Monday, 16th September 2019

Recent News

ಸಾನ್ವಿ ಟೀಚರ್ ರಶ್ಮಿಕಾ ಮಂದಣ್ಣ ‘ಗೀತಾ ಗೋವಿಂದಂ’ ಟೀಸರ್ ಸೂಪರ್ ಹಿಟ್!

ಹೈದರಾಬಾದ್: ಕಿರಿಕ್ ಪಾರ್ಟಿಯಲ್ಲಿ ಸಿನಿಮಾದಲ್ಲಿ ಟೀಚರ್ ಆಗಿ ಕನ್ನಡಿಗರ ಮನಗೆದ್ದ ರಶ್ಮಿಕಾ ಮಂದಣ್ಣ ನಟನೆಯ ತೆಲುಗು ಸಿನಿಮಾ `ಗೀತಾ ಗೋವಿಂದಂ’ ಟೀಸರ್ ರಿಲೀಸ್ ಆಗಿದೆ. ಸಿನಿಮಾದ ಟೀಸರ್ ಬಿಡುಗಡೆಯಾದ 7 ಗಂಟೆಯಲ್ಲಿ 14 ಲಕ್ಷ ವ್ಯೂ ಆಗಿದ್ದು, ನಂ.1 ಟ್ರೆಂಡಿಂಗ್ ನಲ್ಲಿದೆ. ಕನ್ನಡದ ವರನಟ ರಾಜ್ ಕುಮಾರ್ ಅವರ ಎಂದೆಂದೂ ನಿನ್ನನು ಮರೆತು ನಾನಿರಲಾರೆ… ಹಾಡಿನ ತೆಲುಗು ಟ್ಯೂನ್ ನೊಂದಿಗೆ ಟೀಸರ್ ಆರಂಭವಾಗುತ್ತದೆ.

ಬ್ಲಾಕ್ ಆಂಡ್ ವೈಟ್ ದೃಶ್ಯಗಳಿಂದ ಆರಂಭವಾಗುವ ದೃಶ್ಯಗಳಲ್ಲಿ ರಶ್ಮಿಕಾ ಮಂದಣ್ಣ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಅವರಿಗೆ ಜೋಡಿಯಾಗಿರುವ ನಟ ವಿಜಯ್ ದೇವರಕೊಂಡ ಜೋಡಿ ಅಭಿಮಾನಿಗಳಿಗೆ ಇಷ್ಟವಾಗುತ್ತದೆ. ಅಪ್ಪಟ ಹಳ್ಳಿ ಯುವತಿಯ ದೃಶ್ಯದಲ್ಲಿ ಪತಿ, ಪತ್ನಿಯ ಪ್ರಣಯದ ದೃಶ್ಯಗಳು ಮೂಡಿ ಬಂದಿದೆ. ಆದರೆ ಮರುಕ್ಷಣದಲ್ಲಿ ಇದು ಹೀರೋ ಕನಸು ಮಾತ್ರ ಎಂಬುದನ್ನು ರಿವೀಲ್ ಮಾಡಲಾಗಿದೆ. ಇದರೊಂದಿಗೆ ರಶ್ಮಿಕಾ ಮಂದಣ್ಣ ಹೀರೋಗೆ ನೀಡುವ ಖಡಕ್ ವಾರ್ನಿಂಗ್ ನೋಡುಗರಿಗೆ ಇಷ್ಟವಾದರೆ, ಚಿತ್ರದ ನಾಯಕ ತನ್ನ ಪ್ರೇಯಸಿಯನ್ನು ಗೆಲ್ಲಲು ಪಡುವ ಪ್ರಯತ್ನ ನಗು ಮೂಡಿಸುತ್ತದೆ.

ರೊಮ್ಯಾಂಟಿಕ್, ಕಾಮಿಡಿ ಎಳೆಯೊಂದಿಗೆ ಯುವ ಮನಸ್ಸುಗಳ ಪ್ರೇಮ ಕಥೆಯನ್ನು ಚಿತ್ರ ಹೊಂದಿದೆ. ಮೇಡಂ ಮೇಡಂ ಎಂದು ರಶ್ಮಿಕಾ ಹಿಂದೆ ಸುತ್ತುವ ಪಾತ್ರದಲ್ಲಿ ವಿಜಯ್ ದೇವರಕೊಂಡ ಗಮನಸೆಳೆದರೆ, ಖಡಕ್ ಹುಡುಗಿಯ ಪಾತ್ರದಲ್ಲಿ ರಶ್ಮಿಕಾ ಮಿಂಚಿದ್ದಾರೆ. ಟಾಲಿವುಡ್ ನಲ್ಲಿ ಸಾಕಷ್ಟು ಅವಕಾಶ ಪಡೆದಿರುವ ರಶ್ಮಿಕಾ ಮಂದಣ್ಣ ಅವರಿಗೆ ಇದು ತೆಲುಗಿನ 2ನೇ ಸಿನಿಮಾ ಆಗಿದೆ. ಈ ಹಿಂದೆ ರಶ್ಮಿಕಾ ತೆಲುಗಿನ ಚಲೋ ಸಿನಿಮಾದ ಮೂಲಕ ಟಾಲಿವುಡ್ ನಲ್ಲಿ ಹೆಚ್ಚಿನ ಅಭಿಮಾನಿಗಳನ್ನು ಗಳಿಸಿದ್ದರು. ಜೊತೆಗೆ ಗಣೇಶ್ ಜೊತೆ ಚಮಕ್ ಚಿತ್ರದಲ್ಲೂ ಕಾಣಿಸಿಕೊಂಡಿದ್ದರು.

ಚಿತ್ರ ಪರಶುರಾಮ್ ನಿರ್ದೇಶನದಲ್ಲಿ ಮೂಡಿಬಂದಿದ್ದು, ಗೋಪಿ ಸುಂದರ್ ಸಂಗೀತ ನೀಡಿದ್ದಾರೆ. ಟೀಸರ್ ಮೂಲಕವೇ ಸಿನಿಮಾ ಸೂಪರ್ ಹಿಟ್ ಆಗುವ ಭರವಸೆ ಮೂಡಿಸಿದ್ದು, ಚಿತ್ರದ ಆಡಿಯೋ ಜುಲೈ 29ರಂದು ರಿಲೀಸ್ ಆಗಲಿದೆ.

Leave a Reply

Your email address will not be published. Required fields are marked *