Connect with us

Cricket

ಸೋಲಿನಿಂದ ಕರ್ನಾಟಕ ಪಾರು- ಹೋರಾಟದೊಂದಿಗೆ ಪಂದ್ಯ ಡ್ರಾ

Published

on

ರಾಜ್‍ಕೋಟ್: ಸೋಲಿನ ಅಂಚಿನಲ್ಲಿದ್ದ ಕರ್ನಾಟಕ ತಂಡ ಹೋರಾಟದೊಂದಿಗೆ ಸೌರಾಷ್ಟ್ರದ ವಿರುದ್ಧದ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಕೊನೆಯ ದಿನವಾದ ಇಂದು ಕರ್ನಾಟಕದ ಬ್ಯಾಟ್ಸ್‌ಮನ್‌ಗಳು ಉತ್ತಮ ಬ್ಯಾಟಿಂಗ್ ನಡೆಸಿ ಪಂದ್ಯವನ್ನು ಡ್ರಾ ಮಾಡಿಕೊಂಡರು.

380ರನ್ ಹಿನ್ನಡೆಯೊಂದಿಗೆ 4ನೇ ದಿನ ಪ್ರಾರಂಭಿಸಿದ ಕರ್ನಾಟಕ ಮೊದಲ ವಿಕೆಟ್‍ಗೆ ಸಮರ್ಥ್ ಹಾಗೂ ರೋಹನ್ ಕದಂ ಭರ್ಜರಿ ಬ್ಯಾಟಿಂಗ್‍ನಿಂದ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್‍ಗೆ ಇಬ್ಬರು 96 ರನ್ ಸೇರಿಸಿ ಕರ್ನಾಟಕಕ್ಕೆ ಭದ್ರ ಬುನಾದಿ ಹಾಕಿದರು. ರೋಹನ್ ಕದಂ 42ರನ್ (132 ಎಸೆತ, 5 ಬೌಂಡರಿ) ಹೊಡೆದರೆ ಸಮರ್ಥ್ 74 ರನ್ (159 ಎಸೆತ, 10 ಬೌಂಡರಿ) ಸಿಡಿಸಿದರು.

ಬಳಿಕ ಮೈದಾನಕ್ಕಿಳಿದ ದೇವದತ್ತ ಪಡಿಕ್ಕಲ್ ಬ್ಯಾಟಿಂಗ್ ಮಾಡಿ ತಂಡಕ್ಕೆ ಆಸರೆಯಾದರು. ದೇವದತ್ತ ಔಟಾಗದೆ 53 ರನ್ (133 ಎಸೆತ, 9 ಬೌಂಡರಿ) ಸಿಡಿಸಿದರು. ಉಳಿದಂತೆ ಕೆ.ಸಿದ್ಧಾರ್ಥ್ 19 ರನ್, ಪವನ್ ದೇಶಪಾಂಡೆ 12 ರನ್ ಮತ್ತು ಶ್ರೇಯಸ್ ಗೋಪಾಲ್ 13 ರನ್ ಗಳಿಸಿದರು. ಅಂತಿಮವಾಗಿ ಕರ್ನಾಟಕ ಎರಡನೇ ಇನ್ನಿಂಗ್ಸ್ ನಲ್ಲಿ 89 ಓವರ್‍ಗಳಿಗೆ 4 ವಿಕೆಟ್ ಕಳೆದುಕೊಂಡು 220 ರನ್ ಗಳಿಸಿ ಪಂದ್ಯ ಡ್ರಾ ಮಾಡಿಕೊಂಡಿತು. ಸೌರಾಷ್ಟ್ರದ ಪರ ಜಡೇಜಾ 2 ವಿಕೆಟ್ ಪಡೆದರು.

ಮೊದಲ ಇನ್ನಿಂಗ್ಸ್ ನಲ್ಲಿ ಭರ್ಜರಿ ದ್ವಿಶತಕ ಬಾರಿಸಿದ ಚೇತೇಶ್ವರ ಪೂಜಾರ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂದ್ಯ ಡ್ರಾ ಆದ ಹಿನ್ನೆಲೆಯಲ್ಲಿ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ಸೌರಾಷ್ಟ್ರಕ್ಕೆ 3 ಅಂಕ ಮತ್ತು ಕರ್ನಾಟಕಕ್ಕೆ 1 ಅಂಕ ಲಭಿಸಿದೆ.

ಸ್ಕೋರ್ ವಿವರ:
ಸೌರಾಷ್ಟ್ರ ಮೊದಲ ಇನ್ನಿಂಗ್ಸ್ 581/7 ಡಿಕ್ಲೇರ್
ಕರ್ನಾಟಕ ಮೊದಲ ಇನ್ನಿಂಗ್ಸ್ 171 ಆಲೌಟ್
ಎರಡನೇ ಇನ್ನಿಂಗ್ಸ್ 220/4