Connect with us

Latest

ಜಡೇಜಾ ಬುಲೆಟ್ ಥ್ರೋಗೆ ಸ್ಮಿತ್ ರನೌಟ್ – ಮತ್ತೆ ಮಿಂಚಿದ ಗಿಲ್

Published

on

ಸಿಡ್ನಿ: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಸಿಡ್ನಿಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ 2ನೇ ದಿನವಾದ ಇಂದು ರವೀಂದ್ರ ಜಡೇಜಾ ಬುಲೆಟ್ ಥ್ರೋ ಮಾಡುವ ಮೂಲಕ ಶತಕದ ಆಟವಾಡಿ ಮುನ್ನುಗುತ್ತಿದ್ದ ಸ್ಟೀವನ್ ಸ್ಮಿತ್ ಅವರನ್ನು ರನೌಟ್ ಮಾಡಿದ್ದಾರೆ. ಈ ವೇಗವಾದ ರನೌಟ್‍ನಿಂದಾಗಿ ತಾನೂ ವಿಶ್ವದ ಅತ್ಯುತ್ತಮ ಫೀಲ್ಡರ್ ಎಂಬುದನ್ನು ಜಡೇಜಾ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

ಸಿಡ್ನಿ ಕ್ರಿಕೆಟ್ ಅಂಗಳದಲ್ಲಿ ಮೊದಲ ದಿನದ ಮಳೆಯ ನಡುವೆ ಉತ್ತಮ ಮೊತ್ತ ಕಲೆಹಾಕಿದ್ದ ಆಸೀಸ್ ದಿನದಂತ್ಯಕ್ಕೆ 166 ರನ್ ಮಾಡಿ 2 ವಿಕೆಟ್ ಕಳೆದುಕೊಂಡಿತ್ತು. ಅಲ್ಲಿಂದ 2 ದಿನದಾಟ ಆರಂಭಿಸಿದ ಆಸ್ಟ್ರೇಲಿಯಾ ಲಬುಶೇನ್, ಮತ್ತು ಸ್ಟೀವನ್ ಸ್ಮಿತ್ ಅವರ ಉತ್ತಮ ಜೊತೆಯಾಟದಿಂದಾಗಿ 338 ರನ್ ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಆಲೌಟ್ ಆಗಿದೆ. ನಿನ್ನೆಯ 166 ರನ್‍ಗೆ ಇಂದು 172ರನ್ ಸೇರಿಸಿ ಆಸ್ಟ್ರೇಲಿಯಾ ಆಲೌಟ್ ಆಯ್ತು.

ಮೊದಲ ದಿನದಾಟದಲ್ಲಿ 67 ರನ್‍ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಮಾರ್ನಸ್ ಲಬುಶೇನ್ 91 ರನ್(196 ಎಸೆತ, 11 ಬೌಂಡರಿ) ಹೊಡೆದು ಶತಕ ವಂಚಿತರಾದರೂ ಇನ್ನೂ 31 ರನ್ ಮಾಡಿ ಲಬುಶೇನ್‍ಗೆ ಜೊತೆಯಾಗಿದ್ದ ಸ್ಮಿತ್ 2ನೇ ದಿನ ಶತಕ ಸಿಡಿಸಿದರು.

ಆಸ್ಟ್ರೇಲಿಯಾದ ರನ್ ಹೆಚ್ಚಿಸಲು ಬ್ಯಾಟ್ ಬಿಸುತ್ತಿದ್ದ ಸ್ಮಿತ್ 130 ರನ್(226 ಎಸೆತ, 16 ಬೌಂಡರಿ) ಗಳಿಸಿ ಆಟವಾಡುತ್ತಿದ್ದರು. 105ನೇ ಓವರ್ ಎಸೆಯಲು ದಾಳಿಗಿಳಿದ ಬುಮ್ರಾರ 4ನೇ ಎಸೆತವನ್ನು ಆಫ್ ಸೈಡ್‍ನತ್ತ ಹೊಡೆಯಲು ಮುಂದಾದ ಸ್ಮಿತ್ ಬ್ಯಾಟ್‍ಗೆ ಇನ್ ಸೈಡ್ ಎಡ್ಜ್ ಆದ ಚೆಂಡು ಸ್ವೇರ್ ಲೆಗ್‍ನತ್ತ ಹೋಗಿ ಜಡೇಜಾ ಅವರ ಕೈ ಸೇರಿತ್ತು. ಆದರೂ ಎರಡು ರನ್ ಕದಿಯುವ ಸಾಹಸಕ್ಕಿಳಿದ ಸ್ಮಿತ್, ಜಡೇಜಾ ಅವರ ಅತ್ಯುತ್ತಮ ಕ್ಷೇತ್ರ ರಕ್ಷಣೆಗೆ ದಂಡ ತೆರಬೇಕಾಯಿತು. ಇದರೊಂದಿಗೆ ಸ್ಮಿತ್ ಅವರ ಭರ್ಜರಿ ಇನ್ನಿಂಗ್ಸ್ ಕೊನೆಗೊಂಡಿತು.

ಭಾರತದ ಪರ ಫೀಲ್ಡಂಗ್ ಜೊತೆಗೆ ಬೌಲಿಂಗ್‍ನಲ್ಲಿ ಮಿಂಚಿದ ರವೀಂದ್ರ ಜಡೇಜಾ 4 ವಿಕೆಟ್ ಕಿತ್ತರೆ, ಬುಮ್ರಾ ಮತ್ತು ಸೈನಿ ತಲಾ ಎರಡು ವಿಕೆಟ್ ಪಡೆದರು, ಸಿರಾಜ್ ಒಂದು ವಿಕೆಟ್ ಕಿತ್ತರು.

ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ಮೊದಲ ವಿಕೆಟ್‍ಗೆ 70 ರನ್ ಪೇರಿಸಿತ್ತು ಉತ್ತಮವಾಗಿ ಆಡುತ್ತಿದ್ದ ರೋಹಿತ್ ಶರ್ಮಾ 26 ರನ್‍ಗಳಿಸಿ ಔಟಾಗಿ ನಿರಾಸೆ ಮೂಡಿಸಿದರೆ ಇನ್ನೂರ್ವ ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ ತಮ್ಮ ಮೊದಲ ಅರ್ಧಶತಕ ಸಿಡಿಸಿ ಪ್ಯಾಟ್ ಕಮಿನ್ಸ್‍ಗೆ ವಿಕೆಟ್ ಒಪ್ಪಿಸಿದರು. ಎರಡನೇ ದಿನದಾಟದ ಅಂತ್ಯದ ವೇಳೆ ಭಾರತ 96 ರನ್ ಮಾಡಿ 2 ವಿಕೆಟ್ ಕಳೆದುಕೊಂಡಿದೆ 9 ರನ್ ಮಾಡಿರುವ ಪೂಜಾರ ಮತ್ತು 5 ರನ್ ಗಳಿಸಿ ರಹಾನೆ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

 

Click to comment

Leave a Reply

Your email address will not be published. Required fields are marked *

www.publictv.in