Sunday, 21st July 2019

ರವಿ ಹಿಸ್ಟರಿ: ನಾಯಕಿ ಪಲ್ಲವಿ ರಾಜು ಬಗ್ಗೆ ನಿಮಗೆ ಗೊತ್ತಿಲ್ಲದ ಸ್ಟೋರಿ!

ಮಧುಚಂದ್ರ ನಿರ್ದೇಶನ ಮಾಡಿರುವ ರವಿ ಹಿಸ್ಟರಿ ಚಿತ್ರ ಈ ವಾರ ತೆರೆ ಕಾಣುತ್ತಿದೆ. ಬರಿಗಣ್ಣಿಗೆ ಕಾಣಿಸದ ಭೂಗತ ಜಗತ್ತಿನ ಕಥಾ ಹಂದರದ ಸುಳಿವಿನೊಂದಿಗೆ ಹೊಸತೇನೋ ಇದೆ ಅನ್ನೋ ಆಕರ್ಷಣೆಯನ್ನು ಈ ಚಿತ್ರ ಪ್ರೇಕ್ಷಕರಲ್ಲಿ ಹುಟ್ಟಿಸಿದೆ. ಇಂಥಾದ್ದೊಂದು ಹೊಸಾ ಅಲೆಯ ಚಿತ್ರದ ನಾಯಕಿಯಾಗಿ ವಿಭಿನ್ನವಾದೊಂದು ಪಾತ್ರದ ಮೂಲಕ ಪಲ್ಲವಿ ರಾಜು ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.

ಪಲ್ಲವಿ ರಾಜು ಅಂದರೆ ಪ್ರೇಕ್ಷಕರು ಮಂತ್ರಂ ಎಂಬ ಚಿತ್ರದಲ್ಲಿನ ಮನಸೆಳೆಯುವ ನಟನೆಯನ್ನು ನೆನಪಿಸಿಕೊಳ್ಳುತ್ತಾರೆ. ಮತ್ತೊಂದಷ್ಟು ಭಿನ್ನ ಪಾತ್ರಗಳು ಕಣ್ಮುಂದೆ ಕದಲುತ್ತವೆ. ಒಟ್ಟಾರೆಯಾಗಿ ಪಲ್ಲವಿ ಎಂಥಾ ಪಾತ್ರಗಳಿಗಾದರೂ ಜೀವ ತುಂಬಬಲ್ಲ ಪ್ರತಿಭಾವಂತ ನಟಿಯಾಗಿ ಕನ್ನಡದ ಪ್ರೇಕ್ಷಕರ ಮನದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈವರೆಗೂ ಪ್ರಯೋಗಾತ್ಮಕವಾದ ಚಿತ್ರಗಳಲ್ಲಿಯೇ ನಟಿಸುತ್ತಾ ಬಂದಿರುವ ಪಲ್ಲವಿ ರವಿ ಹಿಸ್ಟರಿಯ ಮೂಲಕ ಕಮರ್ಶಿಯಲ್ ಸಿನಿಮಾ ಮೂಲಕವೂ ಸೈ ಅನ್ನಿಸಿಕೊಳ್ಳೋ ಕಾತರದಿಂದಿದ್ದಾರೆ.

ರವಿ ಹಿಸ್ಟರಿ ಚಿತ್ರದಲ್ಲಿಯೂ ಪಲ್ಲವಿ ರಾಜು ಅವರಿಗೆ ನಟನೆಗೆ ಅವಕಾಶವಿರುವ ಸವಾಲಿನ ಪಾತ್ರವೇ ಸಿಕ್ಕಿದೆ. ಅವರಿಲ್ಲಿ ಎಸ್‍ಐ ಅನಿತ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಖುದ್ದು ಅವರಿಗೇ ಅಚ್ಚರಿ ಹುಟ್ಟಿಸಿದ್ದ ಪಾತ್ರವಿದು. ಹಾಗಿದ್ದ ಮೇಲೆ ಈ ಪಾತ್ರವೇ ಪ್ರೇಕ್ಷಕರನ್ನೂ ಕೂಡಾ ಬೆರಗಾಗಿಸೋದರಲ್ಲಿ ಯಾವ ಸಂದೇಹವೂ ಇಲ್ಲ.

ಪಲ್ಲವಿ ರಾಜು ಕ ಎಂಬ ಸಿನಿಮಾದ ಮೂಲಕವೇ ನಟಿಯಾಗಿ ಪಾದಾರ್ಪಣೆ ಮಾಡಿದ್ದವರು. ಆರಂಭ ಕಾಲದಿಂದಲೂ ನಟಿಯಾಗ ಬೇಕೆಂಬ ಆಸೆ ಹೊಂದಿದ್ದ ಪಲ್ಲವಿಗೆ ಪೂರಕ ವಾತಾವರಣವನ್ನು ಸೃಷ್ಟಿಸಿದ್ದದ್ದು ಅವರ ತಂದೆ. ಅವರಿಗೂ ಕೂಡಾ ಸಿನಿಮಾ ನೋಡೋ ಹವ್ಯಾಸವಿತ್ತು. ಈ ಕಾರಣದಿಂದಲೇ ಪಲ್ಲವಿ ಅವರಿಗೂ ಒಳ್ಳೊಳ್ಳೆ ಚಿತ್ರಗಳನ್ನು ಕಣ್ತುಂಬಿಕೊಳ್ಳೋ ಅವಕಾಶವೂ ಸಿಗುತ್ತಿತ್ತು. ಈ ಮೂಲಕವೇ ಕಲ್ಪನಾ, ಆರತಿ, ಮಂಜುಳಾ, ಲಕ್ಷ್ಮಿ ಮುಂತಾದ ನಟಿಯರನ್ನು ಆರಾಧಿಸಲಾರಂಭಿಸಿದ್ದ ಅವರಿಗೆ ತಾನೂ ಈ ನಟಿಯರಂತಾಗಬೇಕೆಂಬ ಕನಸು ಮೊಳೆತುಕೊಂಡಿತ್ತು. ಈ ಕಾರಣದಿಂದಲೇ ಈವತ್ತಿಗೂ ರಂಗನಾಯಕಿಯಂಥಾ ಸಿನಿಮಾದಲ್ಲಿ ನಟಿಸಬೇಕೆಂಬ ಮಹದಾಸೆ ಪಲ್ಲವಿಯವರಲ್ಲಿದೆ.

ಆದರೆ ಇಂಥಾ ಆಸಕ್ತಿಗಳಿಗೆ ಅನುಗುಣವಾಗಿಯೇ ಬದುಕು ಸಾಗೋದಿಲ್ಲ. ಪರೀಕ್ಷೆಯೆಂಬಂತೆ ಜೀವನ ಬೇರಾವುದೋ ಕ್ಷೇತ್ರಕ್ಕೆ ಎತ್ತಿ ಒಗೆದು ಬಿಡುತ್ತೆ. ಒಳಗಿರೋ ಆಸಕ್ತಿ ಬಲವಾಗಿದ್ದರೆ ಖಂಡಿತಾ ಅದುವೇ ಸೆಳೆದುಕೊಂಡು ಬಿಡುತ್ತೆ. ಈ ಮಾತಿಗೆ ಪಲ್ಲವಿ ತಾಜಾ ಉದಾಹರಣೆ. ಯಾಕೆಂದರೆ ನಟಿಯಾಗಬೇಕೆಂಬ ಆಸೆ ಇದ್ದರೂ ಅವರು ಓದಿಕೊಂಡಿದ್ದು, ಕೆಲಸ ದಕ್ಕಿಸಿಕೊಂಡಿದ್ದು ತದ್ವಿರುದ್ಧ ಕ್ಷೇತ್ರದಲ್ಲಿ. ಬಿಕಾಂ ಓದಿಯಾದ ಮೇಲೆ ಬ್ಯಾಂಕೊಂದರಲ್ಲಿ ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದ ಪಲ್ಲವಿ ರಾಜು, ಅದರ ನಡುವೆಯೂ ನಾಟಕ ತಂಡವೊಂದರಲ್ಲಿ ಸಕ್ರಿಯರಾಗಿದ್ದರು. ರಂಗಭೂಮಿಯಲ್ಲಿಯೇ ನಟಿಯಾಗಿ ರೂಪುಗೊಂಡಿದ್ದರು.

ಅದರ ನಡುವಲ್ಲಿಯೇ ಕ ಎಂಬ ಸಿನಿಮಾದಲ್ಲಿ ಅವಕಾಶ ಸಿಕ್ಕಿ ಕೆಲಸದ ಜೊತೆಗೇ ಚಿತ್ರೀಕರಣ ಮುಗಿಸಿಕೊಂಡಿದ್ದ ಪಲ್ಲವಿ, ಆ ಬಳಿಕ ಕೆಲಸ ಬಿಟ್ಟು ಪೂರ್ಣವಾಗಿ ನಟನೆಯಲ್ಲಿಯೇ ತೊಡಗಿಸಿಕೊಂಡಿದ್ದರು. ಅವರೀಗ ಹತ್ತು ಚಿತ್ರಗಳಲ್ಲಿ ನಟಿಸಿದ್ದಾರೆ. ಅದರಲ್ಲೊಂದಷ್ಟು ಬಿಡುಗಡೆಗೆ ರೆಡಿಯಾಗಿವೆ. ರವಿ ಹಿಸ್ಟರಿ ಈ ವಾರವೇ ಬಿಡುಗಡೆಯಾಗಲಿದೆ. ಈ ಚಿತ್ರ ಈಗಾಗಲೇ ಜನರಲ್ಲೊಂದು ನಿರೀಕ್ಷೆ ಚಿಗುರಿಸಿದೆ. ದೊಡ್ಡ ಮಟ್ಟದಲ್ಲಿಯೇ ಕ್ರೇಜ್ ಸೃಷ್ಟಿಸಿದೆ. ಈ ಮೂಲಕವೇ ಪಲ್ಲವಿಯವರ ಪಾಲಿಗೆ ಇನ್ನಷ್ಟು ಅವಕಾಶಗಳು ಕೂಡಿ ಬರುವುದು ಖಂಡಿತ!

 

Leave a Reply

Your email address will not be published. Required fields are marked *