Connect with us

Belgaum

ನೀವು ಎಟಿಎಂ ಎದುರು ಸರತಿ ಸಾಲಿನಲ್ಲಿ ನಿಂತು ಹಣ ಪಡೆದುಕೊಳ್ಳುತ್ತೀರಾ? ಹಾಗಾದ್ರೆ ಈ ಸ್ಟೋರಿ ಓದಿ

Published

on

ಬೆಳಗಾವಿ/ಚಿಕ್ಕೋಡಿ: ಎಟಿಎಂ ಎದುರು ಸರತಿ ಸಾಲಿನಲ್ಲಿ ನಿಂತಾಗ ಕೈಯಲ್ಲಿ ನಿಮ್ಮ ಎಟಿಎಂ ಕಾರ್ಡ್ ಹಿಡಿದುಕೊಳ್ಳುವಾಗ ಎಚ್ಚರವಾಗಿರಿ. ಯಾಕಂದ್ರೆ ನಿಮ್ಮ ಎಟಿಎಂ ಮೇಲೆ ಇರುವ ನಂಬರ್ ನೋಡಿ ಹಾಗೂ ನಿಮ್ಮ ಜೊತೆಗೆ ಬಂದು ನಿಮ್ಮ ಪಿನ್ ಸಂಖ್ಯೆ ಕದ್ದು ನೋಡಿ ನಿಮ್ಮ ಹಣ ಕದಿಯುತ್ತಾರೆ.

ಇಬ್ಬರು ಯೋಧರು ಸೇರಿ 8 ಜನರ ಬ್ಯಾಂಕ್ ಅಕೌಂಟಿಗೆ ಕನ್ನ ಹಾಕಿ 3 ಲಕ್ಷಕ್ಕೂ ಅಧಿಕ ಹಣವನ್ನು ವಿವಿಧ ಎಟಿಎಂಗಳಿಂದ ಹಣ ವಿಥ್ ಡ್ರಾ ಮಾಡಿದ್ದ ಖತರ್ನಾಕ್ ಖದೀಮನನ್ನು ಹುಕ್ಕೇರಿ ಪೊಲೀಸರು ಬಂಧಿಸಿದ್ದಾರೆ. ಬಿಹಾರ ರಾಜ್ಯದ ಗಯಾ ಜಿಲ್ಲೆಯ ಡುಮರಿ ಗ್ರಾಮದ ರೋಹಿತೇಶ್ ಕುಮಾರ್ ಬಂಧಿತ ಆರೋಪಿ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ 8 ಗ್ರಾಹಕರ ಬ್ಯಾಂಕ್ ಅಕೌಂಟ್ ಹಣ ಹ್ಯಾಕ್ ಮಾಡಿ ಬೆಳಗಾವಿ, ಕೊಲ್ಲಾಪುರ, ಕೋಲ್ಕತ್ತಾ ಸೇರಿದಂತೆ ವಿವಿಧ ನಗರಗಳ ಎಟಿಎಂ ಕೇಂದ್ರಗಳಿಂದ ಈ ಖದೀಮ ಹಣ ಡ್ರಾ ಮಾಡಿಕೊಂಡಿದ್ದನು. ಈ ಖತರ್ನಾಕ್ ರೋಹಿತೇಶ್ ಎಟಿಎಂ ಕೇಂದ್ರಗಳ ಎದುರು ಸರತಿ ಸಾಲಿನಲ್ಲಿ ನಿಂತು ಎಟಿಎಂ ಸಂಖ್ಯೆಯನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಿದ್ದ. ಬಳಿಕ ಎಟಿಎಂ ಡ್ರಾ ಮಾಡುವ ಸಂದರ್ಭದಲ್ಲಿ ಕದ್ದು ಪಾಸ್‍ವರ್ಡ್ ನೋಡಿ ನಮೂದಿಸಿಕೊಳ್ಳುತ್ತಿದ್ದನು. ಬಳಿಕ ಅಲ್ಲಿಂದ ತೆರಳಿ ಆನ್ಲೈನ್ ಅಪ್ಲಿಕೇಶನ್ ಮೂಲಕ ಗ್ರಾಹಕರ ಕೊನೆಯ 4 ಎಟಿಎಂ ಸಂಖ್ಯೆ ಹಾಗೂ ಪಾಸ್ವರ್ಡ್ ಬಳಿಸಿ ಹಣ ಎಗಿರಿಸುತ್ತಿದ್ದನು.

ಹುಕ್ಕೇರಿ ತಾಲೂಕಿನ ಯೋಧರಾದ ಶಿವಾನಂದ ಮುರಗಿ ಅವರ 2 ತಿಂಗಳು ವೇತನ 80 ಸಾವಿರ ಹಾಗೂ ಮಾರುತಿ ನಾಶಿಪುಡಿ ಅವರ 34 ಸಾವಿರ ರೂ.ಗಳು ಸೇರಿದಂತೆ ಒಟ್ಟು 8 ಜನರ 3 ಲಕ್ಷಕ್ಕೂ ಅಧಿಕ ಹಣಕ್ಕೆ ಈ ಖದೀಮ ಕನ್ನ ಹಾಕಿದ್ದ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಹುಕ್ಕೇರಿ ಪೊಲೀಸರು ತನಿಖೆ ಆರಂಭಿಸಿದಾಗ ಇಂಥ ಪ್ರಕರಣದಲ್ಲೇ ಮಹಾರಾಷ್ಟ್ರ ಪೊಲೀಸರು ವ್ಯಕ್ತಿಯನ್ನು ಬಂಧಿಸಿರುವ ಮಾಹಿತಿ ಬರುತ್ತದೆ. ಆಗ ಹುಕ್ಕೇರಿ ಪೊಲೀಸರು ಮಹಾರಾಷ್ಟ್ರ ಪೊಲೀಸರನ್ನು ಸಂಪರ್ಕಿಸಿದಾಗ ಹಣ ಕಳ್ಳತನ ಮಾಡಿದ್ದಾಗಿ ಕಳ್ಳ ರೋಹಿತೇಶ್ ಒಪ್ಪಿಕೊಂಡಿದ್ದಾನೆ.

ಅಲ್ಲದೆ ಎರಡು ಬಾರಿ ಈತ ಹುಕ್ಕೆರಿಗೆ ಬಂದು ಜನರ ಎಟಿಎಂ ಸಂಖ್ಯೆ ಹಾಗೂ ಪಿನ್ ನಮೂದಿಸಿಕೊಂಡು ಹೋಗಿರುವುದಾಗಿ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ. ಸದ್ಯ ಈತ ಮಹರಾಷ್ಟ್ರ ಜೈಲಿನಲ್ಲಿ ಇದ್ದು ಹುಕ್ಕೇರಿ ಪೊಲೀಸರು ಈತನನ್ನು ಹುಕ್ಕೇರಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ಹುಕ್ಕೇರಿ ಪೊಲೀಸ್ ಠಾಣೆ ಹಾಗೂ ಮಹರಾಷ್ಟ್ರ ರಾಜ್ಯದ ಕೊಲ್ಲಾಪುರ ಪೊಲೀಸ್ ಠಾಣೆಯಲ್ಲಿ ಖದೀಮನ ವಿರುದ್ಧ ಪ್ರಕರಣ ದಾಖಲಾಗಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv