳೂರಿಗೆ ಬರುವಂತೆ ನಮ್ಮನ್ನು ಕರೆದರು. ಆದರೆ ಹೋಗಿ ಹೇಗೆ ಭೇಟಿ ಮಾಡಬೇಕೆಂದು ತಿಳಿಯದೆ ಹೋಗಲಿಲ್ಲ ಎಂದು ಶ್ರೀನಿವಾಸ್ ಶೆಟ್ಟಿ ಪತ್ನಿ ನಾಗಮ್ಮ ಕುಮಾರಸ್ವಾಮಿ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ.

ವಾಸ್ತವ್ಯದ ವೇಳೆ 3 ಮಂಚ, ಹಾಸಿಗೆ, ಕುರ್ಚಿ, ಫ್ಯಾನ್, ಕೂಲರ್ ಮೊದಲಾದ ವಸ್ತುಗಳನ್ನು ತಂದಿದ್ದರು. ಒಂದು ಮಂಚವನ್ನು ಮಾತ್ರ ಮನೆಯೊಳಗೆ ಹಾಕಲಾಗಿತ್ತು. ಎಲ್ಲವೂ ತಮಗೆ ಉಳಿದುಕೊಳ್ಳುತ್ತವೆ ಎಂದು ಕುಟುಂಬದವರು ಖುಷಿ ಪಟ್ಟಿದ್ದರು. ಆದರೆ, ಎರಡೇ ದಿನಕ್ಕೆ ಅಧಿಕಾರಿ, ಗುತ್ತಿಗೆದಾರರು ಬಾಡಿಗೆ ತಂದಿದ್ದೇವೆಂದು ಹೇಳಿ ಎಲ್ಲವನ್ನು ವಾಪಸ್ ತೆಗೆದುಕೊಂಡು ಹೋದರು. ಗ್ರಾಮಸ್ಥರ ಸಲಹೆ ಪರಿಣಾಮ ಮಂಚ, ಹಾಸಿಗೆ, ದಿಂಬು ಹೊದಿಕೆ, ಸೊಳ್ಳೆ ಪರದೆ ಉಳಿದುಕೊಂಡವು ಎಂದು ಶ್ರೀನಿವಾಸ್ ಶೆಟ್ಟಿ ಪುತ್ರ ವೆಂಕಟೇಶ್ ಹೇಳಿದ್ದಾರೆ.

ದೊಡ್ಡಕಾನ್ಯ(ಮೈಸೂರು)
2007 ಡಿಸೆಂಬರ್ ಸಿಎಂ ಅವರು ಮೈಸೂರಿನ ದೊಡ್ಡಕಾನ್ಯ, ದಡದಹಳ್ಳಿ, ಮೇದರ್ ಬ್ಲಾಕ್ ಗ್ರಾಮಕ್ಕೆ ಭೇಟಿ ನಿಡಿದ್ದರು. ದಲಿತರು, ಸ್ಲಂವಾಸಿಗಳ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದರು. ಸದ್ಯ ದಡದಹಳ್ಳಿಯಲ್ಲಿ ಸಾರಿಗೆ ವ್ಯವಸ್ಥೆ, ಜನರಿಗೆ ಬೇಕಾದ ಮೂಲಸೌಕರ್ಯ ದೊರಕಿದೆ. ಆದರೆ ಮೇದರ್ ಬ್ಲಾಕ್‍ನಲ್ಲಿ ವಸತಿ ಸೌಲಭ್ಯ ಇನ್ನೂ ಈಡೇರಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಹೊನ್ನಗೊಂಡನಹಳ್ಳಿ(ತುಮಕೂರು)
2006 ಡಿಸೆಂಬರ್ 21ರಂದು ಸಿಎಂ ಅವರು ತುಮಕೂರು ಜಿಲ್ಲೆಯ ಹೊನ್ನಗೊಂಡನಹಳ್ಳಿ, ಶಿರಾ ಗ್ರಾಮಕ್ಕೆ ಭೇಟಿ ನೀಡಿ ಚಿಕ್ಕಣ್ಣ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದರು. ಈ ವೇಳೆ ಸಿಎಂ ಅವರು ಕೊಟ್ಟ ಮಾತಿನಲ್ಲಿ ಗೊಲ್ಲರ ಹಟ್ಟಿಗೆ ಮನೆಗಳ ಭಾಗ್ಯ, ರಸ್ತೆ, ಶಾಲೆ ಅಭಿವೃದ್ಧಿಯಷ್ಟೇ ಈಡೇರಿದ್ದು, ಮದಲೂರು ಕೆರೆಗೆ ನೀರು, ಆರೋಗ್ಯ ಕೇಂದ್ರ ಮಂಜೂರು ಹಾಗೂ ಪಶು ಆಸ್ಪತ್ರೆ ಸ್ಥಾಪನೆಯಾಗಿಲ್ಲ.

ಇದೇ ಜಿಲ್ಲೆಯ ಪುರಾ ಮತ್ತು ತುರುವೇಕೆರೆ ಗ್ರಾಮಕ್ಕೆ ಮತ್ತೆ ಭೇಟಿ ನೀಡಿರುವ ಸಿಎಂ ಅವರು ಇಲ್ಲಿನ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದರು. ಈ ವೇಳೆ ನೀಡಿದ ಭರವಸೆಯಲ್ಲಿ ಶಾಲೆ ಅಭಿವೃದ್ಧಿ ಹಾಗೂ ವೃದ್ಧಾಪ್ಯವೇತನ ದೊರಕಿದೆ. ಆದರೆ ಹೇಮಾವತಿ ನಾಲೆ ಆಧುನೀಕರಣ ಇನ್ನೂ ಆಗಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ರಾಜವಂತಿಯ ಚಿಕ್ಕನಾಯಕನಹಳ್ಳಿ, ಪಾವಗಡದ ನಿವೃತ್ತ ಶಿಕ್ಷಕ ಬೋರಣ್ಣ ಮನೆಯಲ್ಲಿ ನೆಲೆಸಿದ್ದ ಕುಮಾರಸ್ವಾಮಿ ಕೊಟ್ಟ ಮಾತಿನಲ್ಲಿ ರಸ್ತೆ ನಿರ್ಮಾಣ ಕಾರ್ಯವಷ್ಟೇ ಈಡೇರಿದ್ದು, ಇನ್ನೂ ಶಾಲೆ ಅಭಿವೃದ್ಧಿಯಾಗಿಲ್ಲ. ಅಲ್ಲದೆ ಬಸ್ ಸಂಚಾರ ವ್ಯವಸ್ಥೆ ಕೂಡ ನೆರವೇರಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಸೋದೇನಹಳ್ಳಿ(ತುಮಕೂರು)
2007ರ ತುಮಕೂರು ಜಿಲ್ಲೆಯ ಸೋದೇನಹಳ್ಳಿ ಹಾಗೂ ಮಧುಗಿರಿ ಗ್ರಾಮಕ್ಕೆ ಭೇಟಿ ನೀಡಿದ ಸಿಎಂ ಅಲ್ಲಿನ ಅಂಜನಮ್ಮ ನಿವಾಸದಲ್ಲಿ ತಂಗಿದ್ದರು. ಸದ್ಯ ಇಲ್ಲಿಯ ಜನರ ಯಾವ ಬೇಡಿಕೆಯೂ ಈಡೇರಿಲ್ಲ. ಸಿಎಂ ಅವರು ಪದವಿಪೂರ್ವ ಕಾಲೇಜು, ಪಶು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಅಂಜನಮ್ಮಗೆ ಸೈಟ್ ನೀಡುವುದಾಗಿ ಭರವಸೆ ಕೊಟ್ಟಿದ್ದರು. ಆದರೆ ಇದೂವರೆಗೂ ಯಾವುದೇ ಕೆಲಸವಾಗಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಒಟ್ಟಿನಲ್ಲಿ ಎಚ್‍ಡಿ ಕುಮಾರಸ್ವಾಮಿ ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಕೈಗೊಂಡಿದ್ದ ಗ್ರಾಮ ವಾಸ್ತವ್ಯ ತುಮಕೂರು ಜಿಲ್ಲೆಯಲ್ಲಂತೂ ಟೋಟಲಿ ಪ್ಲಾಪ್ ಶೋ ಎನ್ನುವಂತಾಗಿದೆ.

ಬಡಗಲಮೋಳೆ(ಚಾಮರಾಜನಗರ)
2007ರಲ್ಲಿ ಚಾಮರಾಜನಗರದ ಬಡಗಲಮೋಳೆಯ ರಂಗಶೆಟ್ಟಿ ನಿವಾಸದಲ್ಲಿ ಸಿಎಂ ಅವರು ವಾಸ್ತವ್ಯ ಹೂಡಿದ್ದರು. ಆ ಬಳಿಕ ಇಲ್ಲಿ ಕೊಟ್ಟ ಮಾತಿನಂತೆ ಆಶ್ರಯ ಯೋಜನೆಯಡಿ ಮನೆ ನಿರ್ಮಾಣವಾಗಿದೆ. ಆದರೆ ಇದೀಗ ಅದು ಬಿರುಕು ಬಿಟ್ಟಿದೆ. ಅಂಗನವಾಡಿ ಕೇಂದ್ರ ಹಾಗೂ ಮೂಲಸೌಕರ್ಯ ವ್ಯವಸ್ಥೆ ಈಡೇರಿದೆ. ಆದರೆ ಇನ್ನೂ ಸಮುದಾಯ ಭವನ ನಿರ್ಮಾಣವಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕೊಂಬುಡಿಕ್ಕಿ(ಚಾಮರಾಜನಗರ)
2007ರ ಸೆಪ್ಟೆಂಬರ್ 11ರಂದು ಚಾಮರಾಜನಗರದ ಕೊಂಬುಡಿಕ್ಕಿ, ಮಲೆಮಹದೇಶ್ವರಕ್ಕೆ ಭೇಟಿ ಕೊಟ್ಟ ಸಿಎಂ, ಸೋಲಿಗ ಚಿನ್ನಪ್ಪಿ ನಿವಾಸದಲ್ಲಿ ನೆಲೆಸಿದ್ದರು. ಈ ವೇಳೆ ಕೊಟ್ಟ ಮಾತಿನಲ್ಲಿ ಸೇತುವೆ ನಿರ್ಮಾಣ, ಡಾಂಬರು ರಸ್ತೆ, ಬಸ್ ಸೌಲಭ್ಯ ಹಾಗೂ ಹಳ್ಳಕ್ಕೆ ಸೇತುವೆ ಸೌಲಭ್ಯ ಈಡೇರಿದೆ. ಆದರೆ ಸೋಲಿಗರ ಮನೆ ರಿಪೇರಿ ಕಾರ್ಯ ಇನ್ನೂ ಆಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಬೆಳವಾಡಿ(ಚಿಕ್ಕಮಗಳೂರು)
2006ರ ಅಕ್ಟೋಬರ್ 17ರಂದು ಸಿಎಂ ಅವರು ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿ ಗ್ರಾಮಕ್ಕೆ ತೆರಳಿ ರಂಗಪ್ಪ ಎಂಬವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಈ ವೇಳೆ ಸಿಎಂ ಕೊಟ್ಟಿರುವ ಭರವಸೆಯಲ್ಲಿ ಇದುವರೆಗೂ ಯಾವುದು ಈಡೇರಿಲ್ಲ. ಕರಗಡ ನೀರಾವರಿ ಯೋಜನೆಯನ್ನು ಇನ್ನೂ ಮುಗಿಸಿಲ್ಲ. ಗ್ರಾಮದ ಅಭಿವೃದ್ಧಿಗೆ ಒಂದು ಕೋಟಿ ಹಣವನ್ನು ನೀಡಿಲ್ಲ. ಅಲ್ಲದೆ ರಂಗಪ್ಪನಿಗೆ ಕೆಲಸ ಕೊಡುತ್ತೇನೆ ಎಂದು ಹೇಳಿದ್ದ ಸಿಎಂ ಇದೂವರೆಗೆ ಅವರಿಗೆ ಕೆಲಸ ನೀಡಿಲ್ಲ.

ತಣ್ಣೀರ್‍ಕುಳಿ(ಉತ್ತರ ಕನ್ನಡ)
2007ರ ಏಪ್ರಿಲ್‍ನಲ್ಲಿ ಉತ್ತರ ಕನ್ನಡ ಜಿಲ್ಲೆಯ ತಣ್ಣೀರ್‍ಕುಳಿ, ಕುಮಟಾಕ್ಕೆ ತೆರಳಿದ್ದ ಎಚ್‍ಡಿಕೆ ಹಾಲಕ್ಕಿ ಒಕ್ಕಲಿಗ ತಿಮ್ಮಣ್ಣಗೌಡರ ನಿವಾಸದಲ್ಲಿ ತಂಗಿದ್ದರು. ಇದೇ ಸಂದರ್ಭದಲ್ಲಿ ಅವರು ನೀಡಿದ್ದ ಭರವಸೆಗಳಲ್ಲಿ ಕುಡಿಯುವ ನೀರು, ರಸ್ತೆ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗಿದ್ದು, ರೈಲ್ವೇ ಓವರ್ ಬ್ರಿಡ್ಜ್, ಹೈಟೆನ್ಶನ್ ವಿದ್ಯುತ್ ತಂತಿ ಬದಲಾವಣೆ ಹಾಗೂ ಹಾಲಕ್ಕಿ ಗೌಡ, ಸಿದ್ದಿ ಜನಾಂಗವನ್ನು ಎಸ್‍ಸಿ ವರ್ಗಕ್ಕೆ ಸೇರಿಸುವ ಪ್ರಯತ್ನವಷ್ಟೇ ನಡೆದಿದ್ದು, ಇನ್ನೂ ಭರವಸೆ ಈಡೇರಿಲ್ಲ.

ಸುಗನಹಳ್ಳಿ(ಗದಗ)
2007ರ ಫೆಬ್ರವರಿ 28ರಂದು ಗದಗ ಜಿಲ್ಲೆಯ ಸುಗನಹಳ್ಳಿ, ಶಿರಹಟ್ಟಿಗೆ ಭೇಟಿ ಕೊಟ್ಟು ಕುಮಾರಸ್ವಾಮಿಯವರು ಬಸವರಾಜ ಹೊಂಬಾಳಿಮಠದಲ್ಲಿ ವಾಸ್ತವ್ಯ ಹೂಡಿದ್ದರು. ಇಲ್ಲಿ ಕೊಟ್ಟ ಮಾತಿನಲ್ಲಿ ಮೂಲಸೌಕರ್ಯ ಸೌಲಭ್ಯವೊಂದೇ ಈಡೇರಿದ್ದು, ಸುವರ್ಣ ಗ್ರಾಮ, ತುಂಗಭದ್ರಾ ನದಿಯಿಂದ ಕುಡಿಯುವ ನೀರು, ನೀರಾವರಿ ಯೋಜನೆ ಹಾಗೂ ಪಶು ಆಸ್ಪತ್ರೆ, ಸಾರ್ವಜನಿಕ ಆಸ್ಪತ್ರೆ ನಿರ್ಮಾಣ ಮಾಡಿಕೊಡುವುದಾಗಿ ಹೇಳಿದ್ದೇ ಹೊರತು ಇನ್ನೂ ಈಡೇರಿಲ್ಲ.

ಪೊತಲಕಟ್ಟೆ(ಬಳ್ಳಾರಿ)
2007ರ ಸೆಪ್ಟೆಂಬರ್ ನಲ್ಲಿ ಬಳ್ಳಾರಿ ಜಿಲ್ಲೆಯ ಪೊತಲಕಟ್ಟೆ, ಹೊಸಪೇಟೆಗೆ ತೆರಳಿದ್ದ ಎಚ್ ಡಿಕೆ ಗ್ರಾ.ಪಂ ಅಧ್ಯಕ್ಷ ದೇವೇಂದ್ರಪ್ಪ ಮನೆಯಲ್ಲಿ ತಂಗಿದ್ದರು. ಅಂದು ಕೊಟ್ಟ ಭರವಸೆಯಲ್ಲಿ ಸುವರ್ಣ ಗ್ರಾಮ ಯೋಜನೆ, ಮೂಲಸೌಕರ್ಯ ಹಾಗೂ ಸಮುದಾಯ ಭವನ ನಿರ್ಮಾಣವಾಗಿದ್ದು, ಪ್ರೌಢ ಶಾಲೆ ನಿರ್ಮಾಣ ಹಾಗೂ ಪಶು ಆಸ್ಪತ್ರೆಯ ಕನಸು ನನಸಾಗಿಲ್ಲ.

ಮುಷ್ಠಗಟ್ಟಿ(ಬಳ್ಳಾರಿ)
2017ರ ಆಗಸ್ಟ್ 25ರಂದು ಕುಮಾರಸ್ವಾಮಿ ಅವರು ಬಳ್ಳಾರಿ ಜಿಲ್ಲೆಯ ಮುಷ್ಠಗಟ್ಟಿ, ಕುರಗೋಡು ಗ್ರಾಮಕ್ಕೆ ಭೇಟಿ ಕೊಟ್ಟಿದ್ದರು. ಈ ವೇಳೆ ರೈತ ಮಾರೆಪ್ಪ ನಿವಾಸದಲ್ಲಿ ತಂಗಿದ್ದರು. ತಮ್ಮ ಗ್ರಾಮವಾಸ್ತವ್ಯದ ಸಂದರ್ಭದಲ್ಲಿ ಕೊಟ್ಟ ಮಾತುಗಳನ್ನೆಲ್ಲ ಎಚ್‍ಡಿಕೆ ಈಡೇರಿಸಿದ್ದಾರೆ. ಕೆರೆ ನಿರ್ಮಾಣ, ಸರ್ಕಾರಿ ಆಸ್ಪತ್ರೆ, ಮೊರಾರ್ಜಿ ಶಾಲೆ ಹಾಗೂ ಸುವರ್ಣ ಗ್ರಾಮ ಯೋಜನೆಯ ಭರವಸೆ ಈಡೇರಿಸಿದ್ದಾರೆ.

ಚಿಕ್ಕಮ್ಯಾಗೇರಿ(ಬಾಗಲಕೋಟೆ)
2006ರ ಅಕ್ಟೋಬರ್ ನಲ್ಲಿ ಬಾಗಲಕೋಟೆ ಜಿಲ್ಲೆಯ ಚಿಕ್ಕಮ್ಯಾಗೇರಿ, ಹುನಗುಂದದಲ್ಲಿ ಅನುದಾನಿತ ಪ್ರೌಢ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದ ಎಚ್ ಡಿಕೆ ಯಾವ ಭರವಸೆಯನ್ನು ಈಡೇರಿಸಿಲ್ಲ. ಸುವರ್ಣ ಗ್ರಾಮ ಹಾಗೂ ಮೂಲ ಸೌಕರ್ಯ ಒದಗಿಸಲಿಲ್ಲ.

ಉತ್ತೂರು (ಬಾಗಲಕೋಟೆ)
2006ರ ಆಗಸ್ಟ್ ನಲ್ಲಿ ಬಾಗಲಕೋಟೆ ಜಿಲ್ಲೆಯ ಉತ್ತೂರು ಹಾಗೂ ಆರ್‍ಬಿ ತಿಮ್ಮಾಪುರ ಸ್ವಗ್ರಾಮ ಮುಧೋಳಕ್ಕೆ ಭೇಟಿ ಕೊಟ್ಟಿರುವ ಎಚ್ ಡಿ ಕುಮಾರಸ್ವಾಮಿ ಸರ್ಕಾರಿ ಪ್ರೌಢಶಾಲೆ ವಾಸ್ತವ್ಯ ಹೂಡಿದ್ದರು. ಈ ವೇಳೆ ಕೊಟ್ಟ ಮಾತಿನಲ್ಲಿ ಶಾಲಾ ಮೈದಾನ, ಹೆಚ್ಚುವರಿ ಕಟ್ಟಡ ಹಾಗೂ ಹರಿಜನ-ಗಿರಿಜನ ಯೋಜನೆಯ ಕೆಲಸವಾಗಿದ್ದು, ಸಮುದಾಯ ಭವನ ಇನ್ನೂ ನಿರ್ಮಾಣವಾಗಿಲ್ಲ.

ಹಣಿಕುಣಿ(ಬೀದರ್)
2007ರ ಮೇ ತಿಂಗಳಲ್ಲಿ ಬೀದರ್ ಜಿಲ್ಲೆಯ ಹಣಿಕುಣಿ, ಹುಮ್ನಾಬಾದ್ ಗ್ರಾಮಕ್ಕೆ ತೆರಳಿದ್ದ ಎಚ್ ಡಿ ಕುಮಾರಸ್ವಾಮಿ, ಆತ್ಮಹತ್ಯೆ ಮಾಡಿಕೊಂಡಿದ್ದ ರೈತ ಉಸ್ಮಾನ್ ಸಾಬ್ ನಿವಾಸದಲ್ಲಿ ತಂಗಿದ್ದರು. ಈ ವೇಳೆ ಕೊಟ್ಟ ಮಾತಿನಲ್ಲಿ ರೈತನ ಸಂಪೂರ್ಣ ಸಾಲ ಮನ್ನಾವಾಗಿದೆ. ಆತ್ಮಹತ್ಯೆ ಮಾಡಿಕೊಂಡ ರೈತನ ಇಬ್ಬರು ಮಕ್ಕಳಿಗೆ ಶಿಕ್ಷಣ, ಮಾದರಿ ಶಾಲೆ, ಗ್ರಾಮದ ಸರ್ವಾಂಗೀಣ ಅಭಿವೃದ್ಧಿ ಇನ್ನೂ ಈಡೇರಿಲ್ಲ. ಆದರೆ ನೀರಿನ ಸಮಸ್ಯೆ ಈಡೇರಿಕೆಗೆ ಪ್ರಯತ್ನ ಮಾಡಿದ್ದಾರೆ.

ನಾವಳ್ಳಿ(ಧಾರವಾಡ)
2006ರ ಅಕ್ಟೋಬರ್ ತಿಂಗಳಲ್ಲಿ ಧಾರವಾಡದ ನಾವಳ್ಳಿ ಗ್ರಾಮಕ್ಕೆ ತೆರಳಿದ್ದ ಎಚ್‍ಡಿಕೆ, ಅಲ್ಲಾಬಿ ನದಾಫ್ ಎಂಬವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಸುವರ್ಣ ಗ್ರಾಮ ಯೋಜನೆ ಜಾರಿಯಾದ್ರೆ, ಸಂಪೂರ್ಣವಾಗಿ ಈಡೇರಿಲ್ಲ. ಬಸ್ ಸೌಕರ್ಯ, ಈದ್ಗಾ ಮೈದಾನ, ಪ್ರತ್ಯೇಕ ಗ್ರಾಪಂ, ಹೈಸ್ಕೂಲ್ ನಿರ್ಮಾಣವಾಗಿದೆ. ಆದರೆ ತಾನು ಕೊಟ್ಟ ಮಾತಿನಲ್ಲಿ ಆಸ್ಪತ್ರೆ, ಹಂದಿಗ್ಯಾನ್ ಹಳ್ಳಕ್ಕೆ ಸೇತುವೆ ನಿರ್ಮಾಣ ಕಾರ್ಯವಾಗಿಲ್ಲ.

ನೀಲೋಗಿಪುರ(ಕೊಪ್ಪಳ)
2007ರ ಜುಲೈ ತಿಂಗಳಲ್ಲಿ ಕೊಪ್ಪಳ ತಾಲೂಕಿನ ನೀಲೋಗಿಪುರಕ್ಕೆ ಭೇಟಿ ಕೊಟ್ಟಿರುವ ಎಚ್ ಡಿಕೆ ರಾಮನಗೌಡ ಡಂಬವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣವಾಗಿದ್ದು, ನೀರಾವರಿ ಅಭಿವೃದ್ಧಿ ಹಾಗೂ ಶೌಚಾಲಯ ವ್ಯವಸ್ಥೆಯ ಕನಸು ಕನಸಾಗಿಯೇ ಉಳಿದಿದೆ.

ಚಿತ್ರಾಲಿ(ರಾಯಚೂರು)
2007ರ ಜುಲೈನಲ್ಲಿ ರಾಯಚೂರು ಜಿಲ್ಲೆಯ ಚಿತ್ರಾಲಿ ಗ್ರಾಮಕ್ಕೆ ತೆರಳಿ ರೈತ ಯಲ್ಲಪ್ಪ ಮನೆಯಲ್ಲಿ ಎಚ್‍ಡಿಕೆ ತಂಗಿದ್ದರು. ಇಲ್ಲಿ ಸದ್ಯ ಯಾವ ಭರವಸೆಗಳೂ ಈಡೇರಿಲ್ಲ. ಕುಡಿಯುವ ನೀರು, ಮುಖ್ಯ ರಸ್ತೆ, ಬಸ್ ಸೌಲಭ್ಯ, ಪ್ರಾಥಮಿಕ ಶಾಲೆ ಅಭಿವೃದ್ಧಿ ಹಾಗೂ ಮೂಲಸೌಕರ್ಯವನ್ನು ಒದಗಿಸುವುದಾಗಿ ಹೇಳಿದ್ದು, ಇದುವರೆಗೂ ಯಾವುದೇ ಕಾರ್ಯ ಆರಂಭವಾಗಿಲ್ಲ.

ಸಿಎಂ ವಾಸ್ತವ್ಯ ಮಾಡಿದ್ದ ಯಲ್ಲಪ್ಪ ಮನೆ ಸ್ಥಿತಿಯೂ ಬದಲಾಗಿಲ್ಲ. ಆಶ್ರಯ ಮನೆಯ ವಾಸ ಮುಂದುವರಿದಿದೆ. ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಶೌಚಾಲಯವೂ ಕಾಣೆಯಾಗಿದೆ. ಸಿಎಂ ಬರುವ ವೇಳೆ ತಂದಿದ್ದ ಮಂಚವನ್ನ ಮರುದಿನವೇ ವಾಪಸ್ ತೆಗೆದುಕೊಂಡು ಹೋಗಿದ್ದಾರೆ.

ಮಧುರನಾಯಕನಹಳ್ಳಿ(ದಾವಣಗೆರೆ)
2007ರ ಮೇ ತಿಂಗಳಿನಲ್ಲಿ ದಾವಣಗೆರೆಯ ಮಧುರನಾಯಕನಹಳ್ಳಿ ತೆರಳಿದ್ದ ವೇಳೆ ಸಾಕೀಬಾಯಿ ಎಂಬವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಆ ಬಳಿಕ ಇಲ್ಲಿ ಕುಡಿಯುವ ನೀರು, ರಸ್ತೆ ನಿರ್ಮಾಣವಾಗಿದ್ದು, ಶಾಶ್ವತ ಸಾರಿಗೆ ಸೌಲಭ್ಯ ಹಾಗೂ ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿಯ ಭರವಸೆ ಈಡೇರಿಲ್ಲ.

ಯಡ್ಡಿಹಳ್ಳಿ(ಬಳ್ಳಾರಿ)
2007ರ ಅಕ್ಟೋಬರ್ ತಿಂಗಳಲ್ಲಿ ಬಳ್ಳಾರಿಯ ಯಡ್ಡಿಹಳ್ಳಿ, ಹರಪ್ಪನಹಳ್ಳಿಗೆ ತೆರಳಿದ್ದು, ತಳವಾರ್ ರಾಮಪ್ಪ ನಿವಾಸದಲ್ಲಿ ವಾಸ್ತವ್ಯ ಮಾಡಿದ್ದರು. ಇಲ್ಲಿ ಸದ್ಯ ಮೂಲಸೌಕರ್ಯ ಹಾಗೂ ಬಡವರಿಗೆ ಮನೆ ನಿರ್ಮಾಣವಾಗಿದೆ. ಆದರೆ ಹೈಸ್ಕೂಲ್ ಹಾಗೂ ಸರ್ಕಾರಿ ಆಸ್ಪತ್ರೆ ನಿರ್ಮಾಣವಾಗಿಲ್ಲ.

ಕನ್ನಳ್ಳಿ(ಯಾದಗಿರಿ)
2008ರ ಆಗಸ್ಟ್ ನಲ್ಲಿ ಯಾದಗಿರಿ ಜಿಲ್ಲೆಯ ಕನ್ನಳ್ಳಿ, ಹುಣಸಗಿಗೆ ಭೇಟಿ ಕೊಟ್ಟು ಕುಮಾರಸ್ವಾಮಿ ಅವರು ಮಲ್ಲಯ್ಯಸ್ವಾಮಿ ಹಿರೇಮಠ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದಾರೆ. ಸದ್ಯ ಇಲ್ಲಿ ಮೂಲಸೌಕರ್ಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದು, ಆರೋಗ್ಯ ಕೇಂದ್ರ ಹಾಗೂ ಗ್ರಂಥಾಲಯದ ಭರವಸೆ ಈಡೇರಿಲ್ಲ.

ರಟ್ಟೀಹಳ್ಳಿ(ಹಾವೇರಿ)
2006ರ ಅಕ್ಟೋಬರ್ ನಲ್ಲಿ ಹಾವೇರಿ ಜಿಲ್ಲೆಯ ಕಡೂರು, ರಟ್ಟೀಹಳ್ಳಿಗೆ ತೆರಳಿದ್ದು, ಜಗದೀಶ್ ಗೌಡ ಲಕ್ಕನಗೌಡರ ಮನೆಯಲ್ಲಿ ಕುಮಾರಸ್ವಾಮಿ ತಂಗಿದ್ದರು. ಸದ್ಯ ಇಲ್ಲಿ ಸುವರ್ಣ ಗ್ರಾಮ ಯೋಜನೆ, ರಸ್ತೆ ನಿರ್ಮಾಣ, ಆರೋಗ್ಯ ಕೇಂದ್ರ, ಕುಡಿಯುವ ನೀರಿನ ಸೌಲಭ್ಯ ದೊರೆತಿದೆ. ಆದರೆ ಎಸ್‍ಸಿ ಕಾಲನಿ ಸ್ಥಳಾಂತರ, ಕಾಲೇಜು ಸ್ಥಾಪನೆಯಾಗಿಲ್ಲ.

Leave a Reply

Your email address will not be published. Required fields are marked *